ಪತ್ತಿರ್ :ಬ್ಯಾರಿಗಳ ಯೂನಿಕ್ ತಿಂಡಿ

Update: 2019-12-01 05:20 GMT

         ಇಸ್ಮತ್ ಪಜೀರ್

ಬಿರಿಯಾನಿ ಮುಸ್ಲಿಮರ ಸ್ವಂತ ಡಿಶ್. ಅಂದರೆ ಜಗತ್ತಿಗೆ ಬಿರಿ ಯಾನಿಯನ್ನು ಪರಿಚಯಿಸಿದವರೇ ಮುಸ್ಲಿಮರು. ಈಗ ಅದು ಎಲ್ಲ ಮಾಂಸಾಹಾರಿ ಸಮುದಾಯಗಳ ಅಡುಗೆ ಮನೆಗೆ ಪ್ರವೇಶಿಸಿ ಬಿಟ್ಟಿದೆ. ನೈ ಚೋರು ಅರ್ಥಾತ್ ತುಪ್ಪದೂಟ ಅಥವಾ ಗೀ ರೈಸ್ ಕೂಡಾ ಮುಸ್ಲಿಮರ ಅನುಪಮ ಡಿಶ್‌ಗಳಲ್ಲೊಂದು. ಆದರೆ ಅದರ ಕರ್ತೃಗಳು ದಕ್ಷಿಣ ಕನ್ನಡದ ಬ್ಯಾರಿಗಳು. ಅದೂ ಕೂಡಾ ಬಿರಿಯಾನಿಯಂತೆಯೇ ಎಲ್ಲ ಮಾಂಸಾಹಾರಿ ಸಮುದಾಯಗಳ ಅಡುಗೆ ಮನೆ ಹೊಕ್ಕು ಬಿಟ್ಟಿದೆ.ಆದರೆ ಬ್ಯಾರಿ ಮುಸ್ಲಿಮರ ಯೂನಿಕ್ ತಿಂಡಿಯಾದ ಪತ್ತಿರ್ ಮಾತ್ರ ಇನ್ನೂ ಅಷ್ಟಾಗಿ ಇತರ ಸಮುದಾಯಗಳಲ್ಲಿ ಜನಪ್ರಿಯವಾಗಿಲ್ಲ. (ಪತ್ತಿರ್ ಎಂಬ ತಿಂಡಿಯನ್ನು ಬ್ಯಾರಿ ಗಳಲ್ಲದೇ ಕೇರಳ ಮುಸ್ಲಿಮರೂ ಮಾಡುತ್ತಾರೆ)

ದೋಸೆ, ನೀರ್ ದೋಸೆ, ಚಪಾತಿ, ಸೇಮೆ, ಕಡುಬು (ಪುಂಡಿ) ಇವೆಲ್ಲಾ ಮಂಗಳೂರಿನ ಎಲ್ಲ ಸಮುದಾಯಗಳವರೂ ಮಾಡುವ ಕಾಮನ್ ತಿಂಡಿ. ಆದರೆ ಪತ್ತಿರ್ ಮಾತ್ರ ಹಿಂದಿ ನಿಂದಲೂ ಅಪ್ಪಟ ಬ್ಯಾರಿ ತಿಂಡಿ. ಮತ್ತು ಅದು ಬ್ಯಾರಿಗಳದ್ದೇ ಯೂನಿಕ್ ತಿಂಡಿ. ಸಾಮಾನ್ಯವಾಗಿ ಕನ್ನಡದಲ್ಲಿ ಅದಕ್ಕೆ ರೊಟ್ಟಿ ಎನ್ನಲಾಗುತ್ತದಾದರೂ ರೊಟ್ಟಿ ಎಂದರೆ ಅದೊಂದು ಕಾಮನ್ ಹೆಸರು. ಜೋಳದ ರೊಟ್ಟಿ, ರಾಗಿ ರೊಟ್ಟಿ, ಗೋಧಿ ರೊಟ್ಟಿ ಇವೆಲ್ಲಕ್ಕೂ ರೊಟ್ಟಿ ಎಂದೇ ಹೇಳುತ್ತಾರೆ. ಆದುದರಿಂದ ಪತ್ತಿರನ್ನು ಅಕ್ಕಿ ರೊಟ್ಟಿ ಎನ್ನುತ್ತಾರೆ. ನಾನು ಅದೆಷ್ಟೋ ಬಾರಿ ಯೋಚಿಸಿದ್ದಿದೆ ಇದನ್ನು ರೊಟ್ಟಿ ಎಂಬ ಕಾಮನ್ ಹೆಸರಿನಿಂದ ಕರೆಯುವುದಕ್ಕಿಂತ ಪತ್ತಿರ್ ಎಂಬ ಒರಿಜಿನಲ್ ಬ್ಯಾರಿ ಹೆಸರೇ ಬಳಸುವುದು ಹೆಚ್ಚು ಸೂಕ್ತ. ನಾವು ಆ ಮೂಲಕ ಕನ್ನಡದ ಪದಕೋಶಕ್ಕೊಂದು ಹೊಸಬಗೆಯ ಶಬ್ದವನ್ನು ನೀಡಿದಂತಾಗುತ್ತದೆ. ಇದರಿಂದ ತಿಂಡಿಗಳ ಪಟ್ಟಿಗೆ ಪತ್ತಿರ್‌ನ ಸೇರ್ಪಡೆಯಾಗುತ್ತದೆ. ಒಮ್ಮೆ ಪತ್ತಿರ್ ಎಂಬ ಹೆಸರು ತಿಂಡಿಯ ಪಟ್ಟಿಯಲ್ಲಿ ಬಂದರೆ ಅದರ ಬಗ್ಗೆ ಬ್ಯಾರಿಯೇತರರಿಗೆ ಕುತೂಹಲ ಹುಟ್ಟುತ್ತದೆ. ಆ ಕುತೂಹಲ ಯೂ ಟ್ಯೂಬ್ ರೆಸಿಪಿಯಲ್ಲಿ ಹೌ ಟು ಮೇಕ್ ಪತ್ತಿರ್ ಎಂದು ಸರ್ಚ್ ಮಾಡುವವರ ಸಂಖ್ಯೆ ದಿನೇ ದಿನೇ ಏರಿಸಬಹುದು. ಈಗೆಲ್ಲಾ ಬ್ಯಾರಿಗಳ ಹೊಟೇಲ್‌ಗಳಲ್ಲಿ, ಮಲಬಾರಿ ಹೊಟೇಲ್ ಗಳಲ್ಲೆಲ್ಲಾ ಪತ್ತಿರ್ ಲಭ್ಯವಿದೆ.

ಬ್ಯಾರಿಯೇತರರು ರೊಟ್ಟಿ ಮಾಡುತ್ತಾರಾದರೂ ಅದು ಬ್ಯಾರಿಗಳ ಪತ್ತಿರ್ ಗೆ ಸಮನಾಗದು. ಯಾಕೆಂದರೆ ಅವರು ಹಿಟ್ಟನ್ನು ಕೈಯಲ್ಲಿ ತಟ್ಟಿ ತವಾದಲ್ಲಿ ಕಾಯಿಸುತ್ತಾರೆ. ಅದಕ್ಕೆ ಬ್ಯಾರಿಗಳು ಕಾವಲಿಗ್ ಪತ್ತ್ಪಾಟಿಯೆ ಅಪ್ಪ (ತವಾಕ್ಕೆ ಅಂಟಿಸಿದ ತಿಂಡಿ) ಎನ್ನುತ್ತಾರೆ. ಬ್ಯಾರಿಗಳು ಅದಕ್ಕೆಂದೇ ಸಲಕರಣೆ ಬಳಸು ತ್ತಾರೆ. ಅದಕ್ಕೆ ಪತ್ತಿರ್‌ಡೆ ಮಣೆ ಎನ್ನುತ್ತಾರೆ. ಹಿಟ್ಟನ್ನು ಕೈಯಲ್ಲಿ ತಟ್ಟಿ ಕಾಯಿಸುವ ರೊಟ್ಟಿ ದಪ್ಪಗಿರುತ್ತದೆ. ಮತ್ತು ಅದರ ಮೇಲ್ಮೈಯಲ್ಲಿ ಉಬ್ಬು ತಗ್ಗುಗಳಿರುತ್ತವೆ.

ಆದರೆ ಪತ್ತಿರ್‌ಡೆ ಮಣೆಯಲ್ಲಿ ಹಿಟ್ಟಿನ ಉಂಡೆಯನ್ನಿಟ್ಟು ಒತ್ತಿದಾಗ ಅದಕ್ಕೆ ಉರುಟಾದ ಶೇಪ್ ಬರುತ್ತದೆ ಮತ್ತು ತೆಳುವಾಗಿರುತ್ತದೆ. ಅದನ್ನು ಕಾಯಿಸಿದಾಗ ಉಬ್ಬು ತಗ್ಗುಗಳಿರದೇ ಸಮತಟ್ಟಾಗಿರುತ್ತದೆ. ನೋಡಲೂ ಚಂದ ಕಾಣುತ್ತದೆ.

ಈ ಪತ್ತಿರ್‌ಡೆ ಮಣೆ ಮಾರುಕಟ್ಟೆಗೆ ಬರುವುದಕ್ಕಿಂತ ಮುಂಚೆ ಇದರಷ್ಟು ಮುಂದುವರಿಯದ ಒಂದು ವಿಧಾನದಿಂದ ಪತ್ತಿರ್ ಮಾಡುತ್ತಿದ್ದರು. ಸುಮಾರು ಒಂದು ಅಡಿ ಎತ್ತರದ ಒಂದು ಪುಟ್ಟ ಮರದ ಸ್ಟೂಲ್. ಕುಳಿತುಕೊಳ್ಳಲು ಬಳಸುವ ಸ್ಟೂಲ್‌ಗಳಿಗೆಲ್ಲಾ ನಾಲ್ಕು ಕಾಲುಗಳಾದರೆ ಹಳೆ ಪತ್ತಿರ್‌ಡೆ ಮಣೆಗೆ ಮೂರು ಕಾಲುಗಳು. ಅದರ ಮೇಲ್ಮೈ ವೃತ್ತಾಕಾರದಲ್ಲಿರುತ್ತದೆ. ಮತ್ತು ಮೇಲ್ಮೈ ಕಾಲು ಇಂಚಿನಷ್ಟು ಆಳವಿರುತ್ತದೆ. ಗಟ್ಟಿ ಹಿಟ್ಟಿನ ಉಂಡೆಯೊಂದನ್ನು ಅದರ ಮೇಲ್ಮೈಯಲ್ಲಿಟ್ಟು ಕೈಯಲ್ಲಿ ತಟ್ಟಿ ತಟ್ಟಿ ವಿಸ್ತಾರಗೊಳಿಸಿ ವೃತ್ತಾಕಾರಕ್ಕೆ ತಂದು ಆ ಬಳಿಕ ಅದನ್ನು ಮುರಿಯದಂತೆ ಮೆಲ್ಲನೇ ಎತ್ತಿ ಕಾವಲಿಗೆ (ತವಾ) ಹಾಕಿ ಕಾಯಿಸುತ್ತಿದ್ದರು. ಆಧುನಿಕ ಪತ್ತಿರ್‌ನ ಮಣೆಯ ಅನ್ವೇಷಣೆಯ ಬಳಿಕ ಹಳೆಯ ಮರದ ಸ್ಟೂಲ್ ಮಾದರಿಯ ಪತ್ತಿರ್‌ನ ಮಣೆ ಅಟ್ಟ ಸೇರಿ ಕ್ರಮೇಣ ಮಾಯವಾಯಿತು. ಹತ್ತಿಯಂತೆ ತೆಳುವಾದ ಪತ್ತಿರ್‌ನ ರುಚಿ ಕೈಯಲ್ಲಿ ಹಿಟ್ಟು ತಟ್ಟಿ ಮಾಡಿದ ಅಥವಾ ಹಳೇ ಕಾಲದ ಮರದ ಮಣೆಯಲ್ಲಿ ಮಾಡಿದ ಪತ್ತಿರ್ನಲ್ಲಿ ಸಿಗದು.

ಪತ್ತಿರ್‌ಡೆ ಮಣೆ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸಾಮಾನ್ಯವಾಗಿ ಬ್ಯಾರಿಯೇತರರು ಅದನ್ನು ಖರೀದಿಸುವುದಿಲ್ಲ. ಯಾಕೆಂದರೆ ಪತ್ತಿರ್ ಬ್ಯಾರಿಯೇತರರಲ್ಲಿ ಜನಪ್ರಿಯ ತಿಂಡಿಯಲ್ಲ.

ನಮ್ಮ ಮನೆಯ ಪಕ್ಕದ ಬಾಯಮ್ಮಂದಿರು (ಕ್ರೈಸ್ತ ಸಹೋದರಿಯರು) ಕ್ರಿಸ್‌ಮಸ್ ಸಂದರ್ಭಗಳಲ್ಲಿ ನಮ್ಮಿಂದ ಪತ್ತಿರ್‌ಡೆ ಮಣೆ ಕೇಳಿ ಕೊಂಡೊಯ್ಯುವುದಿದೆ. ಆದರೆ ಪತ್ತಿರ್ ಮಾಡಲಲ್ಲ. ಕ್ರಿಸ್‌ಮಸ್‌ಗೆ ಅವರು ಮಾಡುವ ಕೆಲವು ತಿಂಡಿಗಳನ್ನು ಒತ್ತಿ ಅದಕ್ಕೆ ಶೇಪ್ ತರಲು ಅವರು ಪತ್ತಿರ್‌ಡೆ ಮಣೆಯನ್ನು ಬಳಸುತ್ತಾರೆ. ಅವರು ಕ್ರಿಸ್‌ಮಸ್‌ಗಿಂತ ವಾರ ಮೊದಲೇ ಕ್ರಿಸ್‌ಮಸ್ ತಿಂಡಿ ತಯಾರಿಸಲು ಪ್ರಾರಂಭಿಸುವುದರಿಂದ ಸರದಿಯಲ್ಲಿ ಒಂದೊಂದು ಮನೆಯವರು ಒಂದೊಂದು ದಿನ ಪತ್ತಿರ್‌ಡೆ ಮಣೆ ಕೊಂಡೊಯ್ಯುತ್ತಾರೆ.

ಸಾಮಾನ್ಯವಾಗಿ ಬಿಳಿ ಅಕ್ಕಿಯಲ್ಲಿ ಪತ್ತಿರ್ ಮಾಡುತ್ತಾರೆ. ಈಗೀಗ ಅದರಲ್ಲೂ ಪತ್ತಿರ್ ಮಾಡಲು ಅನುಕೂಲವಾ ಗುವಂತಹ ಅದರದ್ದೇ ಗುಣಮಟ್ಟದ ಅಕ್ಕಿ ಎಂದೇ ಅಂಗಡಿ ಯವರಲ್ಲಿ ಕೇಳಿ ತರುವುದಿದೆ. ಹಬ್ಬ ಹರಿದಿನಗಳಂದು ಪತ್ತಿರ್ ಮಾಡುವ ಸಂಪ್ರದಾಯವಿಲ್ಲ. ಆದರೆ ರಾತ್ರಿ ವೇಳೆ ಮಾಡುವ ಹರಕೆ ಮತ್ತಿತರ ಕಾರ್ಯಕ್ರಮಗಳ ತಿಂಡಿಗಳ ಮೆನುವಿನಲ್ಲಿ ಪತ್ತಿರ್‌ಗೆ ಖಾಯಂ ಸ್ಥಾನವಿದೆ. ಅಂತೆಯೇ ಬೆಳಗಿನ ಉಪಾಹಾರಕ್ಕೂ ಪತ್ತಿರ್ ಮಾಡಲಾಗುತ್ತದೆ. ಹಿಂದೆಲ್ಲಾ ಮನೆಗೆ ಅತಿಥಿಗಳು ಬಂದಾಗ ಪತ್ತಿರ್ ಮತ್ತು ಕೋಳಿ ಸಾರು ಮಾಡಿ ಸತ್ಕರಿಸುತ್ತಿದ್ದರು. ಕೆಲವು ಬ್ಯಾರಿ ಮನೆಗಳಲ್ಲಿ ಪ್ರತೀದಿನ ರಾತ್ರಿ ಪತ್ತಿರ್. ಕೆಲವು ಮನೆಗಳಲ್ಲಿ ಚಪಾತಿ, ಪಿಂಡಿ (ಕಡುಬು /ಪುಂಡಿ) ಇಂತಹ ತಿಂಡಿಗಳಾದರೆ ಗ್ರಾಮೀಣ ಬ್ಯಾರಿಗಳಲ್ಲಿ ಸಾಮಾನ್ಯವಾಗಿ ರಾತ್ರಿಗೂ ಅನ್ನವೇ ಇರುತ್ತದೆ.

ಪತ್ತಿರ್‌ಗೆ ಸಾಮಾನ್ಯವಾಗಿ ಸಸ್ಯಾಹಾರಿ ಪದಾರ್ಥ, ಸಾಂಬಾರ್ ಗಳು ಅಷ್ಟಾಗಿ ಹಿಡಿಸುವುದಿಲ್ಲ. ಪತ್ತಿರ್‌ಗೆ ಮೀನು ಸಾರು, ಕೋಳಿ ಸಾರು,ಮಟನ್ ಸಾರು, ಬೀಫ್ ಸುಕ್ಕ ಇವೆಲ್ಲಾ ವಂಡರ್ಫುಲ್ ಕಾಂಬಿನೇಶನ್. ಪತ್ತಿರ್ ಬಿಸಿ ಬಿಸಿ ತಿನ್ನಲು ಕೂತರೆ ಎಷ್ಟು ತಿಂದರೂ ಗೊತ್ತಾಗದು. ಬಿಸಿ ಬಿಸಿ ಪತ್ತಿರ್‌ನ ಆ ಯೂನಿಕ್ ರುಚಿ ತಣ್ಣಗಾದ ಪತ್ತಿರ್‌ನಲ್ಲಿ ಸಿಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬ್ಯಾರಿಗಳ ದೊಡ್ಡ ಮಟ್ಟದ ಔತಣ ಕೂಟದ ಮೆನುವಿಗೂ ಪತ್ತಿರ್ ಪ್ರವೇಶಿಸಿದೆ.

ಈಗೀಗ ಪತ್ತಿರ್ ಹುಡಿಯೆಂಬ ಹುಡಿಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲಿ ಕೆಲಸ ಸುಲಭ. ಆದರೆ ಅಕ್ಕಿ ನೀರಲ್ಲಿ ಹಾಕಿ ಕಡೆದು ಮಾಡುವ ಹಿಟ್ಟಿನಿಂದ ತಯಾರಿಸಿದ ಪತ್ತಿರ್ ನ ರುಚಿಯ ಅರ್ಧದಷ್ಟು ರುಚಿಯೂ ಪತ್ತಿರ್ ಹುಡಿಯ ಪತ್ತಿರ್ ನಲ್ಲಿ ಸಿಗುವುದಿಲ್ಲ. ಬ್ಯಾರಿ ಅಡುಗೆ ಮನೆಯ ಬಿಸಿ ಬಿಸಿ ಪತ್ತಿರ್‌ನ ರುಚಿ ಸವಿದವರಿಗೇ ಗೊತ್ತು ಪತ್ತಿರ್‌ನ ರುಚಿ.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News