ಕಪ್ಪುರಂಧ್ರ ಸೌರವ್ಯೂಹ ಪ್ರವೇಶಿಸಿದರೆ ಏನಾಗುತ್ತೆ?

Update: 2019-12-01 06:38 GMT

ನಮ್ಮ ಸೂರ್ಯ ಸುಂದರವಾದ ಮತ್ತು ಬೃಹತ್ ಸಂಖ್ಯೆಯ ಪರಿವಾರ ಹೊಂದಿದ್ದಾನೆ. ಅದರಲ್ಲಿ ಎಂಟು ಗ್ರಹಗಳು, ನೂರಾರು ಉಪಗ್ರಹಗಳು, ಸಾವಿರಾರು ಕ್ಷುದ್ರಗ್ರಹಗಳು, ಶತಕೋಟಿ ಧೂಮಕೇತುಗಳು ಸೇರಿವೆ. ಇಂತಹ ಬೃಹತ್ ಸಂಖ್ಯೆಯ ಪರಿವಾರಕ್ಕೆ ಕಪ್ಪುರಂಧ್ರವೆಂಬ ಅನಪೇಕ್ಷಿತ ಅತಿಥಿ ಬಂದರೆ ಏನಾಗುತ್ತೇ? ಇಷ್ಟೊಂದು ಸಂಖ್ಯೆಯ ಪರಿವಾರ ಇರುವಾಗ ಒಬ್ಬ ಅತಿಥಿ ಬಂದರೆ ತೊಂದರೆ ಏನು? ಎಂಬ ಪ್ರಶ್ನೆ ಮೂಡದಿರದು. ಹಾಗಾದರೆ ಕಪ್ಪುರಂಧ್ರ ಎಂದರೇನು? ಅದರಿಂದ ಆಗುವ ಪರಿಣಾಮಗಳೇನು ಕುರಿತ ಮಾಹಿತಿಗಾಗಿ ಮುಂದೆ ಓದಿ.

ಕಪ್ಪುರಂಧ್ರ ಎಂದರೆ....: ಕಪ್ಪುರಂಧ್ರಗಳನ್ನು ಕಪ್ಪುಕುಳಿ ಎಂದೂ ಕರೆಯಲಾಗುತ್ತದೆ. ಕಪ್ಪುರಂಧ್ರಗಳು ಎಂದರೆ ನಿಖರವಾಗಿ ರಂಧ್ರಗಳಲ್ಲ. ಇದು ಬಾಹ್ಯಾಕಾಶದ ಒಂದು ಸ್ಥಳವಾಗಿದೆ. ಇಲ್ಲಿ ಗುರುತ್ವಾಕರ್ಷಣೆ ಹೆಚ್ಚಾಗಿದ್ದು, ಎಲ್ಲವನ್ನು ತನ್ನ ಕೇಂದ್ರಕ್ಕೆ ಸೆಳೆದುಕೊಳ್ಳುತ್ತದೆ. ಇಲ್ಲಿ ಬೆಳಕು ಹೊರಬರುವುದೇ ಇಲ್ಲ. ಸಂಪೂರ್ಣ ಕತ್ತಲು ಆವರಿಸಿರುತ್ತದೆ. ನಕ್ಷತ್ರಗಳು ಸಾಯುವಾಗ ಇದು ಸಂಭವಿಸುತ್ತದೆ. ಇಲ್ಲಿ ಬೆಳಕು ಹೊರಬರದ ಕಾರಣ ಇದನ್ನು ಕಪ್ಪುಕುಳಿ ಅಥವಾ ಕಪ್ಪುರಂಧ್ರ ಎನ್ನುತ್ತಾರೆ. ಕಪ್ಪುಕುಳಿಗಳನ್ನು ಬರಿ ಕಣ್ಣಿನಿಂದ ನೋಡಲಾಗುವುದಿಲ್ಲ. ಬಾಹ್ಯಾಕಾಶದ ದೂರದರ್ಶಕಗಳಿಂದ ಮಾತ್ರ ನೋಡಲು ಸಾಧ್ಯ.

ಕಪ್ಪುರಂಧ್ರಗಳ ಬಗ್ಗೆ ಮೊದಲ ಮಾಹಿತಿ ನೀಡಿದವರು ಐನ್‌ಸ್ಟೀನ್. ಕೇವಲ ಸಾಪೇಕ್ಷ ಸಾಂದ್ರತೆ ಸಿದ್ಧಾಂತದ ಲೆಕ್ಕಾಚಾರದಿಂದಲೇ ಕಪ್ಪುರಂಧ್ರಗಳ ಸುಳಿವನ್ನು ನೀಡಿದ್ದರು. ನಂತರ ಕಪ್ಪುರಂಧ್ರಗಳ ಬಗ್ಗೆ ಅತೀ ಹೆಚ್ಚು ಸಂಶೋಧನೆಗಳಲ್ಲಿ ತೊಡಗಿದ ಖಭೌತ ವಿಜ್ಞಾನಿ ಎಂದರೆ ಸ್ಟೀಫನ್ ಹಾಕಿನ್ಸ್. ಐನ್‌ಸ್ಟೀನ್ ನೀಡಿದ ಮಾಹಿತಿಗೆ ಪುರಾವೆ ಸಮೇತ ಕಪ್ಪುರಂಧ್ರಗಳ ಬಗ್ಗೆ ಹಾಕಿನ್ಸ್ ತನ್ನ ವಾದವನ್ನು ಜಗತ್ತಿಗೆ ತಿಳಿಸಿದ. 10-04-2019 ಕಪ್ಪುರಂಧ್ರಗಳ ಕುರಿತ ಮಹತ್ವದ ದಿನ. ಅಂದು ನಾಸಾ ಮೆಸ್ಸಿಯರ್-87 ನಕ್ಷತ್ರಪುಂಜದ ಕೇಂದ್ರಭಾಗದಲ್ಲಿನ ಕಪ್ಪು ರಂಧ್ರದ ಚಿತ್ರವನ್ನು ಬಿಡುಗಡೆ ಮಾಡಿತ್ತು. ಮೆಸ್ಸಿಯರ್-87 ನಕ್ಷತ್ರಪುಂಜವು ಭೂಮಿಯಿಂದ 53.5 ದಶಲಕ್ಷ ಬೆಳಕಿನವರ್ಷದಷ್ಟು ದೂರ ದಲ್ಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಇದರ ಜೊತೆಗೆ ಸ್ಯಾಗಿಟ್ಯಾರಿಯನ್-ಎ* ಎಂಬ ಇನ್ನೊಂದು ನಕ್ಷತ್ರಪುಂಜದಲ್ಲೂ ಕಪ್ಪುಕುಳಿ ಇರುವುದು ಕಂಡುಬಂದಿದೆ. ಇದು ಭೂಮಿಯಿಂದ ಕೇವಲ 26000 ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ ಎಂದು ಹೇಳಲಾಗಿದೆ. (ಒಂದು ಸೆಕೆಂಡಿಗೆ ಮೂರು ಲಕ್ಷ ಕಿ.ಮೀ. ವೇಗದಲ್ಲಿ ಚಲಿಸುವ ಬೆಳಕು ಸತತವಾಗಿ ಒಂದು ವರ್ಷ ಚಲಿಸಿದರೆ ತಲುಪುವ ದೂರವೇ ಒಂದು ಬೆಳಕಿನ ವರ್ಷ) ಎಪ್ರಿಲ್ 2017ರಿಂದ 200ಕ್ಕೂ ಹೆಚ್ಚು ವಿಜ್ಞಾನಿಗಳು ಈ ಸಂಶೋಧನಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಅವರು ಹವಾಯಿ, ಚಿಲಿ, ಅರಿಜೋನಾ, ಸ್ಪೇನ್, ಮೆಕ್ಸಿಕೊ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಎಂಟು ರೇಡಿಯೋ ಟೆಲಿಸ್ಕೋಪ್‌ಗಳನ್ನು ಬಳಸಿ ಕಪ್ಪುರಂಧ್ರ ಕುರಿತ ಸಂಶೋಧನೆ ಮಾಡಿದ್ದರು. ಈ ಚಿತ್ರದಿಂದ ಜಗತ್ತಿನ ಖಗೋಳ ವಲಯದಲ್ಲೊಂದು ಬಿಸಿ ಬಿಸಿ ಚರ್ಚೆ ಪುನಃ ಪ್ರಾರಂಭವಾಗಿದೆ.

ಗಾತ್ರ ಎಷ್ಟು? : ಕಪ್ಪುಕುಳಿಗಳ ಗಾತ್ರದಲ್ಲಿ ವ್ಯತ್ಯಾಸಗಳಿವೆ. ಕೆಲವು ಪರಮಾಣುವಿನಷ್ಟು ಚಿಕ್ಕದಾಗಿದ್ದರೆ ಕೆಲವು ಸೂರ್ಯನಿಗಿಂತ 20 ಪಟ್ಟು ದೊಡ್ಡದಾಗಿವೆ. ಕಪ್ಪುಕುಳಿಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಪರ್ವತದಷ್ಟು ದ್ರವ್ಯರಾಶಿ ಹೊಂದಿರುತ್ತವೆ. ಮೆಸ್ಸಿಯರ್-87 ಕಪ್ಪುರಂಧ್ರವು ಭೂಮಿಗಿಂತ 30 ಲಕ್ಷ ಪಟ್ಟು ಅಗಲವಿದೆ. ಇದರ ತೂಕ ಸೂರ್ಯನಿಗಿಂತ 650ಕೋಟಿ ಪಟ್ಟು ಹೆಚ್ಚು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನಮ್ಮ ಆಕಾಶಗಂಗೆ ಗೆಲಾಕ್ಸಿಯಲ್ಲಿ ಅನೇಕ ಕಪ್ಪುಕುಳಿಗಳು ಇರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೌರವ್ಯೆಹಕ್ಕೆ ಸಮೀಪಿಸಿದರೆ ಏನಾಗುತ್ತೇ? : ಇಂತಹ ಅಗಾಧ ಶಕ್ತಿಯುತವಾದ ಕಪ್ಪುಕುಳಿಗಳು ನಮ್ಮ ಸೌರವ್ಯೆಹವನ್ನು ಸಮೀಪಿಸಿದರೆ ಏನಾಗುತ್ತದೆ? ಎಂಬುದೇ ಎಲ್ಲರನ್ನು ಕಾಡುವ ಪ್ರಶ್ನೆ. ಏನಾಗುತ್ತದೆ ಎನ್ನುವುದು ಕಪ್ಪುಕುಳಿಯ ಗಾತ್ರ ಹಾಗೂ ಅದು ಸೌರವ್ಯೆಹದಿಂದ ಎಷ್ಟು ದೂರದಲ್ಲಿ ಹಾದುಹೋಗುತ್ತದೆ ಎಂಬುದನ್ನು ಅವಲಂಬಿಸಿದೆ. ದೊಡ್ಡಗಾತ್ರದ ಕಪ್ಪುಕುಳಿ ನಮ್ಮ ಸೌರವ್ಯೆಹಕ್ಕೆ ಪ್ರವೇಶಿಸಿದರೆ ನಾವು ಬದುಕಿ ಉಳಿಯುವ ಅವಕಾಶಗಳು ತೀರಾ ಕಡಿಮೆ. ಕಪ್ಪುಕುಳಿಗಳು ಕೆಲವೇ ಬೆಳಕಿನ ವರ್ಷಗಳ ದೂರದಲ್ಲಿ ಹೋದರೂ ಸಹ ಸೌರವ್ಯೆಹಕ್ಕೆ ಭೌತಿಕ ತೊಂದರೆಗಳು ಉಂಟಾಗುತ್ತವೆ. ಸಂಭಾವ್ಯವಾಗಿ ನಕ್ಷತ್ರಗಳು, ಗ್ರಹಗಳು, ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳು ಕಪ್ಪುಕುಳಿಗಳನ್ನು ಸುತ್ತುತ್ತಿರುತ್ತವೆ. ಇವೆಲ್ಲವನ್ನೂ ಒಂದೇ ಉಸಿರಿಗೆ ಸ್ವಾಹ ಮಾಡುವಷ್ಟು ಗುರುತ್ವಾಕರ್ಷಣ ಶಕ್ತಿ ಈ ಕಪ್ಪುಕುಳಿಗಳಿಗೆ ಇದೆ. ಕಪ್ಪುಕುಳಿಗಳು ಸೌರವ್ಯೆಹದ ಹೊರಗಿನ ಊರ್ಟ್ ಮೋಡದಲ್ಲಿ ಗುರುತ್ವವಾದ ಅವಸ್ಥೆಯನ್ನು ಉಂಟುಮಾಡುತ್ತವೆ. ಕಪ್ಪುಕುಳಿಯು ಧೂಮಕೇತು ಮತ್ತು ಕ್ಷುದ್ರಗ್ರಹಗಳನ್ನು ಸೌರವ್ಯೆಹದಲ್ಲಿ ತರಗೆಲೆಯಂತೆ ಹಾರಾಡಿಸಬಹುದು. ಇದರಿಂದ ಅವು ಪರಸ್ಪರ ಗ್ರಹಗಳಿಗೆ ಢಿಕ್ಕಿ ಹೊಡೆಯುತ್ತವೆ. ಭೂಮಿಗೂ ಇವು ಅಪ್ಪಳಿಸಬಹುದು. ಕಪ್ಪುಕುಳಿಗಳು ಸೌರವ್ಯೆಹದ ಸಮೀಪ ಹಾದುಹೋದರೆ ಗ್ರಹಗಳ ಕಕ್ಷೆಗಳು ಬದಲಾಗುತ್ತವೆ. ಸಂಭಾವ್ಯವಾಗಿ ಕಪ್ಪುಕುಳಿ ನಮ್ಮ ಸೌರವ್ಯೆಹ ಪ್ರವೇಶಿಸಿದರೆ, ಗುರುಗ್ರಹಕ್ಕೆ ಅತೀ ಹೆಚ್ಚು ಅನಾಹುತ ಆಗುತ್ತದೆ. ಅದು ಗುರುಗ್ರಹದಲ್ಲಿರುವ ಎಲ್ಲಾ ಅನಿಲವನ್ನು ತನ್ನೆಡೆಗೆ ಎಳೆದು ಕೊಳ್ಳುತ್ತದೆ. ಆಗ ಗುರುಗ್ರಹ ಕೇವಲ ಸುತ್ತುವ ಚಕ್ರದಂತೆ ಪರಿವರ್ತನೆ ಹೊಂದುತ್ತದೆ. ದೈತ್ಯಗ್ರಹ ಎನಿಸಿದ ಗುರುಗ್ರಹದ ಕಥೆ ಈ ರೀತಿಯಾದರೆ ಇನ್ನು ಭೂಮಿಯ ಪಾಡೇನು?.

ಉತ್ತರ ಭಯಾನಕವಾಗಿರುತ್ತದೆ. ಕಪ್ಪುಕುಳಿಗಳು ಪ್ಲೂಟೋದ ಬಳಿ ಬರುತ್ತಿದ್ದಂತೆ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ. ಅದು ನಮ್ಮ ವಾಸಯೋಗ್ಯ ವಲಯದಿಂದ ನಮ್ಮನ್ನು ಎಳೆದು ಹಾಕುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ನಾವು ಸಿದ್ಧರಾಗಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ನಮ್ಮ ಬಳಿ ಇರುವುದಿಲ್ಲ. ಕಪ್ಪುಕುಳಿ ಭೂಮಿಯನ್ನು ಸಮೀಪಿಸುತ್ತಿದ್ದಂತೆ ಅದು ಭೂಗ್ರಹದ ಹೊರಪದರದಲ್ಲಿ ಬಿರುಕುಗಳನ್ನು ಉಂಟುಮಾಡುತ್ತದೆ. ಇದರಿಂದ ತೀವ್ರವಾದ ಭೂಕಂಪ ಮತ್ತು ಜ್ವಾಲಾಮುಖಿಗಳು ಉಂಟಾಗುತ್ತವೆ. ಸಮುದ್ರದ ಅಲೆಗಳೂ ನಾಶವಾಗುತ್ತವೆ. ಕಪ್ಪುಕುಳಿ ಭೂ ಕಕ್ಷೆಯನ್ನು ಹಾದು ಹೋಗುವ ವೇಳೆಗೆ ಭೂಗ್ರಹದಲ್ಲಿ ಏನೂ ಉಳಿದಿರುವುದಿಲ್ಲ. ಶಿಲೀಂದ್ರಗಳೂ ಶಿಲಾಪಾಕದಿಂದ ಆವರಿಸಿಕೊಳ್ಳುತ್ತವೆ. ಕಪ್ಪುಕುಳಿಯ ಅನಾಹುತದಿಂದ ಭೂಮಿಯು ಸಂಪೂರ್ಣವಾಗಿ ಸೌರವ್ಯೆಹದಿಂದ ಹೊರ ಹಾಕಲ್ಪಡಬ ಹುದು. ಇನ್ನೊಂದು ಆಯಾಮದಲ್ಲಿ ಕಪ್ಪುಕುಳಿ ಸೂರ್ಯನಿಗೆ ಹತ್ತಿರವಾದಾಗ, ಸೂರ್ಯನಲ್ಲಿರುವ ಎಲ್ಲಾ ಅನಿಲವನ್ನು ಸ್ವಾಹ ಮಾಡಬಹುದು. ಆಗ ಸೌರವ್ಯೆಹದ ಗುರುತ್ವ ಕಪ್ಪುಕುಳಿಯ ಒಡಲೊಳು ಸೇರಿ ಭೂಮಿಯೂ ಅದರೊಳಗೆ ಸೇರಬಹುದು. ಅಂದರೆ ಭೂಮಿ ಮತ್ತು ಇತರ ಎಲ್ಲಾ ಗ್ರಹಗಳು ಕಪ್ಪುಕುಳಿಯ ಒಡಲೊಳು ಸೇರಿಕೊಳ್ಳುತ್ತವೆ. ಆಗ ನಮ್ಮ ಸೌರವ್ಯೆಹ ಸಂಪೂರ್ಣವಾಗಿ ನಾಶವಾಗುತ್ತದೆ.

ಸಂಭವ ತೀರಾ ಕಡಿಮೆ : ಅದೃಷ್ಟವಶಾತ್ ಈ ಮೇಲಿನ ಎಲ್ಲಾ ಘಟನೆಗಳು ನಡೆಯುವ ಸಂಭವ ತೀರಾ ಕಡಿಮೆ. ಏಕೆಂದರೆ ನಮ್ಮ ಬ್ರಹ್ಮಾಂಡದಲ್ಲಿ ಕಪ್ಪುಕುಳಿಗಳ ಚಟುವಟಿಕೆ ಅಷ್ಟೊಂದು ತೀವ್ರವಾಗಿಲ್ಲ ಎಂಬುದೇ ಸದ್ಯಕ್ಕೆ ನಿಶ್ಚಿಂತೆ. ಕಪ್ಪುಕುಳಿಗಳ ಬಗ್ಗೆ ನಾಸಾ ಸಾಕಷ್ಟು ಅಧ್ಯಯನಗಳನ್ನು ಕೈಗೊಂಡಿದೆ. ಇದಕ್ಕಾಗಿ ವಿಜ್ಞಾನಿಗಳ ತಂಡ ಹಗಲಿರುಳೂ ಟೆಲಿ ಸ್ಕೋಪ್‌ಗಳ ಸಹಾಯದಿಂದ ಕ್ಷಣಕ್ಷಣದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News