ಪರರ ವಸ್ತು

Update: 2019-12-01 06:57 GMT

ವೆಂಕಟೇಶ ಚಾಗಿ, ಲಿಂಗಸುಗೂರ

ರಾಮಪುರದ ಶಾಲೆಯ ವಿದ್ಯಾರ್ಥಿಗಳು ತುಂಬಾ ಜಾಣರಾಗಿದ್ದರು. ಅವರು ಆಟಪಾಠಗಳಲ್ಲಿ ಯಾವಾಗಲೂ ಮುಂದು. ಮನೆಯಲ್ಲಿ ತಂದೆ-ತಾಯಿಯರು ಹೇಳಿದ ಮಾತುಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಗುರುಹಿರಿಯರಿಗೆ ಗೌರವ ಕೊಟ್ಟು, ನಯ ವಿನಯದಿಂದ ಅವ ಮಾತುಗಳನ್ನು ಕೇಳುತ್ತಿದ್ದರು.

ಶಾಲೆಯಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿ ವಿದ್ಯಾರ್ಥಿಗಳ ಸರಿ-ತಪ್ಪುಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನದಲ್ಲಿ ನಡೆಯುವಂತೆ ತಿಳುವಳಿಕೆಯನ್ನು ನೀಡುತ್ತಿದ್ದರು.

ರಮೇಶ್ ಅದೇ ಶಾಲೆಯ ವಿದ್ಯಾರ್ಥಿ. ರಮೇಶನು ಒಂದು ದಿನ ಶಾಲೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ಹೊಸ ಪೆನ್ನು ಬಿದ್ದಿರುವುದನ್ನು ಕಂಡನು. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ್ದರಿಂದ ಪೆನ್ನಿನ ಬಗ್ಗೆ ವಿಚಾರಿಸಲು ಸಾಧ್ಯವಾಗದೇ ಅದನ್ನು ತಾನೇ ಇಟ್ಟುಕೊಂಡು ಶಾಲೆಗೆ ನಡೆದ. ಶಾಲೆಯಲ್ಲಿಯೂ ಅದರ ಬಗ್ಗೆ ವಿಚಾರಿಸದೆ ಸುಂದರವಾದ ಪೆನ್ನನ್ನು ಉಪಯೋಗಿಸತೊಡಗಿದ. ಸ್ನೇಹಿತರು ಕೇಳಿದಾಗ ತಾನು ಊರಿಗೆ ಹೋಗಿದ್ದಾಗ ತನಗೆ ಸಿಕ್ಕಿದ್ದು ಎಂದು ಹೇಳತೊಡಗಿದ. ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಅವನ ಪೆನ್ನನ್ನು ನೋಡುವ ಆಸೆಯಿಂದ ಅವನ ಬಳಿ ಬರತೊಡಗಿದರು. ಎಲ್ಲರಿಗೂ ಪೆನ್ನನ್ನು ತೋರಿಸುತ್ತಾ ಖುಷಿಯಿಂದ ಬೀಗಿದ. ಮರುದಿನ ಬೆಳಗ್ಗೆ ಪಕ್ಕದ ತರಗತಿಯಲ್ಲಿ ಯಾವುದೋ ಗಲಾಟೆ ನಡೆದಿತ್ತು. ರಮೇಶ ಗಲಾಟೆಯನ್ನು ನೋಡಲು ಪಕ್ಕದ ಕೊಠಡಿಗೆ ತೆರಳಿದ. ಅಲ್ಲಿ ಸಚಿನ್ ತನ್ನ ಪೆನ್ನನ್ನು ಕಳೆದುಕೊಂಡಿದ್ದ. ಗುರುಗಳು ಎಲ್ಲ ವಿದ್ಯಾರ್ಥಿಗಳನ್ನು ವಿಚಾರಿಸುತ್ತಿದ್ದರು. ಸಚಿನ್ ತಂದೆ ಗುರುಗಳ ಬಳಿ ಬಂದು, ತರಗತಿಯ ವಿದ್ಯಾರ್ಥಿಗಳ ಪೈಕಿ ಯಾರೋ ಕದ್ದಿರಬಹುದು ಎಂದು ದೂರು ನೀಡಿದರು. ಎಲ್ಲರೂ ತಾವು ನೋಡಿಲ್ಲ ಹಾಗೂ ಕದ್ದಿಲ್ಲವೆಂದು ಹೇಳುತ್ತಿದ್ದರು. ರಮೇಶನಿಗೆ ಆತನ ಬಳಿ ಇರುವ ಪೆನ್ನು ಚೇತನದ್ದೇ ಆಗಿರಬಹುದು ಎಂಬ ಅನುಮಾನ ಮೂಡಿತು.

ರಮೇಶ ಆ ಪೆನ್ನನ್ನು ತಾನು ಖರೀದಿಸಿದ್ದಲ್ಲ, ಆದ್ದರಿಂದ ಪೆನ್ನು ತನ್ನದಲ್ಲ. ಪರರವಸ್ತು ಪಾಷಾಣಕ್ಕೆ ಸಮಾನ ಎಂದು ಮನಸ್ಸಿನಲ್ಲಿ ಅಂದುಕೊಂಡ. ಆದರೆ ಮತ್ತೆ ಯೋಚಿಸುತ್ತಾ ಪೆನ್ನು ನನಗೆ ದಾರಿಯಲ್ಲಿ ಸಿಕ್ಕಿದ್ದು ನಾನು ಕದ್ದಿರುವುದಲ್ಲ ನಾನೇಕೆ ಕೊಡಲಿ, ನಾನು ಯಾರಿಗೂ ಕೊಡುವುದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡ.

ರಮೇಶ ಮನೆಗೆ ಹೋದಾಗಲೂ ಅವನ ಮನಸ್ಸಿನಲ್ಲಿ ತನ್ನ ಬಳಿ ಇರುವ ಪೆನ್ನಿನ ವಿಷಯದ ಬಗ್ಗೆ ವಿಚಾರ ಮಾಡತೊಡಗಿದ. ರಮೇಶನ ಸ್ನೇಹಿತರು ಇದು ಸಚಿನದ್ದೇ ಇರಬೇಕು. ಗುರುಗಳಿಗೆ ಕೊಟ್ಟುಬಿಡು ಎಂದು ಸಲಹೆ ನೀಡಿದರು. ಅಂದು ರಮೇಶನ ಪೆನ್ನಿನ ವಿಚಾರವಾಗಿ ಅವನ ಮನಃಶಾಂತಿ ಹಾಳಾಗಿತ್ತು. ಅದರಂತೆ ಮರುದಿನ ರಮೇಶ ಗುರುಗಳ ಬಳಿ ಬಂದು ಈ ಪೆನ್ನು ತನಗೆ ದಾರಿಯಲ್ಲಿ ದೊರಕಿದ್ದು ಕಳೆದುಕೊಂಡವರಿಗೆ ಕೊಡಿ ಎಂದು ಗುರುಗಳಿಗೆ ಕೊಟ್ಟನು. ಗುರುಗಳು ತರಗತಿಗೆ ಬಂದು ಪೆನ್ನನ್ನು ಪ್ರದರ್ಶಿಸಿ ಪೆನ್ನನ್ನು ಯಾರಾದರೂ ಕಳೆದುಕೊಂಡಿದ್ದೀರಾ ಎಂದು ಕೇಳಿದಾಗ, ಪೆನ್ನನ್ನು ಕಳೆದುಕೊಂಡಿದ್ದ ಸಚಿನ್ ‘ಸರ್ ಈ ಪೆನ್ನು ನನ್ನದು’ ಎಂದ. ಗುರುಗಳು ಸಚಿನ್‌ಗೆ ಪೆನ್ನು ಕೊಟ್ಟಾಗ ಸಚಿನ್ ತುಂಬಾ ಸಂತೋಷಗೊಂಡು ತನ್ನ ಪೆನ್ನನ್ನು ಎಲ್ಲರಿಗೂ ತೋರಿಸಿದ. ರಮೇಶನಿಗೆ ಪರರ ವಸ್ತುವನ್ನು ಹಿಂದಿರುಗಿಸಿದ ತೃಪ್ತಿ ದೊರೆಯಿತು. ಈ ಘಟನೆಯಿಂದ ರಮೇಶ ಪರರ ವಸ್ತು ಪಾಷಾಣಕ್ಕೆ ಸಮಾನ ಎಂಬುದನ್ನು ತಿಳಿದುಕೊಂಡ.

Writer - ವೆಂಕಟೇಶ ಚಾಗಿ, ಲಿಂಗಸುಗೂರ

contributor

Editor - ವೆಂಕಟೇಶ ಚಾಗಿ, ಲಿಂಗಸುಗೂರ

contributor

Similar News