ಮಕ್ಕಳಲ್ಲಿ ಅಪೆಂಡಿಸೈಟಿಸ್ ಬಗ್ಗೆ ಎಚ್ಚರಿಕೆಯಿರಲಿ

Update: 2019-12-01 12:48 GMT

ಅಪೆಂಡಿಕ್ಸ್ ಅಥವಾ ಕರುಳುಬಾಲ ಎಂದು ಕರೆಯಬಹುದಾದ ನಮ್ಮ ಶರೀರದ ಭಾಗವು ಬೆರಳಿನಂತಹ ರಚನೆಯಾಗಿದ್ದು ಸಣ್ಣ ಮತ್ತು ದೊಡ್ಡ ಕರುಳುಗಳು ಸೇರುವಲ್ಲಿ ಇರುತ್ತದೆ. ಅದರಿಂದ ನಮ್ಮ ಶರೀರಕ್ಕೆ ಯಾವುದೇ ಉಪಯೋಗವಿಲ್ಲ,ಸುಮ್ಮನೆ ಬಾಲದಂತೆ ನೇತುಕೊಂಡಿರುತ್ತದೆ. ಈ ಅಪೆಂಡಿಕ್ಸ್‌ನ ಉರಿಯೂತವನ್ನು ಅಪೆಂಡಿಸೈಟಿಸ್ ಎಂದು ಕರೆಯಲಾಗುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಾ ತುರ್ತು ಸಂದರ್ಭವಾಗಿದ್ದು,ಸೂಕ್ತ ವೈದ್ಯಕೀಯ ಗಮನ ಅಗತ್ಯವಾಗುತ್ತದೆ. ಆಸ್ಪತ್ರೆಗೂ ದಾಖಲಿಸಬೇಕಾಗಬಹುದು. ಉರಿಯೂತಕ್ಕೊಳಗಾದ ಅಪೆಂಡಿಕ್ಸ್ ಒಡೆದು ಇಡೀ ಕಿಬ್ಬೊಟ್ಟೆಯ ಕುಹರದಲ್ಲಿ ಸೋಂಕನ್ನು ಹರಡುವ ಅಪಾಯವಿರುವುದರಿಂದ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ವಿಳಂಬವು ಅಪಾಯಕಾರಿ ಯಾಗುತ್ತದೆ.

► ಕಾರಣಗಳು

 ಅಪೆಂಡಿಸೈಟಿಸ್‌ಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮಲವು ಅಪೆಂಡಿಕ್ಸ್‌ನ ಕುಹರಕ್ಕೆ ತಡೆಯನ್ನುಂಟು ಮಾಡಿದಾಗ ಸ್ರವಿಸುವಿಕೆಗಳು ಸಂಗ್ರಹಗೊಂಡು ಉಂಟಾಗುವ ಸೋಂಕು ಅಪೆಂಡಿಸೈಟಿಸ್‌ಗೆ ಕಾರಣವಾಗಬಹುದು.

► ಲಕ್ಷಣಗಳು

ಸಾಮಾನ್ಯವಾಗಿ ಎರಡು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಲ್ಲಿ ಅಪೆಂಡಿಸೈಟಿಸ್ ಕಾಣಿಸಿಕೊಳ್ಳುವುದಿಲ್ಲ. ಹೊಕ್ಕಳಿನಿಂದ ಆರಂಭಗೊಂಡು ಶೀಘ್ರವೇ ಹೊಟ್ಟೆಯ ಬಲ ಕೆಳಭಾಗಕ್ಕೆ ಹರಡುವ ನೋವು,ನೋವಿನ ಹಿಂದೆಯೇ ಕಾಡುವ ವಾಂತಿ,ಜ್ವರ,ಹಸಿವು ಕ್ಷೀಣಗೊಳ್ಳುವುದು ಇವು ಅಪೆಂಡಿಸೈಟಿಸ್‌ನ ಸಾಮಾನ್ಯ ಲಕ್ಷಣಗಳಾಗಿವೆ. ಮಗುವಿನಲ್ಲಿ ಮಲಬದ್ಧತೆಯುಂಟಾಗಬಹುದು,ಆದರೆ ಒಮ್ಮೆಮ್ಮೆ ಸ್ವಲ್ಪ ಪ್ರಮಾಣದಲ್ಲಿ ತೆಳ್ಳಗಿನ ಮಲ ವಿಸರ್ಜನೆಯಾಗಬಹುದು. ಮಗುವು ಉತ್ಸಾಹಶೂನ್ಯವಾಗುತ್ತದೆ ಮತ್ತು ಹಾಸಿಗೆಯಿಂದ ಏಳುವುದಿಲ್ಲ. ಚಲನವಲನ ನೋವನ್ನುಂಟು ಮಾಡಬಹುದು ಮತ್ತು ನಡೆದಾಡುವಾಗ ಮಗುವು ಮುಂದಕ್ಕೆ ಬಗ್ಗಿ ಕೈಯನ್ನು ಹೊಟ್ಟೆಯ ಮೇಲಿಟ್ಟುಕೊಳ್ಳುತ್ತದೆ. ತಪಾಸಣೆಗಾಗಿ ಹೊಟ್ಟೆಯನ್ನು,ನಿರ್ದಿಷ್ಟವಾಗಿ ಕೆಳಭಾಗವನ್ನು ಮುಟ್ಟಲೂ ಬಿಡುವುದಿಲ್ಲ.

►ರೋಗನಿರ್ಣಯ ಹೇಗೆ?

ವೈದ್ಯರು ವೈದ್ಯಕೀಯ ಪುರಾವೆಗಳನ್ನು ಆಧಾರವಾಗಿಟ್ಟುಕೊಂಡು ರೋಗನಿರ್ಣಯವನ್ನು ಕೈಗೊಳ್ಳುತ್ತಾರೆ. ತೀವ್ರ ಅಪೆಂಡಿಸೈಟಿಸ್‌ನ್ನು ನಿಖರವಾಗಿ ಪತ್ತೆ ಹಚ್ಚುವ ಯಾವುದೇ ಪ್ರಯೋಗಾಲಯ ಪರೀಕ್ಷೆಗಳಿಲ್ಲ. ಕೆಲವೊಮ್ಮೆ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಮಾಡಲಾಗುತ್ತದೆ ಮತ್ತು ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕಾನ್‌ಗೆ ಸೂಚಿಸಬಹುದು. ಈ ಪರೀಕ್ಷೆಗಳನ್ನು ರೋಗನಿರ್ಣಯಕ್ಕೆ ಪೂರಕವಾಗಿ ಮಾಡಲಾಗುತ್ತದೆಯೇ ಹೊರತು ರೋಗನಿರ್ಣಯಕ್ಕಾಗಿಯೇ ಅಲ್ಲ. ಅತ್ಯಂತ ಅನುಭವಿ ವೈದ್ಯರೂ ಶೇ.100ರಷ್ಟು ಸಮಯ ಸರಿಯಾಗಿರಲು ಸಾಧ್ಯವಿಲ್ಲ. ಪರೀಕ್ಷೆಗಳು ನಕಾರಾತ್ಮಕವಾಗಿದ್ದರೆ ಮತ್ತು ವೈದ್ಯಕೀಯ ಶಂಕೆಯು ಬಲವಾಗಿದ್ದರೆ ಉರಿಯೂತಕ್ಕೊಳಗಾದ ಅಪೆಂಡಿಕ್ಸ್‌ನ್ನು ಹೊಟ್ಟೆಯೊಳಗೇ ಬಿಡುವ ಅಪಾಯಕ್ಕಿಂತ ಸಾಮಾನ್ಯ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆಯುವುದು ಸುರಕ್ಷಿತವಾಗುತ್ತದೆ.

► ಯಾವಾಗ ವೈದ್ಯರ ಬಳಿ ಹೋಗಬೇಕು?

ಹೊಟ್ಟೆಯ ಬಲ ಕೆಳಭಾಗದಲ್ಲಿ 3-4 ಗಂಟೆಗಳಿಂದಲೂ ನೋವಿದ್ದರೆ,ಮಗುವು ಆಗಾಗ್ಗೆ ಸ್ವಲ್ಪ ಪ್ರಮಾಣದಲ್ಲಿ ಲೋಳೆಯಿಂದ ಕೂಡಿದ ಮಲವನ್ನು ವಿಸರ್ಜಿಸುತ್ತಿದ್ದರೆ,ಜ್ವರ ಮತ್ತು ವಾಂತಿಯಿದ್ದರೆ ಅಥವಾ ಹೊಟ್ಟೆ ಉಬ್ಬರಿಸಿಕೊಂಡಿದ್ದರೆ ಅದು ತೀವ್ರ ಅಪೆಂಡಿಸೈಟಿಸ್ ಎಂದು ಶಂಕಿಸಬೇಕು ಮತ್ತು ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ವೈದ್ಯರು ತಪಾಸಣೆ ನಡೆಸುವವರೆಗೂ ಮಗುವಿಗೆ ತಿನ್ನಲು ಅಥವಾ ಕುಡಿಯಲು ಏನನ್ನೂ ನೀಡಬಾರದು ಅಥವಾ ನೋವು ನಿವಾರಕ ಔಷಧಿಗಳನ್ನು ಕೊಡಬಾರದು.

► ಚಿಕಿತ್ಸೆ ಏನು? 

ಮಕ್ಕಳು ಶಸ್ತ್ರಚಿಕಿತ್ಸೆಗೊಳಗಾಗುವುದನ್ನು ಸಾಮಾನ್ಯವಾಗಿ ಹೆತ್ತವರು ಬಯಸುವುದಿಲ್ಲ. ಆದರೆ ತೀವ್ರ ಅಪೆಂಡಿಸೈಟಿಸ್‌ಗೆ ಅಪೆಂಡೈಸೆಕ್ಟೋಮಿ ಅಥವಾ ಅಪೆಂಡಿಕ್ಸ್‌ನ್ನು ತೆಗೆಯುವುದು ಏಕಮಾತ್ರ ಪರಿಹಾರವಾಗಿದೆ. ಅಪೆಂಡಿಸೈಟಿಸ್‌ನ ವಿವಿಧ ತೊಂದರೆಗಳನ್ನು ನಿವಾರಿಸಲು ಈ ಶಸ್ತ್ರಚಿಕಿತ್ಸೆ ಎಷ್ಟು ಬೇಗ ನಡೆಯುತ್ತದೆಯೋ ಅಷ್ಟು ಒಳ್ಳೆಯದು. ಇದು ಸಂಕ್ಷಿಪ್ತ ಮತ್ತು ಸುರಕ್ಷಿತ ಶಸ್ತ್ರಚಿಕಿತ್ಸೆಯಾಗಿದ್ದು ಸಾಮಾನ್ಯ ಅರಿವಳಿಕೆಯನ್ನು ನೀಡಿ ನಡೆಸಲಾಗುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ಮಗುವು ತ್ವರಿತವಾಗಿ ಚೇತರಿಸಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News