ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಲಿ

Update: 2019-12-02 05:43 GMT

ಪ್ರಗತಿಪರ ಚಳವಳಿಗಳಲ್ಲಿ ದುಡಿದ ಕೆಲವು ಮಂದಿ ಇಂದು ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ಹೊರಟಿರುವುದು ಅವರ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಅನರ್ಹ ಶಾಸಕರೆಲ್ಲರೂ ಹಳ್ಳಿ ಹಕ್ಕಿಗಳಲ್ಲದೇ ಪಕ್ಕಾ ಗೂಳಿಗಳು ಮತ್ತು ಗುಳ್ಳೆನರಿಗಳು ಎಂಬುದನ್ನು ಅರಿತು ಕರ್ನಾಟಕದ ಪ್ರಜ್ಞಾವಂತ ಮತದಾರರು ಇವರನ್ನು ಉಪಚುನಾವಣೆಯಲ್ಲಿ ಸೋಲಿಸಿ ಕರ್ನಾಟಕದ ಪ್ರಜಾಸತ್ತೆಯನ್ನು ರಕ್ಷಿಸಬೇಕು.

ಕರ್ನಾಟಕದಲ್ಲಿ ಸದ್ಯದಲ್ಲೇ ಸುಮಾರು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಎಲ್ಲರಿಗೂ ತಿಳಿದಿರುವಂತೆ ಈ ಉಪಚುನಾವಣೆ ಯಾರಿಗೂ ಬೇಕಾಗಿರಲಿಲ್ಲ. ಆಪರೇಷನ್ ಕಮಲ ಎಂಬ ಅತ್ಯಂತ ಕೆಟ್ಟ ಅಪ್ರಜಾಸತ್ತಾತ್ಮಕ ನಡವಳಿಕೆಯನ್ನು ರೂಪಿಸಿ ಅಧಿಕಾರಕ್ಕೆ ಬಂದಿರುವ ಬಿ.ಎಸ್. ಯಡಿಯೂರಪ್ಪನವರ ಪಾಪದ ಕೂಸು ಈ ಉಪಚುನಾವಣೆ. ಸುಮಾರು 17 ಮಂದಿ ಕೋಟ್ಯಂತರ ರೂಪಾಯಿ ಹಣ ಮತ್ತು ಮಂತ್ರಿ ಪದವಿಗೋಸ್ಕರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತ್ಯಜಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ ಇವರಿಗೆ ಅನರ್ಹರು ಎಂಬ ಪಟ್ಟವನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ಹಾಗೂ ನಾಗರಿಕ ಸಮಾಜಗಳು ನೀಡಿವೆ. ಕರ್ನಾಟಕ ಶಾಸಕರ ಅನರ್ಹತೆ ವಿಚಾರ ಪ್ರಜಾಪ್ರಭುತ್ವದ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಭೀಕರ ಪ್ರವಾಹದಿಂದಾಗಿ ಮನೆ, ಬೆಳೆ, ಭೂಮಿ ಮತ್ತು ಬದುಕನ್ನು ಕಳೆದುಕೊಂಡು ಕರ್ನಾಟಕದ ಸುಮಾರು 17 ಜಿಲ್ಲೆಗಳಲ್ಲಿ 2 ಕೋಟಿಗೂ ಹೆಚ್ಚು ಜನರ ಬದುಕು ಮೂರಾಬಟ್ಟೆಯಾಗಿದೆ. ಇಂತಹ ಕಷ್ಟಕಾಲದಲ್ಲಿ 17 ಚುನಾಯಿತ ಶಾಸಕರು ತಮ್ಮ ಕ್ಷೇತ್ರಗಳ ಜನರ ಸಮಸ್ಯೆಗಳನ್ನು ಬಗೆಹರಿಸದೇ ಸುಮಾರು 2 ತಿಂಗಳ ಕಾಲ ಮುಂಬೈನಲ್ಲಿ ಮೋಜು ಮಸ್ತಿಗಳಲ್ಲಿ ತೊಡಗಿದ್ದು ಇವರ ಹೃದಯಹೀನತೆ ಮತ್ತು ಹೊಣೆಗೇಡಿತನಗಳಿಗೆ ಸಾಕ್ಷಿಯಾಗಿದೆ.

ಅರ್ಧಕ್ಕಿಂತ ಹೆಚ್ಚು ಕರ್ನಾಟಕ ರಾಜ್ಯ ಎಂದೂ ಕಂಡರಿಯದ ಭೀಕರ ಪ್ರವಾಹದಿಂದ ಮುಳುಗಡೆಯಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮಗೇನೂ ಸಂಬಂಧವಿಲ್ಲದವರಂತೆ ವರ್ತಿಸಿ ಶಕ್ತಿ ರಾಜಕಾರಣವೇ ಸರ್ವಸ್ವ - ಮನುಷ್ಯರ ಬದುಕು ಲೆಕ್ಕಕ್ಕಿಲ್ಲ ಎಂಬ ಧೋರಣೆಯನ್ನು ವ್ಯಕ್ತಪಡಿಸಿರುವುದು ಅಮಾನವೀಯ ಸಂಗತಿಯಾಗಿದೆ. ಕರ್ನಾಟಕ ರಾಜ್ಯದ ಮತದಾರರು ತಮ್ಮ ವಿವೇಕವನ್ನು ಕಳೆದುಕೊಂಡು ಸುಮಾರು 25 ಮಂದಿ ಬಿಜೆಪಿ ಸಂಸದರನ್ನು ಗೆಲ್ಲಿಸಿ ದಿಲ್ಲಿಗೆ ಕಳುಹಿಸಿದ್ದರೂ ಕೂಡ ಕೇಂದ್ರ ಸರಕಾರಕ್ಕೆ ಪ್ರವಾಹ ಸಂತ್ರಸ್ತರಿಗೆ ಸಮರ್ಪಕ ನೆರವು ನೀಡಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲದಿರುವುದು ಪ್ರಜೆಗಳ ದೌರ್ಭಾಗ್ಯವಾಗಿದೆ. ಪ್ರಧಾನಿ ಮೋದಿ ಇಸ್ರೋ ಸಂಸ್ಥೆ ಚಂದ್ರಯಾನ ಪ್ರಯೋಗ ನಡೆಸಿದ ಸಂದರ್ಭದಲ್ಲಿ ಬೆಂಗಳೂರಿಗೆ ಆಗಮಿಸಿದ್ದರೂ ಸಹ ಕರ್ನಾಟಕದ ಜನರ ಕಣ್ಣೀರನ್ನು ಒರೆಸಬೇಕೆಂಬ ಮನಸ್ಸು ಬರದೇ ಇರಲು ಮೋದಿಯವರು ಹೃದಯವಂತ ಪ್ರಧಾನಿಯಲ್ಲ, ವ್ಯವಹಾರಸ್ಥ ಪ್ರಧಾನಿ ಎಂಬುದಕ್ಕೆ ಪುರಾವೆಯಾಗಿದೆ. ರಾಜ್ಯದ ನಾಯಕರನ್ನು ಭೇಟಿ ಮಾಡಿ ಪ್ರವಾಹ ಸಂತ್ರಸ್ತರಿಗೆ ಯಾವ ರೀತಿಯ ನೆರವು ನೀಡಬೇಕೆಂಬ ಬಗ್ಗೆ ಸಮಾಲೋಚನೆ ನಡೆಸದ ಮೋದಿ ತಮ್ಮ ಹೃದಯವಂತಿಕೆಯನ್ನು ಕಳೆದುಕೊಂಡಿದ್ದಾರೆ.

ಗೃಹ ಸಚಿವ ಅಮಿತ್‌ಶಾ, ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಾದ ಗಣ್ಯರು ಹೆಲಿಕಾಪ್ಟರ್‌ನಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ಖುದ್ದಾಗಿ ಸಮೀಕ್ಷೆ ನಡೆಸಿದರು. ಆದರೆ ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಪರಿಹಾರ ರೂಪದಲ್ಲಿ ಬಂದ ಹಣ ನಗಣ್ಯವೆಂದೇ ಹೇಳಬಹುದು. ಕರ್ನಾಟಕದ ಎಲ್ಲ ಸಂಸದರು ಮತ್ತು ಪಕ್ಷಗಳ ಮುಖಂಡರ ನಿಯೋಗವನ್ನು ದಿಲ್ಲಿಗೆ ಕೊಂಡೊಯ್ದು ಪ್ರವಾಹ ಸಂತ್ರಸ್ತರಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಕೊಡಿಸಬೇಕೆಂಬ ಹೊಣೆಗಾರಿಕೆಯಿಂದ ಯಡಿಯೂರಪ್ಪನವರು ತಪ್ಪಿಸಿಕೊಂಡದ್ದು ಇವರ ಮಾನವೀಯತೆ ಪ್ರಮಾಣ ಎಷ್ಟು ಕನಿಷ್ಠ ಎಂಬುದಕ್ಕೆ ಸಾಕ್ಷಿಯಾಗಿದೆ. ಯಡಿಯೂರಪ್ಪನವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಒತ್ತಾಸೆಯಿಂದ ಕರ್ನಾಟಕದಲ್ಲಿ ಆಪರೇಷನ್ ಕಮಲ ಎಂಬ ಅಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಸರಿಯಲ್ಲ. 17 ಮಂದಿ ಶಾಸಕರು ಸ್ವಾರ್ಥಕ್ಕಾಗಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದರಿಂದ ಹಿಂದಿನ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಅವರನ್ನು ಅನರ್ಹಗೊಳಿಸಿರುವುದನ್ನು ಸರ್ವೋಚ್ಚ ನ್ಯಾಯಾಲಯ ಅನುಮೋದಿಸಿದೆ. ಆದರೆ ಇವರಿಗೆ ಉಪಚುನಾವಣೆಗಳಲ್ಲಿ ಮತ್ತೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಸರ್ವೋಚ್ಚ ನ್ಯಾಯಾಲಯದ ತೀರ್ಪು ಪ್ರಶ್ನಾರ್ಹವಾಗಿದೆ. ಇವರು ಕೇವಲ ಅನರ್ಹ ಶಾಸಕರಷ್ಟೇ ಅಲ್ಲದೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ದ್ರೋಹಿಗಳು ಎಂಬ ಕಳಂಕವನ್ನು ಹೊತ್ತಿಕೊಂಡು ಇಂದು ಉಪಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವುದು ಸರಿಯಲ್ಲ.

ಕರ್ನಾಟಕದ ಪ್ರವಾಹ ಸಂತ್ರಸ್ತರ ದುಃಖ ದುಮ್ಮಾನದೊಂದಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸದ ಮುಖ್ಯಮಂತ್ರಿ ಯಡಿಯೂರಪ್ಪ ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿಯೂ ಖುದ್ದು ಪ್ರವಾಸ ಮಾಡಿ ಸಾವಿರಾರು ರೂಪಾಯಿಗಳ ಅನುದಾನವನ್ನು ಕ್ಷೇತ್ರಾಭಿವೃದ್ಧಿಯ ಹೆಸರಿನಲ್ಲಿ ಬಿಡುಗಡೆ ಮಾಡಿ, ಎಲ್ಲ 15 ಸ್ಥಾನಗಳಲ್ಲಿಯೂ ಗೆಲ್ಲುತ್ತೇವೆ ಎಂದು ಬೀಗುತ್ತಿರುವುದು ಇವರ ಕಪಟ ನಾಟಕವನ್ನು ನಾಡಿನ ಜನತೆಗೆ ತಿಳಿಸುತ್ತದೆ. ವಾಸ್ತವವಾಗಿ ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದರೂ ಅವುಗಳ ಅಭಿವೃದ್ಧಿಗೆ ಸೂಕ್ತ ಅನುದಾನವನ್ನು ಬಿಡುಗಡೆ ಮಾಡದೇ ಕೇವಲ 15 ಕ್ಷೇತ್ರಗಳ ಅಭಿವೃದ್ಧಿಗಷ್ಟೇ ಮನಸ್ಸಿಗೆ ಬಂದಂತೆ ಹಣ ಬಿಡುಗಡೆ ಮಾಡಿ ಗೆದ್ದವರೆಲ್ಲರನ್ನೂ ಮಂತ್ರಿ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿರುವುದು ಸಂವಿಧಾನಾತ್ಮಕ ಆಶಯಗಳು ಮತ್ತು ಚುನಾವಣೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಅನರ್ಹರ ಠೇವಣಿ ಹೋಗಲಿ; ಮತದಾರರ ಮಾನ ಉಳಿಯಲಿ ಎಂದು ಪ್ರಬುದ್ಧ ಚಿಂತಕ ಹಾಗೂ ಹೋರಾಟಗಾರ ದೇವನೂರ ಮಹಾದೇವ ನಾಡಿನ ಜನರಿಗೆ ನೀಡಿರುವ ಕರೆ ಔಚಿತ್ಯಪೂರ್ಣವಾಗಿದೆ. ಇವರ ಕರೆ ಪ್ರಜ್ಞಾವಂತ ಮತದಾರರ ಹೃದಯಗಳನ್ನು ಮುಟ್ಟಿ ಸದ್ಯದಲ್ಲೇ ನಡೆಯಲಿರುವ ಉಪಚುನಾವಣೆಗಳಲ್ಲಿ 15 ಜನ ಅನರ್ಹರು ಸೋತು ಕರ್ನಾಟಕದ ಪ್ರಜಾಸತ್ತೆಯನ್ನು ಉಳಿಸುವಂತಹ ಒಳ್ಳೆಯ ಸಂದರ್ಭ ನಾಡಿಗೆ ಬರಲಿ. ಈಗಾಗಲೇ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಸಂವಿಧಾನ ನಿಷ್ಠೆಕ್ಕಿಂತ ಪಕ್ಷ ನಿಷ್ಠೆಗೆ ಮಹತ್ವ ನೀಡಿ ಬಹುಮತ ಖಾತ್ರಿಯಿಲ್ಲದಿದ್ದರೂ ಸಹ ದೇವೇಂದ್ರ ಫಡ್ನವೀಸ್‌ರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಸರ್ವೋಚ್ಚ ನ್ಯಾಯಾಲಯ ಹಾಗೂ ದೇಶದಲ್ಲಿ ಚಿಲ್ಲರೆ ಮನುಷ್ಯನೆಂದು ಲೇವಡಿಗೆ ಒಳಗಾಗಿದ್ದಾರೆ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸುಮಾರು 165 ಶಾಸಕರ ಬೆಂಬಲ ಗಳಿಸಿ ಉದ್ಧವ್‌ಠಾಕ್ರೆ ನೇತೃತ್ವದ ಹೊಸ ಸರಕಾರವನ್ನು ಮಹಾರಾಷ್ಟ್ರದಲ್ಲಿ ರಚಿಸಲು ಸರ್ವೋಚ್ಚ ನ್ಯಾಯಾಲಯ ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನ ಹಾಗೂ ಪ್ರಜಾಸತ್ತೆಗಳಿಗೆ ಸಂದ ಬಹುದೊಡ್ಡ ಗೆಲುವಾಗಿದೆ. ಶಿವಸೇನೆ ಬಿಜೆಪಿಗಿಂತ ಹೆಚ್ಚು ಅಪಾಯಕಾರಿಯಾದ ಕೋಮುವಾದಿ ಪಕ್ಷವಲ್ಲ. ಮಹಾರಾಷ್ಟ್ರದ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಪ್ರಗತಿಗಳಿಗೆ ಬದ್ಧವಾದ ಪ್ರಮುಖ ಪ್ರಾದೇಶಿಕ ಪಕ್ಷವಾಗಿದೆ. ಭಾರತದಲ್ಲಿ ಅತ್ಯಂತ ಅಪಾಯಕಾರಿ ಪಕ್ಷವೆಂದರೆ ಭಾರತೀಯ ಜನತಾ ಪಕ್ಷವೇ ಹೊರತಾಗಿ ಶಿವಸೇನೆಯಂತಹ ಪ್ರಾದೇಶಿಕ ಪಕ್ಷವಲ್ಲ. ಹಿರಿಯ ರಾಷ್ಟ್ರನಾಯಕ ಎನ್‌ಸಿಪಿ ಅಧ್ಯಕ್ಷ ಶರದ್‌ಪವಾರ್ ಬಿಜೆಪಿಯನ್ನು ಅಧಿಕಾರ ಗದ್ದುಗೆಯಿಂದ ದೂರವಿಡಲು ಎನ್‌ಸಿಪಿ, ಕಾಂಗ್ರೆಸ್ ಮತ್ತು ಪಕ್ಷೇತರರನ್ನು ಒಗ್ಗೂಡಿಸಿರುವುದು ರಾಜಕೀಯವಾಗಿ ಒಳ್ಳೆಯ ನಡೆಯಾಗಿದೆ.

ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿ ರಾಜಕೀಯವಾಗಿ ಗಟ್ಟಿಗೊಳ್ಳಲು ಜಾತೀವಾದಿ ಜನತಾದಳದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಮೊದಲಾದವರು 2009ರಲ್ಲಿ ಕೈಗೊಂಡ ಅವಿವೇಕದ ನಡೆ ಮುಖ್ಯ ಕಾರಣವಾಗಿದೆ. ಅಪ್ಪ-ಮಕ್ಕಳು-ಮೊಮ್ಮಕ್ಕಳ ಹಿತರಕ್ಷಣೆಗಷ್ಟೇ ಸೀಮಿತವಾಗಿರುವ ಜೆಡಿಎಸ್ ಪಕ್ಷದಿಂದ ಭಾರತದ ಪ್ರಜಾಸತ್ತೆ, ಸಂವಿಧಾನ ಮತ್ತು ಪ್ರಜೆಗಳ ಹಿತರಕ್ಷಣೆ ಸಾಧ್ಯವಿಲ್ಲವೆಂಬ ಅರಿವು ಮತದಾರರಿಗೆ ಮೂಡಿದ ಕಾರಣ 2019ರ ಮಹಾಚುನಾವಣೆಯಲ್ಲಿ ಜನತಾದಳ ರಾಜಕೀಯವಾಗಿ ಧೂಳಿಪಟವಾಯಿತು. ಸಿದ್ದರಾಮಯ್ಯ ಅಹಿಂದ ಸಮುದಾಯಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಾಧಿಕಾರವನ್ನು ತಂದುಕೊಟ್ಟರೂ ಸಹ ಮೂಲ ಕಾಂಗ್ರೆಸಿಗರು-ವಲಸೆ ಕಾಂಗ್ರೆಸಿಗರು ಎಂಬ ಬೇಧದಿಂದಾಗಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರ ಗದ್ದುಗೆಯನ್ನೇರಲು ಸಾಧ್ಯವಾಗಲಿಲ್ಲ. ಹೆಚ್ಚು ಮಂದಿ ಶಾಸಕರನ್ನು ಹೊಂದಿದ್ದರೂ ಸಹ ಕೋಮುವಾದಿ ಬಿಜೆಪಿಯನ್ನು ದೂರವಿಡಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚನೆಗೆ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಮುಂದಾಗಿ ಧರ್ಮ ನಿರಪೇಕ್ಷತೆಯನ್ನು ಎತ್ತಿ ಹಿಡಿದಿದ್ದಾರೆ. ನಂತರದಲ್ಲಿ ಕುಟುಂಬ ರಾಜಕಾರಣಕ್ಕೆ ಶರಣಾಗಿ ಮೈತ್ರಿಧರ್ಮವನ್ನು ಧಿಕ್ಕರಿಸಿದ ಎಚ್.ಡಿ.ಕುಮಾರಸ್ವಾಮಿ ತಮ್ಮ ಸ್ವಯಂ ಕೃತಾಪರಾಧದಿಂದ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಜಿ.ಟಿ. ದೇವೇಗೌಡರಂತಹ ಹಿರಿಯ ರಾಜಕಾರಣಿ ಹಾಗೂ ಸಹಕಾರಿ ಕ್ಷೇತ್ರದ ಧುರೀಣರು ಬಹಳಷ್ಟು ನೊಂದು ಪಕ್ಷ ರಾಜಕಾರಣದಿಂದ ದೂರ ಸರಿಯುವಂತಹ ಅಸಹಾಯಕ ಸ್ಥಿತಿ ಇಂದು ಕರ್ನಾಟಕದಲ್ಲಿ ನಿರ್ಮಾಣವಾಗಿದೆ.

ಇತಿಹಾಸದಿಂದ ಪಾಠ ಕಲಿಯದ ಜೆಡಿಎಸ್ ಮುಖಂಡರು ಉಪಚುನಾವಣೆಯ ಫಲಿತಾಂಶ ಏನೇ ಬರಲಿ ಈಗಿರುವ ಸರಕಾರವನ್ನು ಬೀಳಿಸಲು ಬಿಡುವುದಿಲ್ಲ ಎಂದು ಹೇಳಿರುವುದು ಇವರ ಅವಕಾಶವಾದಿ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಐಡಿ, ಈ.ಡಿ., ಸಿಬಿಐ ಮೊದಲಾದ ಸಂಸ್ಥೆಗಳಿಂದ ದಾಳಿ, ವಿಚಾರಣೆ, ಸೆರೆವಾಸ ಮೊದಲಾದವುಗಳನ್ನು ತಪ್ಪಿಸಿಕೊಳ್ಳಲು ಮೋದಿಯವರ ಸಹವಾಸವೇ ಸರಿ ಎನ್ನುವ ತೀರ್ಮಾನಕ್ಕೆ ಎಚ್.ಡಿ. ಕುಮಾರಸ್ವಾಮಿ ಬಂದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಉಪಚುನಾವಣೆಯ ನಂತರ ಕರ್ನಾಟಕದಲ್ಲೂ ರಾಜಕೀಯ ಬದಲಾವಣೆಯಾಗಬಹುದು, ಸೋನಿಯಾ ನಿರ್ಧಾರದ ಮೇಲೆ ಮುಂದಿನ ಪರಿಸ್ಥಿತಿ ಅವಲಂಬಿತವಾಗಿದೆ ಎಂದು ಎಚ್.ಡಿ.ದೇವೇಗೌಡರು ಹೇಳಿರುವುದನ್ನು ನಾಡಿನ ಜನ ಗಮನಿಸಿದ್ದಾರೆ. ಜೆಡಿಎಸ್‌ನವರಿಗೆ ಕರ್ನಾಟಕದ ಪ್ರಜಾಪ್ರಭುತ್ವವನ್ನು ಉಳಿಸಲೇಬೇಕೆಂಬ ರಾಜಕೀಯ ಇಚ್ಛಾಶಕ್ತಿ ಇದ್ದರೆ ಉಪಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದನ್ನು ತಪ್ಪಿಸುವ ಅವಕಾಶ ದೇವೇಗೌಡ ಮೊದಲಾದ ಜೆಡಿಎಸ್ ವರಿಷ್ಠರಿಗೆ ಇದ್ದೇ ಇದೆ. ಎಲ್ಲ 15 ಕ್ಷೇತ್ರಗಳಲ್ಲಿಯೂ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಹಾಕಿರುವುದರ ಹಿಂದೆ ಕೆಟ್ಟ ರಾಜಕೀಯ ಲೆಕ್ಕಾಚಾರವಿದೆ. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಉಳಿದ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಒಬ್ಬರೇ ಅಭ್ಯರ್ಥಿಯನ್ನು ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಯಡಿಯೂರಪ್ಪನವರ ಸರಕಾರಕ್ಕೆ ಬಹುಮತ ಲಭಿಸದಂತೆ ನೋಡಿಕೊಳ್ಳಬಹುದು. ಇಂತಹ ರಾಜಕೀಯ ಪ್ರಾಮಾಣಿಕತೆ, ಇಚ್ಛಾಶಕ್ತಿ ಮತ್ತು ಹೊಣೆಗಾರಿಕೆಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರಿಗೆ ಬರಲಿ ಎಂಬುದು ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕೆಂದು ಆಶಿಸುವ ಜಾತ್ಯತೀತ ಶಕ್ತಿಗಳ ಆಶಯವಾಗಿದೆ. ಇತ್ತೀಚಿನ ದಿನಗಳಲ್ಲಿ ಶೋಷಿತ ಸಮುದಾಯಗಳಿಗೆ ಸೇರಿದ ರಾಜಕೀಯ ನಾಯಕರು ಸಾಮಾಜಿಕ ನ್ಯಾಯಕ್ಕೆ ತಿಲಾಂಜಲಿ ನೀಡಿ ಬಿಜೆಪಿ ಪಕ್ಷವನ್ನು ಸೇರುತ್ತಿರುವುದು ಅನಾರೋಗ್ಯಕರ ಬೆಳವಣಿಗೆಯಾಗಿದೆ. ಪ್ರಗತಿಪರ ಚಳಳಿಗಳಲ್ಲಿ ದುಡಿದ ಕೆಲವು ಮಂದಿ ಇಂದು ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ಹೊರಟಿರುವುದು ಅವರ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಅನರ್ಹ ಶಾಸಕರೆಲ್ಲರೂ ಹಳ್ಳಿ ಹಕ್ಕಿಗಳಲ್ಲದೇ ಪಕ್ಕಾ ಗೂಳಿಗಳು ಮತ್ತು ಗುಳ್ಳೆನರಿಗಳು ಎಂಬುದನ್ನು ಅರಿತು ಕರ್ನಾಟಕದ ಪ್ರಜ್ಞಾವಂತ ಮತದಾರರು ಇವರನ್ನು ಉಪಚುನಾವಣೆಯಲ್ಲಿ ಸೋಲಿಸಿ ಕರ್ನಾಟಕದ ಪ್ರಜಾಸತ್ತೆಯನ್ನು ರಕ್ಷಿಸಬೇಕು.

Writer - ಡಾ.ಬಿ.ಪಿ.ಮಹೇಶ ಚಂದ್ರ ಗುರು

contributor

Editor - ಡಾ.ಬಿ.ಪಿ.ಮಹೇಶ ಚಂದ್ರ ಗುರು

contributor

Similar News