ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸು: ಶೋಭಾ ಕರಂದ್ಲಾಜೆ

Update: 2019-12-02 13:53 GMT

ಬೆಂಗಳೂರು, ಡಿ.2: ಸಿದ್ದರಾಮಯ್ಯ ಕೇವಲ 62 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. ಯಾವ ಶಾಸಕರನ್ನು ನಂಬಿ ಸರಕಾರ ರಚಿಸಲಿದ್ದಾರೆ? ಯಾವ ರಾಜ್ಯದಲ್ಲಿ ಸರಕಾರ ರಚಿಸಲಿದ್ದಾರೆ? ಎಂಬುದನ್ನು ಅವರೇ ಹೇಳಬೇಕು. ಕರ್ನಾಟಕದಲ್ಲಂತೂ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇನ್ನು ಮುಂದೆ ಕಾಂಗ್ರೆಸ್ ಜೊತೆ ಹೋಗುವುದೇ ಇಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಸರಕಾರ ರಚನೆಗೆ 113 ಶಾಸಕರ ಬೆಂಬಲ ಬೇಕೆಂಬ ಕನಿಷ್ಠ ಲೆಕ್ಕಾಚಾರವೂ ಸಿದ್ದರಾಮಯ್ಯಗೆ ಗೊತ್ತಿಲ್ಲ ಎಂದು ಟೀಕಿಸಿದರು.

ಜನರನ್ನು ದಾರಿ ತಪ್ಪಿಸಲೆಂದೇ ಸಿದ್ದರಾಮಯ್ಯ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸು ಆಗಿದ್ದಾರೆ. ಪ್ರತಿಪಕ್ಷದ ನಾಯಕನ ಸ್ಥಾನ ಉಳಿಸಿಕೊಳ್ಳಲು ಅವರು ಹೋರಾಟ ನಡೆಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಕುಮಾರಸ್ವಾಮಿ ಜೆಡಿಎಸ್ ಸರಕಾರದ ಕನಸು ಕಾಣುತ್ತಿದ್ದಾರೆ. ಗೋಕಾಕ್‌ನ ತಮ್ಮ ಪಕ್ಷದ ಅಭ್ಯರ್ಥಿ ಅಶೋಕ್ ಪೂಜಾರಿಯನ್ನು ಸಚಿವರಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಷ್ಟಕ್ಕೂ ಇವರಿಗೆ ಬೆಂಬಲ ಕೊಡುವವರು ಯಾರೂ ಎಂದು ಸ್ವತಃ ಕುಮಾರಸ್ವಾಮಿ ಹೇಳಬೇಕು. ಜನರನ್ನು ದಾರಿತಪ್ಪಿಸುವ ಕಲೆ ಅವರಿಗೆ ಕರಗತವಾಗಿದೆ ಎಂದು ಅವರು ಹೇಳಿದರು.

ಡಿ.9ರ ನಂತರ ಸಿಹಿ ಸುದ್ದಿ ಪ್ರಕಟಿಸುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮನೆಗೆ ಕಳುಹಿಸುವುದೇ ಆ ಸುದ್ದಿ ಆಗಲಿದೆ. ಸಿದ್ದರಾಮಯ್ಯ ಜಾತಿ ರಾಜಕಾರಣದಲ್ಲಿಯೇ ತೊಡಗಿಸಿಕೊಂಡರು. ಕುಮಾರಸ್ವಾಮಿ ಸಹ ಇದೇ ಹಾದಿಯಲ್ಲಿ ಮುಂದುವರೆದರು. ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿದಾಗ ಯಾರೊಬ್ಬರೂ ಬೇಸರ ವ್ಯಕ್ತಪಡಿಸಲಿಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂವರೆ ದಶಕದ ನಂತರ ಒಂದೇ ಪಕ್ಷದ ಆಡಳಿತಗಳಿವೆ. ಈ ಹಿಂದೆ ದಕ್ಷಿಣದ ಕೆಲ ರಾಜ್ಯಗಳು ಇದರ ಲಾಭವನ್ನು ಮಾಡಿಕೊಂಡಿವೆ. ಇದೀಗ ರಾಜ್ಯಕ್ಕೆ ಸದಾವಕಾಶ ದೊರೆತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರಕಾರದೊಂದಿಗೆ ಸಮನ್ವಯತೆ ಸಾಧಿಸಿಲ್ಲ ಎಂದು ಅವರು ದೂರಿದರು.

ಚೀನಾದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಪ್ರಧಾನಿ ಆಹ್ವಾನಿಸಿದರೂ ಸಿದ್ದರಾಮಯ್ಯ ಹೋಗಲಿಲ್ಲ. ನೀತಿ ಆಯೋಗದ ಸಭೆಗಳಲ್ಲೂ ಭಾಗವಹಿಸಲಿಲ್ಲ. ಕೇಂದ್ರದ ಯೋಜನೆಗಳನ್ನು ತರುವಲ್ಲಿ ವಿಫಲರಾದರು ಎಂದು ಅವರು ದೂರಿದರು.

ಮೋದಿಯನ್ನು ಸಿದ್ದರಾಮಯ್ಯ ರಾಜಕೀಯವಾಗಿ ನೋಡಿದರೇ ಹೊರತು ಪ್ರಧಾನಿಯಾಗಿ ನೋಡಲಿಲ್ಲ. ಇದರ ಪರಿಣಾಮವಾಗಿ ರಾಜ್ಯಕ್ಕೆ ದೊಡ್ಡ ನಷ್ಟವಾಯಿತು. ರಾಜ್ಯಕ್ಕೆ ಬರಬೇಕಿದ್ದ ವಿದೇಶಿ ನೇರ ಬಂಡವಾಳ ಇತರ ರಾಜ್ಯಗಳಿಗೆ ಹೋಯಿತು ಎಂದು ಅವರು ಆರೋಪಿಸಿದರು.

ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಕಾಣಲಿದ್ದು, ಹೊಸ ಬದಲಾವಣೆಯಾಗಲಿದೆ. ಇಬ್ಬರೂ ನಾಯಕರು ಒಟ್ಟಿಗೆ ನಾಡಿನ ನೆಲ-ಜಲ-ಭಾಷೆಗಾಗಿ ಶ್ರಮಿಸಲಿದ್ದಾರೆ. ಬಚಾವತ್ ಆಯೋಗದ ಶಿಫಾರಸ್ಸಿನಂತೆ ಕರ್ನಾಟಕ ಕೃಷ್ಣಾ ನದಿಯ 170 ಟಿಎಂಸಿ ನೀರನ್ನು ಬಳಸಿಕೊಳ್ಳುವತ್ತ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರ ರೂಪಿಸಿದ ವೈಜ್ಞಾನಿಕವಲ್ಲದ ಎತ್ತಿನಹೊಳೆ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್, ಸಹ ವಕ್ತಾರ ಎಸ್.ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News