ಪೇದೆಗೆ ಚಾಕು ಇರಿತ ಪ್ರಕರಣ: ಆರೋಪಿಗೆ ಗುಂಡಿಕ್ಕಿ ಬಂಧನ

Update: 2019-12-02 14:01 GMT

ಬೆಂಗಳೂರು, ಡಿ.2: ಪೊಲೀಸ್ ಪೇದೆ ನಾಗರಾಜ್ ಅವರಿಗೆ ಚಾಕು ಇರಿತ ಪ್ರಕರಣ ಸಂಬಂಧ ಆರೋಪಿಗೆ ಪಿಸ್ತೂಲಿನಿಂದ ಗುಂಡು ಹೊಡೆದು ಬಂಧಿಸುವಲ್ಲಿ ಇಲ್ಲಿನ ಆರ್‌ಟಿನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಮುಂಡಿ ನಗರದ ಮರ್ದಾನ್ ಖಾನ್(29) ಬಂಧಿತ ಆರೋಪಿಯಾಗಿದ್ದು, ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಸೋಮವಾರ ಬೆಳಗ್ಗೆ, ಆರೋಪಿಯನ್ನು ಮಹಜರು ಮಾಡಲು ಎಚ್‌ಎಂಟಿ ಬ್ಲಾಕ್‌ನ ಈರುಳ್ಳಿ ಮೈದಾನಕ್ಕೆ ಕರೆದುಕೊಂಡು ಇನ್ಸ್‌ಪೆಕ್ಟರ್ ಮಿಥುನ್ ಶಿಲ್ಪಿ ನೇತೃತ್ವದ ತಂಡ ಹೋಗಿತ್ತು. ಈ ವೇಳೆ ಮರ್ದಾನ್ ಖಾನ್ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆತನನ್ನು ಬೆನ್ನಟ್ಟಿದ ಪೊಲೀಸ್ ಸಿಬ್ಬಂದಿ ಮೇಲೆ ಚಾಕು, ಕಲ್ಲಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಇನ್ಸ್‌ಪೆಕ್ಟರ್ ಸೂಚಿಸಿದ್ದಾರೆ. ಆದರೂ ಮರ್ದಾನ್ ಖಾನ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಆತ್ಮ ರಕ್ಷಣೆಗಾಗಿ ಮತ್ತೆರಡು ಸುತ್ತು ಗುಂಡು ಹಾರಿಸಿದ್ದಾರೆ. ಇವೆರಡೂ ಗುಂಡುಗಳು ಮರ್ದಾನ್‌ನ 2 ಕಾಲುಗಳಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಏನಿದು ಪ್ರಕರಣ?: ನ.30ರಂದು ಆರ್‌ಟಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಯುವಕರು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಸಂಬಂಧ ದೂರು ಬಂದಿತ್ತು. ಇದರ ಅನ್ವಯ ಸ್ಥಳಕ್ಕೆ ಧಾವಿಸಿದ ಪೇದೆ ಎಚ್.ಸಿ.ನಾಗರಾಜ್ ಮತ್ತು ಚಂದ್ರಕಾಂತ್ ಅವರು, ಆರೋಪಿ ಮರ್ದಾನ್ ಖಾನ್ ಅನ್ನು ಹಿಡಿಯಲು ಯತ್ನಿಸಿದಾಗ ಚಾಕು ಇರಿದು ಪರಾರಿಯಾಗಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿ ಮಾರ್ದನ್ ಖಾನ್ ಮೇಲೆ ಎರಡು ಹಲ್ಲೆ, 1 ದೊಂಬಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News