ರಾಜ್ಯಸಭಾ ಉಪಚುನಾವಣೆ: ಕೆ.ಸಿ.ರಾಮಮೂರ್ತಿ ಅವಿರೋಧ ಆಯ್ಕೆ ಸಾಧ್ಯತೆ

Update: 2019-12-02 14:15 GMT
ನಾಮಪತ್ರ ಸಲ್ಲಿಸುತ್ತಿರುವ ಕೆ.ಸಿ.ರಾಮಮೂರ್ತಿ (ಫೈಲ್ ಚಿತ್ರ)

ಬೆಂಗಳೂರು, ಡಿ. 2: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಕೆ.ಸಿ.ರಾಮಮೂರ್ತಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ರಾಮಮೂರ್ತಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.12ರಂದು ಉಪ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಸಲು ಡಿ.2ರ ಮಧ್ಯಾಹ್ನ 3 ಗಂಟೆಯ ವರೆಗೆ ಸಮಯಾವಕಾಶ ಕಲ್ಪಿಸಲಾಗಿತ್ತು. ಆದರೆ, ಕಾಂಗ್ರೆಸ್-ಜೆಡಿಎಸ್ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವ ತಮಿಳುನಾಡು ಮೂಲದ ಡಾ.ಕೆ.ಪದ್ಮರಾಜನ್ ಮತ್ತು ವಿಜಯಪುರ ಮೂಲದ ವೆಂಕಟೇಶ್ವರ ಸ್ವಾಮಿ ಅವರ ನಾಮಪತ್ರ ಸೂಚಕರಾಗಿ 10 ಮಂದಿ ಶಾಸಕರ ಸಹಿ ಇಲ್ಲದ ಕಾರಣ ತಿರಸ್ಕೃತವಾಗುವ ಸಾಧ್ಯತೆಗಳಿವೆ.

ಹೀಗಾಗಿ ಕೆ.ಸಿ.ರಾಮಮೂರ್ತಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ನಾಳೆ (ಡಿ.3) ಉಮೇದುವಾರಿಕೆ ಪರಿಶೀಲನೆ ನಡೆಯಲಿದ್ದು, ಡಿ.5ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಕೊನೆಯ ಕ್ಷಣದಲ್ಲಿ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರ್ಧಾರವನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News