ಟೈಪ್-2 ಮಧುಮೇಹ ರೋಗಿಗಳಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ನೈಸರ್ಗಿಕ ಮಾರ್ಗಗಳು ಇಲ್ಲಿವೆ

Update: 2019-12-02 15:31 GMT

ಇನ್ಸುಲಿನ್ ನಮ್ಮ ಶರೀರದಲ್ಲಿ ಉತ್ಪತ್ತಿಯಾಗುವ ಮಹತ್ವದ ಹಾರ್ಮೋನ್ ಆಗಿದೆ. ಇದು ಶರೀರದ ಹಲವಾರು ಕಾರ್ಯಗಳಲ್ಲಿ ಪಾತ್ರವನ್ನು ಹೊಂದಿದೆಯಾದರೂ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಶರೀರದಲ್ಲಿಯ ಜೀವಕೋಶಗಳನ್ನು ಸಿದ್ಧಗೊಳಿಸುವುದು ಅದರ ಮುಖ್ಯ ಕೆಲಸವಾಗಿದೆ. ಇನ್ಸುಲಿನ್ ಉತ್ಪತ್ತಿ ಕಡಿಮೆಯಾದರೂ ಕಷ್ಟ,ಅತಿಯಾದರೂ ಕಷ್ಟ. ಮಧುಮೇಹಕ್ಕೂ ಇನ್ಸುಲಿನ್ ಉತ್ಪಾದನೆಯಲ್ಲಿ ಏರಿಳಿತಗಳಿಗೂ ಅವಿನಾಭಾವ ಸಂಬಂಧವಿದೆ.

ಇನ್ಸುಲಿನ್ ಉತ್ಪಾದನೆಯಲ್ಲಿ ಕೊರತೆಯಾದರೆ ಅದು ಟೈಪ್-1 ಮಧುಮೇಹಕ್ಕೆ ಕಾರಣವಾಗುತ್ತದೆ. ಟೈಪ್-2 ಮಧುಮೇಹಿಗಳಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಅನ್ನು ಬಳಸಿಕೊಳ್ಳಲು ಶರೀರವು ಅಸಮರ್ಥವಾಗುತ್ತದೆ ಮತ್ತು ಮೇದೋಜ್ಜೀರಕ ಗ್ರಂಥಿಯು ಹೆಚ್ಚೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸುತ್ತಿರುತ್ತದೆ. ಅತಿಯಾದ ಇನ್ಸುಲಿನ್ ಉತ್ಪಾದನೆಯು ಅಪಾಯಕಾರಿಯಾಗಿದ್ದು,ಅದು ಟೈಪ್-2 ಮಧುಮೇಹ,ಅಧಿಕ ರಕ್ತದೊತ್ತಡ,ಫ್ಯಾಟಿ ಲಿವರ್,ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿಸಿಒಎಸ್)ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಶರೀರದ ವಿವಿಧ ಅಂಗಾಂಗಗಳಿಗೆ ರಕ್ತವನ್ನು ಪೂರೈಸುವ ಅಪಧಮನಿಗಳು ಬಿರುಸುಗೊಳ್ಳುತ್ತವೆ ಮತ್ತು ಇದರಿಂದ ಹೃದಯಾಘಾತ ಉಂಟಾಗುವ ಅಪಾಯವು ಹೆಚ್ಚುತ್ತದೆ. ಇಂತಹ ಅಪಾಯಗಳಿಂದ ದೂರವಿರಲು ಶರೀರದಲ್ಲಿ ಇನ್ಸುಲಿನ್ ಮಟ್ಟವನ್ನು ನಿಭಾಯಿಸುವುದು ಅಗತ್ಯವಾಗುತ್ತದೆ. ಅದಕ್ಕಾಗಿ ಕೆಲವು ಪರಿಣಾಮಕಾರಿ ನೈಸರ್ಗಿಕ ಪರಿಹಾರಗಳು ಇಲ್ಲಿವೆ.......

► ಆಹಾರಕ್ಕೆ ದಾಲ್ಚಿನ್ನಿಯನ್ನು ಸೇರಿಸಿ

ಪ್ರತಿದಿನದ ಆಹಾರದಲ್ಲಿ ಸಣ್ಣ ಪ್ರಮಾಣದಲ್ಲಿ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳುವುದರಿಂದ ಶರೀರದಲ್ಲಿಯ ಇನ್ಸುಲಿನ್ ಸರಿಯಾದ ಮಟ್ಟಕ್ಕೆ ತಗ್ಗಿಸಲ್ಪಡುತ್ತದೆ. ಹೀಗಾಗಿ ಆಹಾರಕ್ಕೆ ಸ್ವಲ್ಪ ದಾಲ್ಚಿನ್ನಿ ಹುಡಿಯನ್ನು ಸಿಂಪಡಿಸುವುದರಿಂದ ಸ್ವಾದವೂ ಹೆಚ್ಚುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವೂ ನಿಯಂತ್ರಣದಲ್ಲಿರುತ್ತದೆ.

► ಆ್ಯಪಲ್ ಸಿಡರ್ ವಿನೆಗರ್ ಸೇವಿಸಿ

 ಆ್ಯಪಲ್ ಸಿಡರ್ ವಿನೆಗರ್ ಸೇವಿಸುವ ಮೂಲಕ ಶರೀರದಲ್ಲಿಯ ಇನ್ಸುಲಿನ್ ಹಾರ್ಮೋನ್ ಏರಿಳಿತಗಳನ್ನು ಹತೋಟಿಯಲ್ಲಿರಿಸಬಹುದು. ಆ್ಯಪಲ್ ಸಿಡರ್ ವಿನೆಗರ್ ಹಲವಾರು ಆರೋಗ್ಯಲಾಭಗಳನ್ನು ಹೊಂದಿದ್ದು,ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಬಳಕೆಯಾಗುತ್ತಿದೆ. ಶರೀರದಲ್ಲಿ ಹೆಚ್ಚು ಇನ್ಸುಲಿನ್ ಉತ್ಪತ್ತಿಯಾಗುತ್ತಿದ್ದರೆ ಪ್ರತಿ ದಿನ ಊಟಕ್ಕೆ ಅರ್ಧ ಗಂಟೆ ಮೊದಲು ಒಂದು ಗ್ಲಾಸ್ ನೀರಿಗೆ ಎರಡು ಟೀ ಸ್ಪೂನ್ ಆ್ಯಪಲ್ ಸಿಡರ್ ವಿನೆಗರ್ ಸೇರಿಸಿಕೊಂಡು ಸೇವಿಸುವುದರಿಂದ ಅದನ್ನು ನಿಯಂತ್ರಿಸಬಹುದು.

 ► ಹೆಚ್ಚಿನ ಪ್ರಮಾಣದಲ್ಲಿ ನಾರು ಸೇವಿಸಿ

ದಿನನಿತ್ಯ ಸೇವಿಸುವ ಆಹಾರದಲ್ಲಿ ನಾರು ಹೆಚ್ಚಿನ ಪ್ರಮಾಣದಲ್ಲಿರಬೇಕು. ನಾರಿನ ಕೊರತೆಯಿರುವ ಆಹಾರವು ಬಹುಬೇಗನೆ ಜೀರ್ಣಗೊಳ್ಳುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವು ದಿಢೀರ್ ಆಗಿ ಹೆಚ್ಚಾಗುತ್ತದೆ. ನಾರು ಜೀರ್ಣಗೊಳ್ಳಲು ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ ಮತ್ತು ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವು ಕ್ರಮೇಣ ಹೆಚ್ಚುತ್ತದೆ. ಮಧುಮೇಹಿಗಳಿಗೆ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನಾರು ಅಧಿಕವಾಗಿರುವ ಆಹಾರ ಸೇವನೆ ಅತ್ಯುತ್ತಮ ನೈಸರ್ಗಿಕ ವಿಧಾನವಾಗಿದೆ.

► ಆಹಾರದಲ್ಲಿ ಕಾರ್ಬೊಹೈಡ್ರೇಟ್ ಕಡಿಮೆ ಪ್ರಮಾಣದಲ್ಲಿರಲಿ

ಶರೀರದಲ್ಲಿ ಇನ್ಸುಲಿನ್ ಅತಿಯಾಗಿ ಉತ್ಪಾದನೆಯಾಗುತ್ತಿದ್ದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್‌ಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಕಾರ್ಬೊಹೈಡ್ರೇಟ್‌ಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಹೀಗಾಗಿ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಮಟ್ಟ ಅಥವಾ ಇನ್ಸುಲಿನ್ ಸಮಸ್ಯೆಗಳನ್ನು ಹೊಂದಿರುವವರು ಕಡಿಮೆ ಕಾರ್ಬೊಹೈಡ್ರೇಟ್‌ಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸುವುದು ಅಗತ್ಯವಾಗುತ್ತದೆ.

► ದೈಹಿಕವಾಗಿ ಕ್ರಿಯಾಶೀಲರಾಗಿರಿ

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಮತ್ತು ಶರೀರವು ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸುವಂತೆ ಮಾಡಲು ಅತ್ಯಂತ ಮಹತ್ವದ ಮಾರ್ಗವೆಂದರೆ ದೈಹಿಕವಾಗಿ ಕ್ರಿಯಾಶೀಲರಾಗಿರುವುದು. ದಿನವಿಡೀ ಒಂದೇ ಜಾಗದಲ್ಲಿ ಕುಳಿತಿದ್ದರೆ ಅಥವಾ ಸೋಮಾರಿಯಾಗಿ ಮಲಗಿಕೊಂಡಿದ್ದರೆ ಗ್ಲುಕೋಸ್‌ನ್ನು ಬಳಸಿಕೊಳ್ಳಲು ಶರೀರಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಈ ಗ್ಲುಕೋಸ್ ರಕ್ತದಲ್ಲಿ ಕರಗುವ ಮೂಲಕ ಅಸ್ವಸ್ಥತೆಯನ್ನುಂಟು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News