ಕಾಂಗ್ರೆಸ್ ಅಭ್ಯರ್ಥಿಗೆ ಠೇವಣಿಯೂ ಸಿಗುವುದಿಲ್ಲ: ಅನರ್ಹ ಶಾಸಕ ಸೋಮಶೇಖರ್

Update: 2019-12-02 16:23 GMT

ಬೆಂಗಳೂರು, ಡಿ. 2: ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ. ನಾಗರಾಜ್ ಹರಕೆಯ ಕುರಿಯಾಗಿದ್ದು, ಅವರಿಗೆ ಕ್ಷೇತ್ರದಲ್ಲಿ ಠೇವಣಿಯೂ ಸಿಗುವುದಿಲ್ಲ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಸೋಮವಾರ ಕ್ಷೇತ್ರ ವ್ಯಾಪ್ತಿಯ ಗೋಣಿಪುರದ ಕೆ.ಗೊಲ್ಲಹಳ್ಳಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಜೆಡಿಎಸ್ ಮುಖಂಡರೊಂದಿಗೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದ್ದು, ನಾಗರಾಜ್‌ರನ್ನು ಬಲಿಪಶು ಮಾಡಲು ಕಣಕ್ಕಿಳಿಸಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದು, ಈ ಸಂಬಂಧ ಎರಡೂ ಪಕ್ಷಗಳ ಮುಖಂಡರು ಚರ್ಚಿಸಿರುವ ಆಡಿಯೋ ನನ್ನ ಬಳಿ ಇದ್ದು ಸೂಕ್ತ ಸಂದರ್ಭದಲ್ಲಿ ಅದನ್ನು ಬಿಡುಗಡೆ ಮಾಡುತ್ತೇನೆಂದು ಸೋಮಶೇಖರ್ ಎಚ್ಚರಿಸಿದರು.

ಕ್ರಿಮಿನಲ್ ಹಿನ್ನೆಲೆ: ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ವಂಚನೆ ಪ್ರಕರಣದಲ್ಲಿದ್ದು, ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಇಂತಹ ಅಭ್ಯರ್ಥಿಯ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ ಎಂದು ಸೋಮಶೇಖರ್ ಪ್ರತಿಕ್ರಿಯೆಗೆ ನಿರಾಕರಿಸಿದರು.

ಮೈತ್ರಿ ಸರಕಾರದ ಆಡಳಿತದ ವೇಳೆ ರಾಜಕಾರಣಿಗಳ ಟೆಲಿಫೋನ್ ಕದ್ದಾಲಿಕೆ ಮಾಡಿದ್ದರೆ ಪರವಾಗಿಲ್ಲ. ಆದರೆ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿ ಟೆಲಿಫೋನ್ ಕದ್ದಾಲಿಕೆ ಮಾಡಿ ಅಪಮಾನ ಮಾಡಿದ್ದು ಎಷ್ಟು ಸರಿ ಎಂದು ಸೋಮಶೇಖರ್ ಪ್ರಶ್ನಿಸಿದರು.

ಮತ್ತಷ್ಟು ದೃಢ: ಉಪಚುನಾವಣೆ ಫಲಿತಾಂಶದ ಬಳಿಕ ಸರಕಾರ ಪತನವಾಗಲಿದೆ ಎಂಬ ಕಾಂಗ್ರೆಸ್-ಜೆಡಿಎಸ್ ಮುಖಂಡರ ಹೇಳಿಕೆಗಳಲ್ಲಿ ಹುರುಳಿಲ್ಲ. ಫಲಿತಾಂಶದ ಬಳಿಕ ಬಿಎಸ್‌ವೈ ನೇತೃತ್ವದ ಸರಕಾರ ಮತ್ತಷ್ಟು ಸದೃಢಗೊಳ್ಳಲಿದೆ. ಮುಂದಿನ ಮೂರುವರೆ ವರ್ಷವೂ ಅಡಳಿತ ನಡೆಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News