ಬಿಡಬ್ಲ್ಯುಎಫ್ ಟೂರ್ ಪೈನಲ್ಸ್ : ಪಿ.ವಿ.ಸಿಂಧುಗೆ ಅವಕಾಶ

Update: 2019-12-03 05:49 GMT

ಹೈದರಾಬಾದ್, ಡಿ.2: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪ್ರತಿಷ್ಠಿತ ಬಿಡಬ್ಲುಎಫ್ ಟೂರ್ ಫೈನಲ್ಸ್ ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶ ಗಿಟ್ಟಿಸಿಕೊಂಡ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಟೂರ್ನಿಗೆ ಅರ್ಹತೆ ಪಡೆದಿರುವ ಶಟ್ಲರ್‌ಗಳ ಪಟ್ಟಿಯನ್ನು ಸೋಮವಾರ ಘೋಷಿಸಲಾಗಿದೆ.

ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ವಿಜೇತೆ ಸಿಂಧು ಹೊರತುಪಡಿಸಿ ಬೇರ್ಯಾವ ಭಾರತೀಯನೂ ಐದು ವಿಭಾಗಗಳಲ್ಲಿ ಅರ್ಹತೆ ಪಡೆದಿಲ್ಲ. ಕ್ಯಾಲೆಂಡರ್ ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಗ್ರ-8 ಆಟಗಾರ್ತಿಯರು ವರ್ಷಾಂತ್ಯದಲ್ಲಿ ನಡೆಯುವ ಟೂರ್ನಿಗೆ ಅರ್ಹತೆ ಪಡೆಯುತ್ತಾರೆ. ಈ ವರ್ಷದ ಟೂರ್ನಿಯು ಡಿ.11ರಿಂದ ಗ್ವಾಂಗ್‌ಝೌನಲ್ಲಿ ಆರಂಭವಾಗಲಿದೆ.

ಸಿಂಧು ವಿಶ್ವ ಚಾಂಪಿಯನ್ ಪ್ರಶಸ್ತಿ ಗೆಲ್ಲದೇ ಇದ್ದರೆ ಫೈನಲ್ಸ್‌ನಲ್ಲಿ ಅರ್ಹತೆ ಪಡೆಯುತ್ತಿರಲಿಲ್ಲ. ಸಿಂಧು ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿದ್ದಾರೆ.

ಸಿಂಧು ವಿಶ್ವ ಟೂರ್ ರ್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿದ್ದಾರೆ. 40 ಸ್ಪರ್ಧಾಳುಗಳ ಪೈಕಿ ಟೂರ್ ರ್ಯಾಂಕಿಂಗ್‌ನಲ್ಲಿ ಅಗ್ರ-9ರಿಂದ ಹೊರಗಿರುವ ಏಕೈಕ ಆಟಗಾರ್ತಿಯಾಗಿದ್ದಾರೆ.

 ಸೈನಾ ನೆಹ್ವಾಲ್ ಜನವರಿಯಲ್ಲಿ ಇಂಡೋನೇಶ್ಯ ಮಾಸ್ಟರ್ಸ್ ಪ್ರಶಸ್ತಿ ಜಯಿಸಿದ್ದರು. ಸಿಂಧು ವಿಶ್ವ ಚಾಂಪಿಯನ್ ಕಿರೀಟವನ್ನು ಧರಿಸಿದ್ದರು. ಈ ಇಬ್ಬರನ್ನು ಹೊರತುಪಡಿಸಿ ಬೇರೆ ಆಟಗಾರ್ತಿಯರು ಪ್ರಮುಖ ಸಿಂಗಲ್ಸ್ ಪ್ರಶಸ್ತಿ ಜಯಿಸಿಲ್ಲ. ಭಾರತ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜುಲೈನಲ್ಲಿ ಥಾಯ್ಲೆಂಡ್ ಓಪನ್ ಪ್ರಶಸ್ತಿ ಜಯಿಸಿದ್ದರು. ಆದರೆ, ಗಾಯದ ಸಮಸ್ಯೆಯ ಕಾರಣದಿಂದ ಹಲವು ಟೂರ್ನಿಗಳಿಂದ ಹೊರಗುಳಿದ ಹಿನ್ನೆಲೆಯಲ್ಲಿ ತಮ್ಮ ವಿಶ್ವ ರ್ಯಾಂಕಿಂಗ್‌ನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಳಪೆ ಫಾರ್ಮ್‌ನಲ್ಲಿರುವ ಸೈನಾ ವಿಶ್ವ ರ್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿದ್ದರೆ, ರಿಯಾ ಮುಖರ್ಜಿ 63ನೇ ಸ್ಥಾನದಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪಾರುಪಲ್ಲಿ ಕಶ್ಯಪ್ ಭಾರತದ ಅಗ್ರ ರ್ಯಾಂಕಿನ ಆಟಗಾರ(16)ನಾಗಿದ್ದು, ಸಾಯಿ ಪ್ರಣೀತ್(ನಂ.17) ಹಾಗೂ ಕಿಡಂಬಿ ಶ್ರೀಕಾಂತ್(ನಂ.18)ಬಳಿಕದ ಸ್ಥಾನದಲ್ಲಿದ್ದಾರೆ.

ಭಾರತದ ಶ್ರೇಷ್ಠ ಡಬಲ್ಸ್ ಆಟಗಾರರಾದ ಸಾತ್ವಿಕ್ ಹಾಗೂ ಚಿರಾಗ್ 22ನೇ ರ್ಯಾಂಕಿನಲ್ಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ 21ನೇ ಸ್ಥಾನದಲ್ಲಿದ್ದಾರೆ. ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಮಿಕ್ಸೆಡ್ ಡಬಲ್ಸ್‌ನಲ್ಲಿ 22ನೇ ಸ್ಥಾನದಲ್ಲಿದ್ದಾರೆ.

ಬಿಡುವಿಲ್ಲದ ಅಂತರ್‌ರಾಷ್ಟ್ರೀಯ ಕ್ಯಾಲೆಂಡರ್‌ನ್ನು ದೂಷಿಸಿದ ಭಾರತದ ಮುಖ್ಯ ಕೋಚ್ ಪಿ.ಗೋಪಿಚಂದ್ ಭಾರತೀಯ ಶಟ್ಲರ್‌ಗಳ ಕಳಪೆ ಪ್ರದರ್ಶನಕ್ಕೆ ಗಾಯದ ಸಮಸ್ಯೆ ಕಾರಣ ಎಂದಿದ್ದಾರೆ.

ಮೊದಲಿನ ಲಯಕ್ಕೆ ಮರಳುವ ಉದ್ದೇಶದಿಂದ ಸೈನಾ ಹಾಗೂ ಶ್ರೀಕಾಂತ್ ಮುಂದಿನ ತಿಂಗಳು ನಡೆಯಲಿರುವ ಪ್ರೀಮಿಯರ್ ಬ್ಯಾಡಿ್ಮಂಟನ್ ಲೀಗ್‌ನಿಂದ ದೂರ ಉಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News