ಇತಿಹಾಸ ನಿರ್ಮಿಸಿದ ನೇಪಾಳದ ಅಂಜಲಿ ಚಂದ್

Update: 2019-12-03 06:01 GMT

ಪೊಖಾರ, ಡಿ.2: ಮಾಲ್ಡೀವ್ಸ್ ತಂಡದ ವಿರುದ್ಧ ಒಂದೂ ರನ್ ನೀಡದೇ 6 ವಿಕೆಟ್‌ಗಳನ್ನು ಕಬಳಿಸಿದ ನೇಪಾಳದ ಅಂಜಲಿ ಚಂದ್ ಸೋಮವಾರ ಇತಿಹಾಸ ನಿರ್ಮಿಸಿದ್ದಾರೆ.

ಬ್ಯಾಟಿಂಗ್ ಮಾಡಿದ ಮಾಲ್ಡೀವ್ಸ್ ಕೇವಲ 16 ರನ್ ಗಳಿಸಿತು. ಆತಿಥೇಯರು 0.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿದರು. 115 ಎಸೆತಗಳು ಬಾಕಿ ಇರುವಾಗಲೇ 10 ವಿಕೆಟ್‌ಗಳ ಜಯ ದಾಖಲಿಸಿದರು.

ಅಂಜಲಿ 7ನೇ ಓವರ್‌ನಲ್ಲಿ ಮೂರು ವಿಕೆಟ್ ಹಾಗೂ 9ನೇ ಓವರ್‌ನಲ್ಲಿ ಇನ್ನೆರಡು ವಿಕೆಟ್ ಪಡೆದರು. 11ನೇ ಓವರ್‌ನಲ್ಲಿ ಇನ್ನೊಂದು ವಿಕೆಟ್ ಪಡೆದು ಮಾಲ್ಡೀವ್ಸ್‌ಗೆ ಮಾರಕವಾದರು.

ಮಧ್ಯಮವೇಗದ ಬೌಲರ್ ಅಂಜಲಿ ಇಡೀ ಪಂದ್ಯದಲ್ಲಿ ಕೇವಲ 13 ಎಸೆತಗಳನ್ನು ಎಸೆದಿದ್ದರು.

ಅತ್ಯಮೋಘ ಸಾಧನೆ ಮಾಡಿರುವ ಅಂಜಲಿ ವನಿತೆಯರ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿ ಹೊಸ ದಾಖಲೆ ನಿರ್ಮಿಸಿದರು. ಅಂಜಲಿಗಿಂತ ಮೊದಲು 2019ರಲ್ಲಿ ಚೀನಾದ ವಿರುದ್ಧ ಮಾಲ್ಡೀವ್ಸ್‌ನ ಮಾಸ್ ಎಲಿಸಾ 3 ರನ್‌ಗೆ 6 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

4 ತಂಡಗಳ ಟೂರ್ನಿಯಲ್ಲಿ ನೇಪಾಳ ತಂಡ ಮಾಲ್ಡೀವ್ಸ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಸ್ಪರ್ಧಿಸುತ್ತಿದೆ. ರೌಂಡ್ ರಾಬಿನ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಎರಡು ತಂಡಗಳು ಚಿನ್ನದ ಪದಕದ ಸುತ್ತಿಗೆ ತೇರ್ಗಡೆಯಾಗಲಿವೆ.

ಪುರುಷರ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ವೇಗದ ಬೌಲರ್ ದೀಪಕ್ ಚಹಾರ್ ಶ್ರೇಷ್ಠ ಬೌಲಿಂಗ್ ಸಂಘಟಿಸಿದ ಸಾಧನೆ ಮಾಡಿದ್ದಾರೆ. ದೀಪಕ್ ಬಾಂಗ್ಲಾದೇಶ ವಿರುದ್ಧ ನಾಗ್ಪುರದಲ್ಲಿ ನ.1ರಂದು ನಡೆದಿದ್ದ ಟ್ವೆಂಟಿ-20 ಪಂದ್ಯದಲ್ಲಿ 3.2 ಓವರ್‌ಗಳಲ್ಲಿ ಕೇವಲ 7 ರನ್ ನೀಡಿ ಆರು ವಿಕೆಟ್‌ಗಳನ್ನು ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News