ಎಟಿಎಂ ಮೂಲಕ ಹಣ ವಂಚನೆ ಪ್ರಕರಣ: ಇಬ್ಬರ ಬಂಧನ

Update: 2019-12-03 16:15 GMT

ಬೆಂಗಳೂರು, ಡಿ.3: ಎಟಿಎಂ ಮೂಲಕ ಹಣವನ್ನು ಪಡೆದು, ಹಣ ಸಿಕ್ಕಿಲ್ಲ ಎಂದು ಸುಳ್ಳು ದೂರು ನೀಡಿ ವಂಚನೆ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣ ರಾಜ್ಯದ ಶಹಝಾದ್(28), ಬಾಯಿ ಗ್ರಾಮದ ಶಾಹೀದ್(23) ಬಂಧಿತ ಆರೋಪಿಗಳಾಗಿದ್ದು, ಇವರಿಂದ ವಿವಿಧ ಬ್ಯಾಂಕ್‌ಗಳ 25 ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳಿಬ್ಬರು ಎಟಿಎಂನಿಂದ ಹಣ ಪಡೆದು, ಬಳಿಕ ಹಣ ನಮಗೆ ಸಿಕ್ಕಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ, ತದನಂತರ, ಖಾತೆಗಳಿಗೆ ಮತ್ತೆ ಹಣ ಹಾಕಿಸಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ವಿಮಾನಗಳಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಂಚರಿಸಿ, ಐಷಾರಾಮಿ ಹೊಟೇಲ್ಗಳಲ್ಲಿ ಉಳಿದುಕೊಂಡು, ಎಟಿಎಂಗಳಲ್ಲಿ ಹಣ ಪಡೆಯುತ್ತಿದ್ದರು. ನ.30ರಂದು ಹೊಸದಿಲ್ಲಿಯ ಮೂಲದ ಟ್ರಾನ್ಸಾಕ್ಷನ್ ಸಲ್ಯೂಷನ್ ಇಂಟರ್ ನ್ಯಾಷನಲ್ ಇಂಡಿಯಾ ಪ್ರೈ. ಮುಖ್ಯಸ್ಥರೊಬ್ಬರು ಇಲ್ಲಿನ ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದರು.

ತಮ್ಮ ಕಂಪೆನಿ ದೇಶಾದ್ಯಂತ ಸುಮಾರು 14,000 ಎಟಿಎಂಗಳನ್ನು ನಿರ್ವಹಣೆ ಮಾಡುತ್ತಿದೆ. ಆದರೆ, ಕೆಲ ದುಷ್ಕರ್ಮಿಗಳು ಎಟಿಎಂ ಕಾರ್ಡ್‌ಗಳನ್ನು ಬಳಸಿ ಹಣ ಪಡೆದುಕೊಂಡು ನಂತರ ಹಣ ಬಂದಿಲ್ಲ ಎಂದು ಬ್ಯಾಂಕ್‌ನಿಂದಲೇ ತಮ್ಮ ಖಾತೆಗೆ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News