ಸಚಿವ ಮಾಧುಸ್ವಾಮಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಮುಖಂಡ ರಾಯರೆಡ್ಡಿ ಆಗ್ರಹ

Update: 2019-12-03 16:23 GMT

ಹೊಸಪೇಟೆ, ಡಿ.3: ಲಿಂಗಾಯತರನ್ನು ಪ್ರಚೋದಿಸುವ ರೀತಿಯಲ್ಲಿ ಮಾತನಾಡಿ, ನೀತಿ ಸಂಹಿತೆ ಉಲ್ಲಂಘಿಸಿರುವ ಸಚಿವ ಮಾಧುಸ್ವಾಮಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ರಾಜಪಾಲರು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಒತ್ತಾಯಿಸಿದರು.

ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ನಗರದಲ್ಲಿ ಬಿಜೆಪಿ ಸಂಘಟಿಸಿದ್ದ ಸಭೆಯಲ್ಲಿ ಸಚಿವ ಮಾಧುಸ್ವಾಮಿ, ವೀರಶೈವ ಲಿಂಗಾಯತ ಧರ್ಮೀಯರ ಒಂದು ಮತವೂ ಬಿಜೆಪಿ ಬಿಟ್ಟು ಬೇರೆ ಪಕ್ಷದ ಕಡೆಗೆ ಹೋಗಬಾರದು ಎಂದಿದ್ದಾರೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಧರ್ಮೀಯರ ಸಭೆ ಸಂಘಟಿಸಿ, ಅವರನ್ನು ಪ್ರಚೋದಿಸುವ ರೀತಿಯಲ್ಲಿ ಮಾತಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಲಿಂಗಾಯತರ ಮತಗಳು ಬೇರೆ ಪಕ್ಷಕ್ಕೆ ಹೋದರೆ ಸಿಎಂ ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆದಂತೆ, ಅವರಿಗೆ ಕಲ್ಲು ಹೊಡೆದು ಅವಮಾನ ಮಾಡಿದಂತೆ ಎಂದಿದ್ದಾರೆ.

ಇದು ನೇರಾನೇರ ನೀತಿ ಸಂಹಿತೆಯ ಉಲ್ಲಂಘನೆ. ಈ ಕುರಿತು ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗೆ ಕೆಪಿಸಿಸಿಯಿಂದ ದೂರು ಕೊಡಲಾಗುವುದು. ಒಂದುವೇಳೆ ಆಯೋಗ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ರಾಯರೆಡ್ಡಿ ತಿಳಿಸಿದರು.

ಸಭೆಯಲ್ಲಿ ಮಾಧುಸ್ವಾಮಿ ಅಷ್ಟೇ ಅಲ್ಲದೆ, ವಸತಿ ಸಚಿವ ಸೋಮಣ್ಣ, ಸಂಸದರು, ಶಾಸಕರು ಹಾಗೂ ಮುಖಂಡರ ವಿರುದ್ಧವೂ ಆಯೋಗ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿ ಕಾಯ್ದೆಯ ಪ್ರಕಾರ, ಜಾತಿ ಧರ್ಮದ ಹೆಸರಿನಲ್ಲಿ ಸಭೆ ನಡೆಸಿ, ಯಾರೂ ಮತ ಕೇಳಬಾರದು. ಅದಕ್ಕೆ ಕಾನೂನಿನಲ್ಲಿ ಶಿಕ್ಷೆಯೂ ಇದೆ. ಆದರೆ, 40 ವರ್ಷ ವಕೀಲರಾಗಿದ್ದ ಮಾಧುಸ್ವಾಮಿಗೆ ಇಷ್ಟು ತಿಳಿದಿಲ್ಲವಾ ಎಂದು ಪ್ರಶ್ನಿಸಿದರು.

ಸಚಿವ ಸಂಪುಟದಲ್ಲಿ ಪ್ರಚೋದನಕಾರಿಯಾಗಿ ಮಾತನಾಡುವವರು ಇರಬಾರದು. ವಾರದ ಹಿಂದೆ ಇದೇ ರೀತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತಾಡಿದ್ದರು. ಅದರ ವಿರುದ್ಧ ಈಗಾಗಲೇ ಪಕ್ಷದಿಂದ ದೂರು ಕೊಡಲಾಗಿದೆ. ಅವರೂ ವಿವೇಚನೆಯಿಂದ ಮಾತಾಡಬೇಕು. ಅವರಿಗೆ ನೈತಿಕತೆಯಿದ್ದರೆ ಆ ಸ್ಥಾನ್ಕಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಲಿಂಗಾಯತರು ಸುಸಂಸ್ಕೃತರು, ವಿಚಾರವಂತರು. ಜಾತಿ ಆಧಾರದ ಮೇಲೆ ಆ ಧರ್ಮೀಯರು ಎಂದೂ ಮತ ಚಲಾಯಿಸಿಲ್ಲ. ವಿಷಯಾಧಾರಿತವಾಗಿ ಮತದಾನ ಮಾಡಿದ್ದಾರೆ. ಆ ಸಮಾಜದ ಹೆಸರು ದುರ್ಬಳಕೆ ಮಾಡಿಕೊಂಡು, ಇಡೀ ಸಮಾಜಕ್ಕೆ ಮಾಧುಸ್ವಾಮಿ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News