ಅಂಗವಿಕಲ ವೈದ್ಯೆಗೆ 20 ಲಕ್ಷ ರೂ. ಪಾವತಿಸುವ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ

Update: 2019-12-03 17:36 GMT

ಬೆಂಗಳೂರು, ಡಿ.3: ವಿದೇಶಿ ಪ್ರವಾಸ ಕೈಗೊಂಡಿದ್ದ ವೇಳೆಯಲ್ಲಿ ಅಂಗವಿಕಲ ದಂತ ವೈದ್ಯೆಯೊಬ್ಬರಿಗೆ ಗಾಲಿ ಕುರ್ಚಿ(ವೀಲ್ ಚೇರ್) ಒದಗಿಸದ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಅವರ ತಾಯಿಗೆ 20 ಲಕ್ಷ ರೂ.ಪಾವತಿಸುವಂತೆ ಆದೇಶಿಸಿರುವುದನ್ನು ಪ್ರಶ್ನಿಸಿ ಏರ್ ಇಂಡಿಯಾ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಸಂಬಂಧ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಲು 10 ಲಕ್ಷ ರೂ. ಠೇವಣಿ ಇರಿಸಲು ನಿರ್ದೇಶಿಸಿದೆ.

ವೀಲ್‌ ಚೇರ್ ಒದಗಿಸದೆ ದೈಹಿಕ ಮತ್ತು ಮಾನಸಿಕ ತೊಂದರೆ ಅನುಭವಿಸುವಂತೆ ಮಾಡಲಾಗಿದ್ದು, ಅದಕ್ಕಾಗಿ ತಮಗೆ ಪರಿಹಾರ ನೀಡಲು ಏರ್ ಇಂಡಿಯಾ ಲಿಮಿಟೆಡ್‌ಗೆ ನಿರ್ದೇಶಿಸಬೇಕೆಂದು ಕೋರಿ ಡಾ.ಎಸ್.ಜೆ.ರಾಜಲಕ್ಷ್ಮಿ ಮತ್ತು ಅವರ ತಾಯಿ ಡಾ.ಎಸ್.ಶೋಭಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿ ಸಂತ್ರಸ್ತೆಗೆ 20 ಲಕ್ಷ ರೂ.ನೀಡುವಂತೆ ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಏರ್ ಇಂಡಿಯಾ ಲಿಮಿಟೆಡ್, ಟ್ರಾವೆಲ್ ಏಜೆಂಟ್‌ರ ತಪ್ಪಿನಿಂದಾಗಿ ಈ ತೊಂದರೆ ಆಗಿದೆ ವಿನಹ ತಮ್ಮಿಂದ ಅಲ್ಲ. ಅಲ್ಲದೆ, ಅಂಗವಿಕಲ ಮಹಿಳೆಗೆ ಈಗಾಗಲೇ 5 ಲಕ್ಷ ರೂ. ನೀಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಲು 10 ಲಕ್ಷ ರೂ.ಗಳನ್ನು ಜ.2ರೊಳಗೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಪಾವತಿಸಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News