ವಿದ್ಯಾರ್ಥಿ ವೇತನ ತಡೆಗೆ ಆಕ್ರೋಶ: ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ ಹಿಂದುಳಿದ ಜಾತಿಗಳ ಒಕ್ಕೂಟ

Update: 2019-12-03 17:45 GMT

ಬೆಂಗಳೂರು, ಡಿ.3: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿರುವ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು, ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಗರದ ಪುರಭವನ ಮುಂಭಾಗ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ನೇತೃತ್ವದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರಕಾರ ವಿದ್ಯಾರ್ಥಿ ವೇತನ ಬಿಡುಗಡೆ ಮಾಡದೆ, ಇದ್ದರೆ ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದಾಗಿ ಹೇಳಿದರು.

ವಿದ್ಯಾರ್ಥಿ ವೇತನ ಪಡೆಯುತ್ತಿದ್ದ ವಿದ್ಯಾರ್ಥಿಗಳು, ಈ ಹಣದಿಂದಾಗಿ ಲೇಖನ ಸಾಮಗ್ರಿಗಳು, ಸಮವಸ್ತ್ರ ಹಾಗೂ ಇನ್ನಿತರ ತಮ್ಮ ವಿದ್ಯಾಭ್ಯಾಸದ ಖರ್ಚುಗಳನ್ನು ನಿಭಾಯಿಸಲು ಬಳಸುತ್ತಿದ್ದರು. ಇದರಿಂದ ಪೋಷಕರ ಆರ್ಥಿಕ ಹೊರೆಯೂ ತಗ್ಗುತ್ತಿತ್ತು. ಆದರೆ, ಸರಕಾರ ಈಗ ಏಕಾಏಕಿ ವಿದ್ಯಾರ್ಥಿ ವೇತನ ನಿಲ್ಲಿಸಿರುವುದರಿಂದ ಅವರಿಗೆಲ್ಲ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಆದರೆ, ಸರಕಾರ ಅದನ್ನು ಹಿಂಪಡೆದು ಹಿಂದುಳಿದ ವರ್ಗಗಳ ಜನರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.

ಸರಕಾರದ ಈ ಆದೇಶದಿಂದ ಸುಮಾರು 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ವೇತನದಿಂದ ವಂಚಿತರಾಗುತ್ತಾರೆ. ಹಾಗಾಗಿ, ಈ ಆದೇಶವನ್ನು ವಾಪಸ್ಸು ಪಡೆದು, ಮೊದಲಿನಂತೆ ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ಮಂಜೂರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರೊ.ನರಸಿಂಹಯ್ಯ, ಒಕ್ಕೂಟ ಕಾರ್ಯದರ್ಶಿ ಎ.ಆರ್.ವೆಂಕಟರಾಮಯ್ಯ, ಕಾರ್ಯಾಧ್ಯಕ್ಷ ಸುರೇಶ್ ಎಂ.ಲಾತೂರ್, ವಿ.ಜೆ. ಭದ್ರಿನಾಥ್ ಸೇರಿದಂತೆ ಪ್ರಮುಖರಿದ್ದರು.

‘ಗಮನದಲ್ಲಿಟ್ಟು ಮತ ಚಲಾಯಿಸಿ’

ದೇವರಾಜ ಅರಸು ಪ್ರಶಸ್ತಿ ನೀಡಲೂ ಸರಕಾರ ಮೀನಮೇಷ ಎಣಿಸುತ್ತಿದೆ. ಮತ ಕೇಳಲು ದೇವರಾಜ ಅರಸು ಅವರ ಹೆಸರು ಬೇಕು. ಆದರೆ, ಅವರ ಹೆಸರಿನಲ್ಲಿ ಪ್ರಶಸ್ತಿ ಮಾತ್ರ ನೀಡುತ್ತಿಲ್ಲ. ಇದು ಅವರ ಕೆಲಸವನ್ನು ಗೌಣವಾಗಿಸುವ ಕೆಲಸ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮತದಾರರು ಮತ ಚಲಾಯಿಸಬೇಕು ಎಂದು ಪ್ರತಿಭಟನಾನಿರತ ಮುಖಂಡರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News