ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು: ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರ ಪ್ರಸಾದ್

Update: 2019-12-03 17:53 GMT

ಬೆಂಗಳೂರು, ಡಿ.3: ರಚನಾತ್ಮಕ ತರಬೇತಿ ನೀಡುವುದರ ಮೂಲಕ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಎಸ್.ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

ಮಂಗಳವಾರ ನಗರದ ಜಿಕೆವಿಕೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ‘ಕೃಷಿಯಲ್ಲಿ ರೈತ ಮಹಿಳೆ’ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ಕ್ಷೇತ್ರ ಚೆನ್ನಾಗಿ ಬೆಳೆಸುವಲ್ಲಿ ಮಹಿಳೆಯರ ಶ್ರಮ ಮತ್ತು ಸಾಧನೆ ಅಪಾರವಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಹೆಚ್ಚಿನ ಪಾತ್ರ ಮಹಿಳೆಯರದ್ದೇ ಆಗಿದೆ. ರೈತ ದೇಶದ ಬೆನ್ನೆಲುಬು ಆದರೆ, ರೈತನಿಗೆ ಬೆನ್ನೆಲುಬು ರೈತ ಮಹಿಳೆ. ತರಕಾರಿ ಬೆಳೆಯುವಲ್ಲಿ, ಔಷಧ ಸಸ್ಯ ಉಳಿಸಿ-ಬೆಳೆಸುವಲ್ಲಿ ಮಹಿಳೆಯದ್ದು ಪ್ರಮುಖ ಪಾತ್ರ. ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ತೋಟಗಾರಿಕೆ, ಪುಷ್ಪೋಧ್ಯಮ, ಹೈನುಗಾರಿಕೆ, ಕುರಿ ಕೋಳಿ, ಮೇಕೆ, ಜೇನು ಸಾಕಾಣಿಕೆಯಂತಹ ಕಸುಬುಗಳ ಬಗ್ಗೆ ತರಬೇತಿಗಳನ್ನು ಪಡೆಯುವ ಮೂಲಕ ಮತ್ತಷ್ಟು ಆದಾಯ ಸಂಪಾದಿಸುವತ್ತ ಗಮನ ಹರಿಸಬೇಕು ಎಂದರು.

ಆಧುನಿಕ ಕೃಷಿ ಚಲನಶೀಲತೆ ಹಾಗೂ ಶಿಕ್ಷಣದ ಕೊರತೆಯು ಕೃಷಿ ಮಾರುಕಟ್ಟೆ, ಬೆಳವಣಿಗೆ ಹಾಗೂ ಸ್ಥಿರತೆಯ ಮೇಲೆ ಅವಲಂಬಿತವಾಗಿದೆ. ಆದುದರಿಂದಾಗಿ ದೇಶದ ಬಹುಪಾಲು ರೈತ ಮಹಿಳೆಯರನ್ನು ದುರ್ಬಲಗೊಳಿಸುತ್ತಿದೆ. ಮಹಿಳೆಯರಿಗೆ ಅರಿವು ಮೂಡಿಸಿ, ಮಾರುಕಟ್ಟೆಯಲ್ಲಿ ಹೂಡಿಕೆ ಮತ್ತು ಅವರಿಗೆ ಇರುವ ಅಡೆತಡೆಗಳನ್ನು ನಿವಾರಿಸುವುದು ದೇಶದ ಅಭಿವೃದ್ಧಿ ದೃಷ್ಟಿಯಿಂದ ಅತಿಮುಖ್ಯವಾಗಿದೆ ಎಂದು ತಿಳಿಸಿದರು.

ಕೃಷಿ ವಿವಿಯ ಸಂಶೋಧಕ ನಿರ್ದೇಶಕ ವೈ.ಜೆ.ಷಡಕ್ಷರಿ ಮಾತನಾಡಿ, ಕುಟುಂಬದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಆದುದರಿಂದಾಗಿ ಅವರ ಆರೋಗ್ಯ ಪೌಷ್ಟಿಕಾಂಶದ ಸ್ಥಿತಿ ನೇರವಾಗಿ ಕುಟುಂಬದ ಆರೋಗ್ಯ ವೆಚ್ಚದ ಮೇಲೆ ಪರಿಣಾಮ ಬೀರುತ್ತಿದೆ. ಕೃಷಿ ಕುಟುಂಬದ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಮತ್ತು ಪೋಷಣೆಯ ಸ್ಥಿತಿ ಸುಧಾರಣೆಗೆ ಹಲವು ಕಾರ್ಯಕ್ರಮಗಳು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಕೃಷಿಯಲ್ಲಿ ತೊಡಗಿರುವ ಶೇ.75 ರಷ್ಟು ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವರು. ರೈತ ಮಹಿಳೆಯರು ಆದಾಯ ಗಳಿಸಲು ಹಾಗೂ ಅದರ ನಿಯಂತ್ರಣಕ್ಕೆ ಅವಕಾಶವಿದ್ದಾಗ, ಮಕ್ಕಳ ಪೋಷಣೆ, ಶಿಕ್ಷಣ ಹಾಗೂಆರೋಗ್ಯದ ಮೇಲೆ ತಮ್ಮ ಖರ್ಚನ್ನು ಕೇಂದ್ರೀಕರಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಡಿಸ್ಟ್ರಿಕ್ ಚೇರ್ಮನ್ ಲಲನಮೂರ್ತಿ, ಸಂಘಟನಾ ಕಾರ್ಯದರ್ಶಿ ಡಾ.ಉಷಾ ರವೀಂದ್ರ, ಉಪ ಸಂಘಟನಾ ಕಾರ್ಯದರ್ಶಿಗಳಾದ ಡಾ.ಎಂ.ಎಸ್.ಉಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News