ತನ್ನ ಕಣ್ತಪ್ಪಿನಿಂದ ನಿರಾಸೆಗೊಂಡಿದ್ದ ಬಾಲಕಿಯ ಮನೆಗೆ ಭೇಟಿ ನೀಡಿದ ಅಬುಧಾಬಿ ರಾಜಕುಮಾರ

Update: 2019-12-04 08:21 GMT

ಅಬುಧಾಬಿ: ಕಾರ್ಯಕ್ರಮವೊಂದರಲ್ಲಿ ತಾನು ಗಮನಿಸದೇ ಹೋದ ಬಾಲಕಿಯ ಮನೆಗೆ ಅಬುಧಾಬಿಯ ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಸ್ವತಃ ಭೇಟಿ ನೀಡಿ ಬಾಲಕಿಯನ್ನು ಸಂತೈಸಿದ ಘಟನೆ ನಡೆದಿದೆ.

 ಕಳೆದ ಬುಧವಾರ ಅಬುಧಾಬಿಯ ಅಧ್ಯಕ್ಷೀಯ ಅರಮನೆಯಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಆಯೋಜಿಸಲಾದ ಸ್ವಾಗತ ಸಮಾರಂಭದ ವೇಳೆ ರಾಜಕುಮಾರನನ್ನು ಸ್ವಾಗತಿಸಲು ಹಲವು ಮಕ್ಕಳು ಆಯ್ಕೆಯಾಗಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳ ಕೈಕುಲುಕಿದ್ದ ಅಬುಧಾಬಿಯ ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಒಬ್ಬ ಬಾಲಕಿಗೆ ಹಸ್ತಲಾಘವ ಮಾಡದೆ ಮುಂದೆ ಸಾಗಿದ್ದರು. ಕಣ್ತಪ್ಪಿನಿಂದ ಈ ಘಟನೆ ನಡೆದಿತ್ತು. ಇದರಿಂದ ಬಾಲಕಿ ನಿರಾಸೆಗೊಂಡಿದ್ದು, ನಂತರ ಈ ವಿಚಾರವನ್ನು ಅರಿತ ರಾಜಕುಮಾರ ಬಾಲಕಿ ಆಯಿಷಾ ಅಲ್ ಮಝ್ರೌಯಿಯ ಮನೆಗೆ ತೆರಳಿ ಆಕೆ ಹಾಗೂ ಆಕೆಯ ಕುಟುಂಬದ ಜತೆ ಸ್ವಲ್ಪ ಸಮಯ ಕಳೆದಿದ್ದು, ಶೇಖ್ ಮುಹಮ್ಮದ್ ಬಿನ್ ಝಾಯೆದ್ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸಂಯುಕ್ತ ಅರಬ್ ಸಂಸ್ಥಾನದ ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್  ಅಬ್ದುಲ್ಲಾ ಬಿನ್ ಝಾಯೆದ್  ಶೇರ್ ಮಾಡಿದ ವೀಡಿಯೋದಲ್ಲಿ  ಬಾಲಕಿ ಇತರ ಮಕ್ಕಳಂತೆ ನಿಂತಿದ್ದು ತಮ್ಮ ಕೈಕುಲುಕಲು  ಕೈ ಮುಂದೆ ಮಾಡಿ ನಿಂತಂತೆಯೇ ರಾಜಕುಮಾರ ಆಕೆಯನ್ನು ಹಾದು ಹೋಗಿದ್ದರು. ಆದರೂ ಬಾಲಕಿ ತನ್ನ ಕೈ ಮುಂದೆ ಮಾಡಿ ನಿಂತಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆಯಾದರೂ ಅಂತಿಮವಾಗಿ ಆಕೆಗೆ ನಿರಾಸೆಯುಂಟಾಗುತ್ತದೆ.

ಈ ಬಗ್ಗೆ ತಿಳಿದುಕೊಂಡ ರಾಜಕುಮಾರ ಬಾಲಕಿಯ ನಿವಾಸಕ್ಕೆ ತಾವು ಹೋಗಿರುವ ಕುರಿತಂತೆ ಟ್ವೀಟ್ ಮಾಡಿ ಚಿತ್ರಗಳನ್ನೂ ಸೋಮವಾರ  ಪೋಸ್ಟ್ ಮಾಡಿದ್ದಾರೆ. ಹಲವರು ರಾಜಕುಮಾರನ ಕಾರ್ಯವನ್ನು ಪ್ರಶಂಸಿಸಿದ್ದಾರೆ. ಬಾಲಕಿಯ ಕುಟುಂಬವೂ ಅವರನ್ನು ಶ್ಲಾಘಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News