ಹಿಂಸೆ ಮುಕ್ತ ಭಾರತಕ್ಕಾಗಿ ಪಾದಯಾತ್ರೆ: ತಮಿಳುನಾಡಿನಲ್ಲಿ ಮಹಿಳೆಯರ ಬಂಧನಕ್ಕೆ ಖಂಡನೆ

Update: 2019-12-04 16:18 GMT

ಬೆಂಗಳೂರು, ಡಿ.4: ಹಿಂಸೆ ಮುಕ್ತ ಭಾರತಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಮಿಳುನಾಡು ಮುಖಂಡರು ಮತ್ತು ಮಹಿಳೆಯರನ್ನು ಚೆನ್ನೈನಲ್ಲಿ ಬಂಧಿಸಿರುವುದನ್ನು ಸಂಘಟನೆಯ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ತೀವ್ರವಾಗಿ ಖಂಡಿಸಿದ್ದಾರೆ.

ಹಿಂಸೆ ಮುಕ್ತ ಭಾರತ ಎಂಬ ಘೋಷಣೆ ಅಡಿಯಲ್ಲಿ ತಮಿಳುನಾಡಿನ ಜನವಾದಿ ಮಹಿಳಾ ಸಂಘಟನೆಯ ಮುಖಂಡರು ಹಾಗು ಕಾರ್ಯಕರ್ತರು 400 ಕಿ.ಮೀ. ಪಾದಯಾತ್ರೆ ಮಾಡುವುದನ್ನು ತಡೆದು ಅವರನ್ನು ಬಂಧಿಸಿರುವ ತಮಿಳುನಾಡು ಸರಕಾರ ಹಾಗು ಪೊಲೀಸರ ವರ್ತನೆ ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಹಿಂಸೆಗಳು ಹೆಚ್ಚಾಗುತ್ತಿರುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಶ್ವಸಂಸ್ಥೆಯು ಕರೆ ನೀಡಿರುವ ‘ನವೆಂಬರ್ 25 ಮಹಿಳೆಯರ ಮೇಲಿನ ಹಿಂಸಾ ನಿರ್ಮೂಲನಾ ದಿನ’ ದಂದು ತಮಿಳುನಾಡಿನ ರಾಜ್ಯ ಸಮಿತಿ ಪಾದಯಾತ್ರೆ ಆಯೋಜಿಸಿತ್ತು ಎಂದು ಅವರು ಹೇಳಿದ್ದಾರೆ.

ಜನರಲ್ಲಿ ಮಹಿಳೆಯರ ಮೇಲೆ ನಡೆಯುವ ಹಿಂಸೆಯ ವಿರುದ್ಧ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ 400 ಕಿ.ಮೀ.ಮಹಿಳೆಯರು ಪಾದಯಾತ್ರೆಯನ್ನು ಮಾಡಿ ಚೆನ್ನೈ ತಲುಪಿದ ಐತಿಹಾಸಿಕ ಸಂದರ್ಭದಲ್ಲಿ ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದೆ ಎಂದು ಗೌರಮ್ಮ ಆರೋಪಿಸಿದ್ದಾರೆ.

ತಿರುವಣ್ಣಾಮಲೈನಿಂದ ಒಂದು ಪಾದಯಾತ್ರೆ ಹಾಗು ಕಡಲೂರಿನಿಂದ ಇನ್ನೊಂದು ಕಳೆದ 9 ದಿನಗಳಿಂದ ಜಿಲ್ಲೆಗಳಲ್ಲಿ ಸಂಚಾರ ಮಾಡುತ್ತಾ ದಾರಿಯುದ್ದಕ್ಕೂ ಸಭೆ ಮಾಡಿದಾಗ ಜನರಿಂದ ಮಹಿಳೆಯರಿಂದ ಅಭೂತಪೂರ್ವ ಸ್ವಾಗತ, ಬೆಂಬಲ ವ್ಯಕ್ತವಾಗಿದೆ. 9 ದಿನದ ಪಾದಯಾತ್ರೆ ನಿನ್ನೆಗೆ ಕೊನೆಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮಹಿಳೆಯರ ಸಮಸ್ಯೆಗಳ ಮನವಿಯನ್ನು ಸಲ್ಲಿಸಲು ಮುಖ್ಯ ಮಂತ್ರಿಯನ್ನು ಭೇಟಿ ಮಾಡಲು ಮುಂದಾದಾಗ 300 ಮಹಿಳೆಯರನ್ನು ತಮಿಳುನಾಡು ಸರಕಾರ ಬಂಧಿಸಿ ಪೊಲೀಸ್ ಠಾಣೆಯಲ್ಲಿಟ್ಟಿರುವುದನ್ನು ಖಂಡನೀಯ. ಸುತ್ತಲೂ ಹಿಂಸೆಯೇ ತಾಂಡವವಾಡುತ್ತಿರುವಾಗ ಅದರ ವಿರುದ್ಧ ಕಾರ್ಯಾಚರಣೆಯಲ್ಲಿ ಸರಕಾರಗಳು ವಿಫಲವಾಗಿವೆ. ಅಂತಹ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಪಾದಯಾತ್ರೆಯಲ್ಲಿ ಬಂದ ಮಹಿಳೆಯರನ್ನು ತಮಿಳುನಾಡಿನ ಸರಕಾರ ಸ್ವಾಗತಿಸಿದ ಬಗೆ ನಾಚಿಕೆಗೇಡು ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News