ಲೋಕಾಯುಕ್ತ ಸಂಸ್ಥೆ ಎಫ್‌ಐಆರ್ ದಾಖಲಿಸಲು ಕೋರಿ ಅರ್ಜಿ: ನಿಲುವು ತಿಳಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಡಿ.4: ಭ್ರಷ್ಟಾಚಾರ ತಡೆ ಕಾಯ್ದೆ ಸೇರಿ ವಿವಿಧ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿ ಲೋಕಾಯುಕ್ತ ಸಂಸ್ಥೆ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ತನ್ನ ನಿಲುವನ್ನು ತಿಳಿಸಲು ನಿರ್ದೇಶನ ನೀಡಿದೆ.
ಈ ಕುರಿತು ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಬುಧವಾರದೊಳಗೆ ತನ್ನ ನಿಲುವು ತಿಳಿಸಲು ರಾಜ್ಯ ಸರಕಾರಕ್ಕೆ ತಿಳಿಸಿದೆ. ಎಫ್‌ಐಆರ್ ಇನ್ನೂ ದಾಖಲಾಗದ ಪ್ರಕರಣ ಹಾಗೂ ವಿಚಾರಣೆಗೆ ಬಾಕಿ ಇರುವ ದೂರುಗಳಿಗೆ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿ ಲೋಕಾಯುಕ್ತ ಸಂಸ್ಥೆ ನ್ಯಾಯಪೀಠದಲ್ಲಿ ಮನವಿ ಮಾಡಿದೆ.
ಎಸಿಬಿ ರಚನೆಗೆ ಸಂಬಂಧಿಸಿದಂತೆ ವಿಚಾರಣೆ ಕೋರ್ಟ್‌ನಲ್ಲಿ ಇರುವುದರಿಂದ ನ್ಯಾಯದ ಹಿತದೃಷ್ಟಿಯಿಂದ ಎಫ್‌ಐಆರ್ ದಾಖಲಿಸಲು ಲೋಕಾಯುಕ್ತರಿಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ, ದೂರುದಾರರಿಗೆ ಪೂರ್ವಗ್ರಹ ಉಂಟಾಗುತ್ತದೆ ಎಂದು ಲೋಕಾಯುಕ್ತ ಪರ ವಕೀಲರು ಪೀಠಕ್ಕೆ ತಿಳಿಸಿದರು.