ಬಾಂಗ್ಲಾ ವಲಸಿಗರ ಜಾಮೀನು ಅರ್ಜಿ: ಮಕ್ಕಳ ಆರೈಕೆ, ರಕ್ಷಣೆಗೆ ಕೈಗೊಳ್ಳುವ ಕ್ರಮದ ಬಗ್ಗೆ ಮಾಹಿತಿ ನೀಡಿ- ಹೈಕೋರ್ಟ್
ಬೆಂಗಳೂರು, ಡಿ.4: ವಿದೇಶಿ ಅಕ್ರಮ ವಲಸಿಗರ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮಕ್ಕಳ ಆರೈಕೆ ಹಾಗೂ ರಕ್ಷಣೆಗೆ ಏನೇನು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂಬುದರ ಬಗ್ಗೆ ಮಾಹಿತಿ ನೀಡಲು ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ.
ನಗರದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಬಾಂಗ್ಲಾ ದೇಶ ನಿವಾಸಿಗಳು ಎನ್ನಲಾದ ಬಾಬುಲ್‌ಖಾನ್ ಮತ್ತು ತಾನಿಯಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ನ್ಯಾಯಪೀಠವು ದೇಶದಲ್ಲಿ ಅಕ್ರಮವಾಗಿ ವಾಸವಾಗಿರುವ ವಿದೇಶಿಗರಿಗೆ ಕೋರ್ಟ್‌ನಿಂದ ಜಾಮೀನು ಸಿಕ್ಕರೆ ಹಾಗೂ ಬಿಡುಗಡೆಗೊಂಡರೆ ಅವರನ್ನು ತಾತ್ಕಾಲಿಕ ಬಂಧನ ಕೇಂದ್ರದಲ್ಲಿ ಇಡಬಹುದು. ಅದೇ ರೀತಿಯಾಗಿ ಮಕ್ಕಳ ರಕ್ಷಣೆಗೆ ಮಕ್ಕಳ ಪಾಲನೆ ಹಾಗೂ ರಕ್ಷಣೆ ಕಾಯ್ದೆ ಏನು ಹೇಳುತ್ತದೆ ಎಂಬುದನ್ನು ಕೋರ್ಟ್‌ಗೆ ತಿಳಿಸಿದರೆ ಕಾನೂನು ಜಾರಿ ಮಾಡಿ ನಿರ್ದೇಶನ ನೀಡಬಹುದು ಎಂದು ಸರಕಾರಿ, ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠವು ತಿಳಿಸಿತು. ಮಕ್ಕಳ ಆರೈಕೆ, ರಕ್ಷಣೆಗಾಗಿ ಒಂದು ಕೇಂದ್ರವನ್ನು ತೆರೆದರೂ ಮಕ್ಕಳಿಗೆ ಅದು ಜೈಲು ಎಂಬ ಭಾವನೆ ಬರಬಾರದು. ಯಾವುದೇ ದೇಶದ ಮಗುವಾಗಲಿ ಮಕ್ಕಳು ಎಂದ ಮೇಲೆ ಮಕ್ಕಳೆ ಆಗಿರುತ್ತವೆ. ನೀವು ಮಕ್ಕಳ ರಕ್ಷಣೆ ಬಗ್ಗೆ ಮಾಹಿತಿ ನೀಡಿದರೆ ಕೋರ್ಟ್ ನಿರ್ದೇಶನ ನೀಡುತ್ತದೆ ಎಂದು ತಿಳಿಸಿ, ವಿಚಾರಣೆಯನ್ನು ಮುಂದೂಡಿತು.