ಹಳೆಯ ಬಟ್ಟೆ ಕಳಚಿದ ಹಾಗೆ ಇತಿಹಾಸವನ್ನೂ...?

Update: 2019-12-04 18:49 GMT

ಹಳೆಯ ಬಟ್ಟೆಗಳನ್ನು ಒಂದು ಕ್ಷಣದಲ್ಲಿ ಕಳಚಿ ಅಷ್ಟೊಂದು ಸುಲಭವಾಗಿ ಕಿತ್ತೆಸೆಯಲಾಗುವುದಿಲ್ಲ. ಯಾಕೆಂದರೆ ಅವುಗಳು ಜನರು ಹಂಚಿಕೊಂಡು ಬದುಕಿದ ಮೌಲ್ಯಗಳ ಫಲ; ಸಹಬಾಳ್ವೆ ನಡೆಸಿದ ಫಲ. ಹಾಗಾದರೆ ಇಂದಿನ ಫ್ಯಾಷನ್‌ಗಳು, ಇಂದಿನ ಹೊಸ ಬಟ್ಟೆಗಳು ಇತಿಹಾಸದ ಹಳೆಯ ಬಟ್ಟೆಗಳನ್ನು ಮೀರಿಸುತ್ತವೆಯೋ? ಅಥವಾ ಭಾರತೀಯರು ಅವುಗಳನ್ನು ಯಾವ ಇತಿಹಾಸ ಸಾಧ್ಯವಾಗಿಸಿತ್ತೆೆಂಬುದನ್ನು ಅರ್ಥ ಮಾಡಿಕೊಂಡು ಅವುಗಳನ್ನು ತಮ್ಮ ಅದೃಷ್ಟ ರೂಪಿಸಿಕೊಳ್ಳಲು ಬಳಸುತ್ತಾರೋ?

2019ನೇ ಇಸವಿ ಸ್ವಾತಂತ್ರಾನಂತರ ಭಾರತ ತಾನೆಷ್ಟು ಬದಲಾಗಿದ್ದೇನೆ ಎಂಬುದನ್ನು ಒಪ್ಪಿಕೊಂಡ ಒಂದು ವರ್ಷವಾಗಿ ಇತಿಹಾಸದಲ್ಲಿ ದಾಖಲಾಗಿ ಉಳಿಯುತ್ತದೆ. ಇದು ನರೇಂದ್ರ ಮೋದಿಯವರನ್ನು 2014ರ ಜನಾದೇಶವನ್ನು ಮೀರಿಸಿದ ರೀತಿಯಲ್ಲಿ ಮರಳಿ ಅಧಿಕಾರಕ್ಕೆ ತಂದ ವರ್ಷವೂ ಹೌದು. ಈ ವರ್ಷದಲ್ಲಿ ಆದ ಬದಲಾವಣೆಗಳ ಸ್ವರೂಪವಾದರೂ ಏನು? ಎಂತಹ ಬದಲಾವಣೆಗಳು ಅವು? ಸ್ವಾತಂತ್ರ್ಯ ಬಂದಂದಿನಿಂದ ತಾವು ಧರಿಸಿಕೊಂಡು ಬಂದಿದ್ದ ಬಟ್ಟೆಗಿಂತ, ಉಡುಪಿಗಿಂತ ತಾವು ದೊಡ್ಡದಾಗಿದ್ದೇವೆ; ಅದೀಗ ತಮಗೆ ಸರಿ ಹೊಂದುವುದಿಲ್ಲವೆಂದು ಬಹಳ ಮಂದಿ ಭಾರತೀಯರು ತಿಳಿದಿರುವಂತೆ ಕಾಣುವ ಕಾಲ ಇದು. ಹೊಸ ಒಂದು ಬದಲಿ ಉಡುಪನ್ನು ಧರಿಸಿ ನೋಡುವ ಎಂದು ಕೆಲವರು ಭಾವಿಸಿದಂತಿದೆ.

2019ರಲ್ಲಿ ಭಾರತೀಯರು ಹೊಸ ಅಸ್ಮಿತೆಯೊಂದನ್ನು ಹೊಂದುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸೂಚಿಸುವ ಸಂಕೇತಗಳಂತೆ ದೊಡ್ಡ ಬದಲಾವಣೆಗಳಾಗಿವೆ. ಈ ಅಸ್ಮಿತೆಯ ಹುಡುಕಾಟವನ್ನು ಸ್ಪಷ್ಟಪಡಿಸುವ ಮೂರು ದೊಡ್ಡ ಉದಾಹರಣೆಗಳು ನಮ್ಮ ಮುಂದಿವೆ. ಇವುಗಳಲ್ಲಿ ಮೊದಲನೆಯದು ಸಂವಿಧಾನ 370ನೇ ವಿಧಿಯನ್ನು ತಿದ್ದುಪಡಿ ಮಾಡಿ ಅದನ್ನು ಸಂವಿಧಾನದ ಒಂದು ಸತ್ತ ವಿಧಿಯಾಗಿ ಮಾಡುವ ಸರಕಾರದ ನಿರ್ಧಾರ. ಇದು ಪ್ರಾಯಶಃ ಸರಕಾರ ಈ ವರ್ಷ ತೆಗೆದುಕೊಂಡ ತೀರ್ಮಾನಗಳಲ್ಲಿ ಅತ್ಯಂತ ದೊಡ್ಡ ತೀರ್ಮಾನ. ಯಾಕೆಂದರೆ ಜಮ್ಮು ಮತ್ತು ಕಾಶ್ಮೀರ ಪ್ರಶ್ನೆಯನ್ನು ಹೇಗೆ ಇತ್ಯರ್ಥ ಪಡಿಸುವುದು ಎಂಬ ದಿಕ್ಕಿನಲ್ಲಿ ಒಂದು ಸಾರಾಸಗಟಾದ ಬದಲಾವಣೆಯನ್ನು ಕಂಡ ತೀರ್ಮಾನ ಇದು. ಜಮ್ಮು ಮತ್ತು ಕಾಶ್ಮೀರ ರಾಷ್ಟ್ರದ ಮನೋಭೂಮಿಕೆಯಲ್ಲಿ ಅದು ಅಸ್ತಿತ್ವಕ್ಕೆ ಬಂದಾಗ ಏನಾಗಿತ್ತೋ ಅದರ ಬದಲಾಗಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯ ಒಂದು ರಾಜ್ಯವಾಗಿ ಬದಲಾದದ್ದು ಸರಕಾರದ ತೀರ್ಮಾನವನ್ನು ಜನರು ಒಪ್ಪಿಕೊಳ್ಳಲು ಒಂದು ಕಾರಣವಾಗಿರಬಹುದು.

ಅಯೋಧ್ಯೆ ತೀರ್ಪು ಎರಡನೇ ದೊಡ್ಡ ಬದಲಾವಣೆ. ಅಯೋಧ್ಯೆಯ ವಿವಾದಿತ ನಿವೇಶನವನ್ನು ರಾಮ ದೇವಾಲಯ ನಿರ್ಮಾಣಕ್ಕೆ ಬಿಟ್ಟುಕೊಟ್ಟು ಮುಸ್ಲಿಮರಿಗೆ ಮಸೀದಿ ನಿರ್ಮಿಸಲು ಬೇರೆಯೇ ಒಂದು ಜಾಗವನ್ನು ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಜನ ಸಮುದಾಯಗಳ ಬಗ್ಗೆ ಚರ್ಚೆ ನಡೆಯಲೇ ಇಲ್ಲ. ಇದು ಭಾರತೀಯರು ಕೆಲವು ಮೂಲಭೂತ ಪ್ರಶ್ನೆಗಳ ಬಗ್ಗೆ ಪರಾಮರ್ಶೆ ನಡೆಸುತ್ತಿದ್ದಾರೆ ಎಂಬುದರ ಒಂದು ಸೂಚನೆ ಇರಬಹುದು! ಭಾರತದಲ್ಲಿ ಹಿಂದೂಗಳ ಹಕ್ಕು ಏನು? ದೇಶದ ಅಲ್ಪಸಂಖ್ಯಾತರ ಪಾತ್ರ ಏನು? ಅವರ ಸ್ಥಾನ ಏನು?

ಮೂರನೆಯ ಬದಲಾವಣೆ ಸರಕಾರ ತೆಗೆದುಕೊಂಡ ಮೂರನೇ ತೀರ್ಮಾನ ರಾಷ್ಟ್ರೀಯ ಪೌರತ್ವ ನೋಂದಣಿ. ದೇಶದ ಹಕ್ಕು ಬದ್ಧ ನಾಗರಿಕರು ಯಾರು ಎಂಬುದನ್ನು ನಿರ್ಧರಿಸುವ ಈ ರಾಷ್ಟ್ರವ್ಯಾಪಿ ನೋಂದಣಿಯು ಅಕ್ಷರಶಃ ಯಾರು ಭಾರತೀಯರು ಮತ್ತು ಯಾರು ಭಾರತೀಯರಲ್ಲ ಎಂಬುದನ್ನು ಹೇಳಲಿದೆ. ಅಷ್ಟೇ ಅಲ್ಲದೆ ಭಾರತದ ಜನರು ತಾವು ಈ ದೇಶದ ನಿವಾಸಿಗಳು ಎಂದು ಸಾಬೀತು ಪಡಿಸುವಂತೆ ಅವರಿಗೆ ಹೇಳುವ ದೇಶದ ಮೊತ್ತ ಮೊದಲ ಉದಾಹರಣೆಯಾಗಿಯೂ ಇದು ದಾಖಲಾಗಲಿದೆ. ಈ ದೇಶದ ನಿಷ್ಠ ನಿವಾಸಿಗಳಾಗಲು ಆಯ್ಕೆ ಮಾಡಿಕೊಂಡಿರುವವರನ್ನು ಇತರರಿಂದ ಪ್ರತ್ಯೇಕಿಸುವ ಕೆಲಸವನ್ನೂ ಇದು ಮಾಡಲಿದೆ.

ಸರಕಾರದ ಈ ಮೂರು ನಿರ್ಧಾರಗಳು ತೀರ್ಮಾನಗಳ ಪರಿಣಾಮವಾಗಿ ಭಾರತೀಯರು ತಮ್ಮ ಐತಿಹಾಸಿಕ ಅಸ್ಮಿತೆಯ ಬಗ್ಗೆ ಮತ್ತೆ ಮತ್ತೆ ವಿಮರ್ಶಿಸಿಕೊಳ್ಳಬೇಕಾದ ಅನಿವಾರ್ಯತೆ ಸವಾಲು ಅವರಿಗೆ ಎದುರಾಗಲಿದೆ. ಅವರು ಧರಿಸಿದ್ದ ಹಳೆಯ ಉಡುಪು ಹಳೆಯ ಬಟ್ಟೆ ಒರಟು ಇದ್ದರಬಹುದು, ದೊರಗು ಇದ್ದಿರಬಹುದು; ಆದರೆ ಅದು ತಾನು ಮಾಡಬೇಕಾಗಿದ್ದ ಕೆಲಸವನ್ನು ಮಾಡಿತ್ತು; ಅದು ಅವರ ದೇಹವನ್ನು ಬೆಚ್ಚಗಿರಿಸಿತ್ತು; ಅದು ದೇಶದ ದೇಹ ಮತ್ತು ಆತ್ಮವನ್ನು ಒಟ್ಟಾಗಿ ಇಟ್ಟಿತ್ತು. ಅದು ದೇಶದ ವಿಭಜನೆಯ ಗಾಯಗಳಿಗೆ ಬ್ಯಾಂಡೇಜ್ ಹಾಕಿತ್ತು; ಹರಿದ ಜಾಗಗಳಲ್ಲಿ ತೇಪೆ ಹಾಕಿದ್ದರೂ ಆ ತೇಪೆ ಹಾಕಿದ ಬಟ್ಟೆ ವಿಭಿನ್ನತೆಯ, ವೈವಿಧ್ಯದ ದೇಶವನ್ನು ಹವಾಮಾನದ ವೈಪರಿತ್ಯಗಳಿಂದ ರಕ್ಷಿಸಿತ್ತು. ನಿಜ ಅದು ಯಾವುದೋ ಒಂದು ಗುಂಪಿನ ಒಂದು ಸಮುದಾಯದ ಆದ್ಯತೆಗಳನ್ನು ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಹೊಲಿಸಿದ ಉಡುಪು ಆಗಿರದೆ ಹಲವು ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಹೊಲಿಸಿದ ಉಡುಪಾಗಿತ್ತು. ಆದರೆ ಆ ಪರಿಸ್ಥಿತಿಯಲ್ಲಿ ಅದೇ ಅತ್ಯುತ್ತಮ ಉಡುಪು ಆಗಿತ್ತು ಮತ್ತು ಅದು ತಾನು ಮಾಡಬೇಕಾಗಿದ್ದ ಕೆಲಸವನ್ನು ಚೆನ್ನಾಗಿಯೇ ಮಾಡಿತ್ತು. ಈಗ ಹೊಸ ಬಟ್ಟೆ, ಹೊಸ ಉಡುಪು ಕೂಡ ತಾನು ಮಾಡಬೇಕಾದ ಕೆಲಸವನ್ನು ಮಾಡೀತೇ? ಎಂದು ಭಾರತೀಯರು ಕೇಳಿಯಾರೇ? ಅದು ರಾಷ್ಟ್ರವನ್ನು ಒಂದಾಗಿ, ಒಗ್ಗಟ್ಟಾಗಿ ಇಡಬಲ್ಲದೇ? ಜನರು ಈಗ ಪ್ರಯೋಗ ಮಾಡುತ್ತಿದ್ದಾರೆ, ಕೆಲವರು ತಮ್ಮ ಹೊಸ ಆದ್ಯತೆಗಳ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಬಹಳಷ್ಟು ಮಂದಿ ಈ ಪ್ರಯೋಗಗಳ ಸಫಲತೆಯ ಬಗ್ಗೆ ಇನ್ನೂ ಯೋಚಿಸುತ್ತಿದ್ದಾರೆ; ತಮ್ಮಿಂದ ಏನನ್ನು ನಿರೀಕ್ಷಿಸಲಾಗುತ್ತಿದೆಯೋ? ಎಂಬ ಆತಂಕದಲ್ಲಿದ್ದಾರೆ. ಹಳೆಯ ಬಟ್ಟೆಗಳನ್ನು ಒಂದು ಕ್ಷಣದಲ್ಲಿ ಕಳಚಿ ಅಷ್ಟೊಂದು ಸುಲಭವಾಗಿ ಕಿತ್ತೆಸೆಯಲಾಗುವುದಿಲ್ಲ. ಯಾಕೆಂದರೆ ಅವುಗಳು ಜನರು ಹಂಚಿಕೊಂಡು ಬದುಕಿದ ಮೌಲ್ಯಗಳ ಫಲ; ಸಹಬಾಳ್ವೆ ನಡೆಸಿದ ಫಲ. ಹಾಗಾದರೆ ಇಂದಿನ ಫ್ಯಾಷನ್‌ಗಳು, ಇಂದಿನ ಹೊಸ ಬಟ್ಟೆಗಳು ಇತಿಹಾಸದ ಹಳೆಯ ಬಟ್ಟೆಗಳನ್ನು ಮೀರಿಸುತ್ತವೆಯೋ? ಅಥವಾ ಭಾರತೀಯರು ಅವುಗಳನ್ನು ಯಾವ ಇತಿಹಾಸ ಸಾಧ್ಯವಾಗಿಸಿತ್ತೆೆಂಬುದನ್ನು ಅರ್ಥ ಮಾಡಿಕೊಂಡು ಅವುಗಳನ್ನು ತಮ್ಮ ಅದೃಷ್ಟ ರೂಪಿಸಿಕೊಳ್ಳಲು ಬಳಸುತ್ತಾರೋ?

ಕೃಪೆ: ಡೆಕ್ಕನ್ ಹೆರಾಲ್ಡ್

Writer - ಆರ್ತಿ ರಾಮಚಂದ್ರನ್

contributor

Editor - ಆರ್ತಿ ರಾಮಚಂದ್ರನ್

contributor

Similar News