ಉಪಚುನಾವಣೆ ಮತದಾನೋತ್ತರ ಸಮೀಕ್ಷೆ ಪ್ರಕಟ

Update: 2019-12-05 14:57 GMT

ಬೆಂಗಳೂರು, ಡಿ. 5: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹಾಗೂ ಅನರ್ಹ ಶಾಸಕರ ಭವಿಷ್ಯ ನಿರ್ಧರಿಸಲಿರುವ ಉಪಚುನಾವಣೆ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಸಿ- ವೋಟರ್ ಸಮೀಕ್ಷೆ ಹೇಳಿದೆ.

ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-9ರಿಂದ 12, ಕಾಂಗ್ರೆಸ್ ಪಕ್ಷಕ್ಕೆ-3ರಿಂದ 6 ಹಾಗೂ ಜೆಡಿಎಸ್-1 ಕ್ಷೇತ್ರದಲ್ಲಿ ಮುನ್ನಡೆ ಸಿಗುವ ಸಾಧ್ಯತೆಗಳಿವೆ ಎಂದು ಸಿ-ವೋಟರ್ ಸಂಸ್ಥೆಯ ಸಮೀಕ್ಷೆ ವರದಿ ತಿಳಿಸಿದೆ.

ಯಶವಂತಪುರ, ಮಹಾಲಕ್ಷ್ಮಿಲೇಔಟ್, ಕೆ.ಆರ್.ಪುರ, ಹಿರೇಕೆರೂರು, ಯಲ್ಲಾಪುರ, ಗೋಕಾಕ್, ಅಥಣಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಲಿದೆ. ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಬೈರತಿ ಬಸವರಾಜ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮುನ್ನಡೆ ಸಾಧಿಸಲಿದ್ದಾರೆಂದು ಹೇಳಲಾಗಿದೆ.

ಸಿ-ವೋಟರ್ ಸಂಸ್ಥೆ ಮತದಾನೋತ್ತರ ಸಮೀಕ್ಷೆ ಆಧಾರದಲ್ಲಿ ನೋಡಿದರೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಇನ್ನೂ ಮೂರುವರೆ ವರ್ಷ ಅಧಿಕಾರದಲ್ಲಿ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಆದರೆ, ಡಿ.9ರ ಫಲಿತಾಂಶ ಎಲ್ಲ ಕುತೂಹಲಗಳಿಗೆ ತೆರೆ ಎಳೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News