ದರೋಡೆಗೆ ಸಂಚು ಆರೋಪ: ಹತ್ತು ಮಂದಿಯ ಬಂಧನ; ಮಾರಕಾಸ್ತ್ರಗಳು ಜಪ್ತಿ

Update: 2019-12-05 16:36 GMT

ಬೆಂಗಳೂರು, ಡಿ.5: ದರೋಡೆಗೆ ಸಂಚು ರೂಪಿಸುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳನ್ನು ಬೇಧಿಸಿರುವ ಸಿಸಿಬಿ ಪೊಲೀಸರು ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗಿರಿನಗರದ ವಿವೇಕಾನಂದ ಪಾರ್ಕ್ ಬಳಿ ನಿನ್ನೆ ರಾತ್ರಿ ಮಾರಕಾಸ್ತ್ರಗಳ ಸಮೇತ ದರೋಡೆಗೆ ಸಂಚು ರೂಪಿಸಿದ್ದ ಕಾಮಾಕ್ಷಿಪಾಳ್ಯದ ರೌಡಿ ಸಂಜಯ್ ಅಲಿಯಾಸ್ ಸಂಜು (25) ಹಾಗೂ ಆತನ ಸಹಚರರಾದ ಶ್ರೀನಿವಾಸನಗರದ ಚಂದನ್ (23), ಆವಲಹಳ್ಳಿಯ ನಂದೀಶ್ (21), ಹೊಸಕೆರೆಹಳ್ಳಿಯ ಸುಭಾಷ್ (21), ಎಸ್‌ಬಿಎಂ ಕಾಲನಿಯ ಕಿರಣ್ (28)ನನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮಚ್ಚು, ಆಟೋ, ಕಾರದಪುಡಿ ಪೊಟ್ಟಣವನ್ನು ವಶಪಡಿಸಿಕೊಂಡು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬಂಧಿತ ರೌಡಿ ಸಂಜಯ್, ವಿಜಯನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ರಾಜಗೋಪಾಲನಗರದಲ್ಲಿ ದಿಲೀಪ್ ಎಂಬುವವನ ಕೊಲೆಗೈದ ಬಗ್ಗೆ ಪ್ರಕರಣ ದಾಖಲಾಗಿದೆ. ಕುಣಿಗಲ್, ವಿಜಯನಗರ, ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ರಾಜರಾಜೇಶ್ವರಿನಗರದಲ್ಲಿ ದರೋಡೆ ಕೃತ್ಯಗಳು ದಾಖಲಾಗಿವೆ.

ಮತ್ತೊಬ್ಬ ಆರೋಪಿ ಚಂದನ್, ಹನುಮಂತನಗರ ಠಾಣೆಯ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆರೋಪಿ ಸುಭಾಷ್ ಆರ್‌ಎಂಸಿ ಯಾರ್ಡ್‌ನಲ್ಲಿ ನಡೆದಿದ್ದ ಕೊಲೆಯತ್ನ ಕೇಸ್‌ನಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗಿತ್ತು. ಸಂಜಯ್ ಜೊತೆ ನಾಲ್ವರು, ಒಂಟಿಯಾಗಿ ಓಡಾಡುವವರನ್ನು ಹಾಗೂ ವಾಹನ ಸವಾರರನ್ನು ಅಡ್ಡಗಟ್ಟಿ ಬೆದರಿಸಿ ದರೋಡೆಗೆ ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಅವರು ತಿಳಿಸಿದರು.

ರೌಡಿ ವಿಕ್ಕಿ ಗ್ಯಾಂಗ್ ಸೆರೆ: ಮಾರಕಾಸ್ತ್ರಗಳನ್ನಿಟ್ಟುಕೊಂಡು ದರೋಡೆಗೆ ಸಜ್ಜಾಗಿದ್ದ 5 ಮಂದಿ ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಅಲಿಯಾಸ್ ವಿಕ್ಕಿ(26), ಮಲ್ಲಿಕಾರ್ಜುನ್(25), ಮಂಜುನಾಥ್(26), ಮಂಜೇಶ್(26), ಗಂಗಾಧರ್(28) ಬಂಧಿತ ರೌಡಿಗಳು. ಆರೋಪಿಗಳಿಂದ ದೊಣ್ಣೆ , ಲಾಂಗು, ಡ್ರಾಗರ್ ಮತ್ತು ಖಾರದಪುಡಿ ಪೊಟ್ಟಣವನ್ನು ವಶಪಡಿಸಿಕೊಂಡಿದ್ದಾರೆ.

ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲುಂಬಿನಿ ಗಾರ್ಡನ್ ಸರ್ವೀಸ್ ರಸ್ತೆ ಬಳಿ ಈ ಐದು ಮಂದಿ ಗುಂಪು ಕಟ್ಟಿಕೊಂಡು ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಿಂದ ಹಣ, ಆಭರಣ ದೋಚಲು ಸಂಚು ರೂಪಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಪ್ರವೀಣ್ ಅಲಿಯಾಸ್ ವಿಕ್ಕಿ, ಮಲ್ಲಿಕಾರ್ಜುನ್, ಮಂಜುನಾಥ ಮತ್ತು ಮಂಜೇಶ್ ವಿರುದ್ಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಗಿರಿಧರ್ ಎಂಬಾತನ ಕೊಲೆ ಪ್ರಕರಣ ಮತ್ತು ಕಾಡುಬೀಸನಹಳ್ಳಿ ಸೋಮ ಎಂಬಾತನ ಮೇಲೆ ಕೊಲೆಯತ್ನ ಪ್ರಕರಣಗಳು ದಾಖಲಾಗಿವೆ. ಇವರುಗಳ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News