ಬಿಜೆಪಿ ವಿರುದ್ಧ ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು

Update: 2019-12-05 16:57 GMT

ಬೆಂಗಳೂರು, ಡಿ.5: ಕೋಮು ಭಾವನೆ ಕೆರಳಿಸಿ ಮತದಾರರಿಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ನೇತೃತ್ವದ ನಿಯೋಗವು ಗುರುವಾರ ದೂರು ಸಲ್ಲಿಸಿದೆ.

ಸುಪ್ರೀಂಕೋರ್ಟ್ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತಯಾಚಿಸುವುದನ್ನು ಅಪರಾಧವೆಂದು ತೀರ್ಪು ನೀಡಿದೆ. ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಪಕ್ಷವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೋಮು ಪ್ರಚೋದಕ ಬರಹ ಪ್ರಕಟಿಸಿ ಮತದಾರರನ್ನು ಕೆರಳಿಸುವ ಕಾರ್ಯ ಕೈಗೊಂಡಿದೆ ಎಂದು ಕಾಂಗ್ರೆಸ್ ನಿಯೋಗ ದೂರಿದೆ.

‘ಕೋಮುವಾದಿ ಕಾಂಗ್ರೆಸ್ ಆಡಳಿತ ಕ್ರೂರಿ ಟಿಪ್ಪು ಸುಲ್ತಾನ್ ಆಡಳಿತವನ್ನು ಜನರಿಗೆ ಪರಿಚಯಿಸಿತು. ಕರ್ನಾಟಕ ಉಪ ಚುನಾವಣೆಯಲ್ಲಿ ನೀವು ಬಿಜೆಪಿಗೆ ಹಾಕುವ ಒಂದು ಮತ..., ಧರ್ಮವನ್ನು ಒಡೆದು ರಾಜ್ಯದಲ್ಲಿ ಗಲಭೆ ಮಾಡಿಸಿದ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತದೆ, ದೇಶ ದ್ರೋಹಿಗಳಿಗೆ ಮತ್ತು ಭಾರತ ವಿರೋಧಿ ಹೇಳಿಕೆ ನೀಡುವವರಿಗೆ ಬೆಂಬಲ ನೀಡುವ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತದೆ, ಬಿಜೆಪಿ ಗೆಲ್ಲಿಸಿ ಕರ್ನಾಟಕ ಉಳಿಸಿ’ ಎಂದು ಟ್ವೀಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇಂದಿನ ಉಪ ಚುನಾವಣೆಯಲ್ಲಿ ಮತ ಚಲಾಯಿಸುವ ಮುನ್ನ ಕಾಂಗ್ರೆಸ್ ಬೆಂಬಲಿತ ಮೂಲಭೂತವಾದಿಗಳ ಕೈಯಿಂದ ಭೀಕರವಾಗಿ ಹತ್ಯೆಯಾದ ಹಿಂದೂ ಕಾರ್ಯಕರ್ತರನ್ನು ನೆನೆಯೋಣ. ‘ಹಿಂದೂ ವಿರೋಧಿ ಕಾಂಗ್ರೆಸ್’ ಪಕ್ಷವನ್ನು ತಿರಸ್ಕರಿಸಿ, ಕರ್ನಾಟಕವನ್ನು ರಕ್ಷಿಸಿ ಎಂದು ಟ್ವೀಟ್ ಮಾಡಲಾಗಿದೆ.

ಈ ಟ್ವೀಟ್‌ಗಳು ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲಿದ್ದು, ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಬರೆಯಲು ಅವಕಾಶ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸದರಿ ಟ್ವೀಟ್ ಅಳಿಸಲು ಸೂಚನೆ ನೀಡಬೇಕೆಂದು ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News