ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ನಿಷೇದಾಜ್ಞೆ ಜಾರಿ

Update: 2019-12-05 16:59 GMT

ಬೆಂಗಳೂರು, ಡಿ.5: ಬಿಬಿಎಂಪಿ ಹಾಗೂ ಬೆಂ.ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಐದು ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಡಿ.9ರಂದು ನಿಗದಿತ ಸ್ಥಳಗಳಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಆದೇಶ ಹೊರಡಿಸಿದ್ದಾರೆ.

ಶಿವಾಜಿನಗರ ಕ್ಷೇತ್ರದ ಮತ ಎಣಿಕೆ ವಸಂತನಗರದ ಮೌಂಟ್ ಕಾರ್ಮಲ್ ಮಹಿಳಾ ಪಿ.ಯು. ಕಾಲೇಜು, ಕೆ.ಆರ್.ಪುರಂ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ್ದು ಅಶೋಕ ನಗರದ ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‌ನಲ್ಲಿ ನಡೆಯಲಿದೆ. ಯಶವಂತಪುರ ಕ್ಷೇತ್ರದ ಮತ ಎಣಿಕೆ ಮೈಸೂರು ರಸ್ತೆಯ ಆರ್.ವಿ.ಕಾಲೇಜು, ಹೊಸಕೋಟೆ ಕ್ಷೇತ್ರದ ಮತಎಣಿಕೆ ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆಯಲಿದೆ.

ಡಿ.9ರ ಬೆಳಗ್ಗೆ 6ಗಂಟೆಯಿಂದ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಯಲಿರಲಿದೆ. ಮತ ಎಣಿಕೆ ಸಂದರ್ಭದಲ್ಲಿ ಸಮಾಜಘಾತುಕ ವ್ಯಕ್ತಿಗಳು, ಕಿಡಿಗೇಡಿಗಳು, ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರ ಅಥವಾ ವಿರುದ್ಧ ಪ್ರತಿಭಟನೆ ಹಾಗೂ ಸಂಭ್ರಮಾಚರಣೆ ನಡೆಸುವುದು, ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವುಂಟು ಮಾಡುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಐದು ಅಥವಾ ಅದಕ್ಕಿಂತ ಹೆಚ್ಚು ಜನ ಕಾನೂನು ಬಾಹಿರವಾಗಿ ಗುಂಪುಗೂಡುವುದು ನಿಷೇಧಿಸಿದೆ. ಯಾವುದೇ ಸಂಘಟನೆ, ರಾಜಕೀಯಪಕ್ಷಗಳು, ಧಾರ್ಮಿಕ ಪ್ರತಿಕೃತಿ ಮೆರವಣಿಗೆ, ಪ್ರಚೋದಿಸುವಂತಹ ಘೋಷಣೆ ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಕೇತಗಳನ್ನು ಬಿತ್ತರಿಸುವುದು, ಪಟಾಕಿ ಸಿಡಿಸುವುದು ನಿಷೇಧಿಸಲಾಗಿದೆ.

ಶಸ್ತ್ರಾಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು, ಕೋಲು, ಕಲ್ಲು ಸೇರಿದಂತೆ ಮಾರಕಾಸ್ತ್ರಗಳು, ಯಾವುದೇ ವಿನಾಶಕಾರಿ ವಸ್ತು ಅಥವಾ ಸ್ಪೋಟಕ ವಸ್ತುಗಳು ತರುವಂತಿಲ್ಲ. ಭಾಷಣ ಮಾಡುವುದು ನಿಷೇಧಿಸಿದೆ. ಬ್ಯಾನರ್ ಹಾಗೂ ಪ್ಲೆಕ್ಸ್‌ಗಳಿಗೆ ನಿಷೇಧ ಹೇರಲಾಗಿದೆ ಎಂಬ ಸೂಚನೆಗಳನ್ನು ಪ್ರಕಟನೆ ಮೂಲಕ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News