ಪರಿಹಾರ ನೀಡಲು ನಿರಾಕರಿಸಿದ ಕಂಪೆನಿಗೆ 3.57 ಲಕ್ಷ ರೂ. ವಿಮೆ ನೀಡಲು ಕೋರ್ಟ್ ಆದೇಶ

Update: 2019-12-05 17:06 GMT

ಬೆಂಗಳೂರು, ಡಿ.5: ಮದ್ಯ ಸೇವಿಸಿ ಕಾರು ಚಲಾಯಿಸಿ ಅಪಘಾತವೆಸಗಿದ್ದಾರೆ ಎಂಬ ಕಾರಣವೊಡ್ಡಿ ವ್ಯಕ್ತಿಯೊಬ್ಬರಿಗೆ ವಿಮೆ ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಗ್ರಾಹಕರ ಕೋರ್ಟ್ ವಿಮಾ ಕಂಪೆನಿಗೆ ಕಾರಿನ ಸಂಪೂರ್ಣ ವಿಮೆ ಮೊತ್ತ 3.22 ಲಕ್ಷ ರೂ. ಹಾಗೂ 35 ಸಾವಿರ ರೂ.ದಂಡ ನೀಡುವಂತೆ ಆದೇಶ ನೀಡಿದೆ. 

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡುವ ವೇಳೆಯಲ್ಲಿ ರಕ್ತದ ಮಾದರಿ ಪರೀಕ್ಷೆ ನಡೆಸಿ, ರಕ್ತದಲ್ಲಿ 3 ಎಂ.ಜಿ ಮದ್ಯದ ಪ್ರಮಾಣ ಇರುವುದಾಗಿ ವರದಿ ನೀಡಿದ್ದರು. ಇದನ್ನೆ ನೆಪ ಮಾಡಿಕೊಂಡ ಖಾಸಗಿ ವಿಮಾ ಸಂಸ್ಥೆಯವರು ವಿಮೆ ಹಣ ಪಾವತಿಸಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅಪಘಾತಕ್ಕೀಡಾದ ವ್ಯಕ್ತಿಯು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಪೀಠವು ವಾಹನದ ವಿಮೆ ಮೊತ್ತ 3,22,105 ವಾರ್ಷಿಕ ಶೇ.12 ಬಡ್ಡಿ ಸಹಿತ ಹಣ ಪಾವತಿಸುವಂತೆ ವಿಮೆ ಕಂಪೆನಿಗೆ ಆದೇಶಿಸಿದೆ.

ವಾಹನ ಅಪಘಾತವಾದ ಬಳಿಕ ವಿಮಾ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು. ಇದರಿಂದ ಸಂಸ್ಥೆ ಅಪಘಾತ ಸಂಭವಿಸಿದ ಸ್ಥಳ ಹಾಗೂ ವಾಹನ ಪರಿಶೀಲನೆ ನಡೆಸಿ ವರದಿ ನೀಡಲು ಸರ್ವೆಯರ್ ಒಬ್ಬರನ್ನು ನೇಮಿಸಿತ್ತು. ವರದಿ ನೀಡಿದ್ದ ಸರ್ವೆಯರ್, ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ವಾಹನದ ದುರಸ್ತಿ ಮೌಲ್ಯ ವಿಮೆಯ ಘೊಷಿತ ಮೌಲ್ಯದ ಶೇ.75ನ್ನು ಮೀರಿದೆ. ನಷ್ಟದ ಮೌಲ್ಯವನ್ನು ಸರ್ವಿಸ್ ಸೆಂಟರ್‌ನ ಅಧಿಕಾರಿಗಳೊಂದಿಗೆ ರ್ಚಚಿಸಲಾಗಿದ್ದು, 2,50,000 ರೂ. ನಿಗದಿಪಡಿಸಬಹುದಾಗಿದೆ. ಆರ್.ಸಿ ಸಹಿತ ನಿರೀಕ್ಷಿತ ಹಾನಿ ಮೊತ್ತ 40 ಸಾವಿರ, ಆರ್.ಸಿ ರಹಿತ ಹಾನಿ ಮೊತ್ತ 25 ಸಾವಿರ ಎಂದು ಲೆಕ್ಕ ಹಾಕಬಹುದಾಗಿದ್ದು, ಈ ಆಧಾರದ ಮೆಲೆ ಒಟ್ಟು ನಷ್ಟದ ಮೊತ್ತವನ್ನು 2,25,000 ರೂ. ಎಂದು ಪರಿಗಣಿಸಬಹುದು ಎಂದು ತಿಳಿಸಿದ್ದರು.

ಈ ಅಂಶ ಪರಿಗಣಿಸಿರುವ ನ್ಯಾಯಾಲಯ, 2,50,000ದಷ್ಟು ನಷ್ಟ ಗುರುತಿಸಿದ್ದ ಸರ್ವೆಯರ್ ಹಾನಿ ಮೊತ್ತವನ್ನು ಕಳೆದು 2,25,000 ರೂ ನೀಡಬಹುದು ಎಂದು ಶಿಫಾರಸು ಮಾಡಿದ್ದಾರೆ. ವಾಹನವನ್ನು 3,22,105 ರೂ. ಗೆ ವಿಮೆ ಮಾಡಿಸಲಾಗಿದೆ. ಹಾನಿ ಮೊತ್ತ 40 ಸಾವಿರ ರೂ. ನಿಗದಿಪಡಿಸಲಾಗಿದ್ದರೂ, ಆ ಹಣವೂ ವಿಮಾ ಸಂಸ್ಥೆಗೆ ಬರಲಿದೆ. ಹೀಗಾಗಿ ಆ ಮೊತ್ತವನ್ನೂ ಸೇರಿಸಿಕೊಂಡರೆ ಘೊಷಿತ ವಿಮೆ ಮೊತ್ತವನ್ನು ಸಂಪೂರ್ಣವಾಗಿ ಪಡೆಯಲು ದೂರುದಾರರು ಅರ್ಹರಾಗಿರುತ್ತಾರೆ ಎಂದು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News