ರಾಜ್ಯದಲ್ಲಿ ಪುಸ್ತಕೋದ್ಯಾನ ಯೋಜನೆ ಜಾರಿಯಾಗಲಿ: ಡಾ.ಸಿದ್ಧಲಿಂಗಯ್ಯ

Update: 2019-12-05 17:08 GMT

ಬೆಂಗಳೂರು, ಡಿ.5: ವಿದೇಶಗಳಲ್ಲಿ ಜನಪ್ರಿಯವಾಗಿರುವ ಪುಸ್ತಕ ಉದ್ಯಾನದ ಪರಿಕಲ್ಪನೆ, ಕರ್ನಾಟಕದಲ್ಲಿಯೂ ಜಾರಿಯಾಗಲೆಂದು ಖ್ಯಾತ ಸಾಹಿತಿ ಡಾ. ಸಿದ್ಧಲಿಂಗಯ್ಯ ಆಶಿಸಿದ್ದಾರೆ.

ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಲೇಖಕರ 28 ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಪುಸ್ತಕೋದ್ಯಾನ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಇಡೀ ಕುಟುಂಬ ಪುಸ್ತಕೋದ್ಯಾನಕ್ಕೆ ಭೇಟಿ ನೀಡಿ ಇಡೀ ದಿನ ಕಳೆಯುವ ಪ್ರವೃತ್ತಿ ಇದೆ. ಹಾಗೆಯೇ ಕರ್ನಾಟಕದಲ್ಲಿಯೂ ಪುಸ್ತಕೊದ್ಯಾನ ರೂಪುಗೊಂಡರೆ, ಬರಹಗಾರರು, ಓದುಗರು ಮತ್ತು ಪ್ರಕಾಶಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ನನ್ನನ್ನೂ ಒಳಗೊಂಡಂತೆ ಬಹುತೇಕರು ಸಾಹಿತ್ಯದ ಅಭ್ಯಾಸವನ್ನು ಆರಂಭಿಸಿದ್ದೇ ಪತ್ತೇದಾರಿ ಕಾದಂಬರಿಗಳ ಮೂಲಕ. ಆದರೆ, ಇತ್ತೀಚಿನ ದಿನಗಳಲ್ಲಿ ಅವು ನಗಣ್ಯವಾಗಿವೆ. ಅದನ್ನು ಸಾಹಿತ್ಯ ಎಂದು ಪರಿಗಣಿಸಬೇಕೇ ಎಂಬುದರ ಬಗ್ಗೆ ಹಿಂಜರಿಯುವ ಪ್ರವೃತ್ತಿ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಂತಹ ಹೊತ್ತಿನಲ್ಲಿ ಎನ್.ನರಸಿಂಹಯ್ಯರವರ ಸಮಗ್ರ ಸಾಹಿತ್ಯವನ್ನ ಪ್ರಕಟಿಸುವ ಮೂಲಕ ಪತ್ತೇದಾರಿ ಸಾಹಿತ್ಯಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಆದ್ಯತೆ ನೀಡಿರುವುದು ಖುಷಿ ತರಿಸಿದೆ. ಇದರ ಜೊತೆಗೆ ವೈದ್ಯಕೀಯ ಸಾಹಿತ್ಯ ಮತ್ತು ವಿಜ್ಞಾನ ಸಾಹಿತ್ಯವನ್ನೂ ಗಂಭೀರವಾಗಿ ಪರಿಗಣಿಸಬೇಕು. ಪ್ರಾಧಿಕಾರ ಆ ದಿಸೆಯಲ್ಲಿ ಸರಿಯಾದ ಯೋಜನೆಗಳನ್ನು ರೂಪಿಸಿಕೊಳ್ಳಲಿ ಎಂದು ಅವರು ಹೇಳಿದರು.

ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ಮಾತನಾಡಿ, ಕನ್ನಡ ಅಭಿಜಾತ ಸಾಹಿತ್ಯವನ್ನು ಡಿಜಟಲೀಕರಣ ಮಾಡುವ ಮಹತ್ವದ ಯೋಜನೆಯನ್ನು ಪ್ರಾಧಿಕಾರ ಕೈಗೆತ್ತಿಕೊಳ್ಳುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಹಸ್ತಪ್ರತಿ ಸಂಗ್ರಹಣೆ ಮತ್ತು ಶೇಖರಣೆ ಮಾಡಲು ಪ್ರಾಧಿಕಾರದ ವತಿಯಿಂದ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ವಸುಂಧರಾ ಭೂಪತಿ ಮಾತನಾಡಿ, ವೈದ್ಯಕೀಯ ಸಾಹಿತ್ಯ ಬರೆಯುವವರ ಸಂಖ್ಯೆ ತೀರ ಕಡಿಮೆಯಿದೆ. ಬರೆಯಲು ವಿನಿಯೋಗಿಸುವ ಸಮಯವನ್ನು ವೃತ್ತಿಯಲ್ಲಿ ಬಳಸಿದರೆ ಲಕ್ಷಾಂತರ ರೂ. ಸಂಪಾದಿಸಬಹುದು ಎಂಬ ಭಾವನೆಯಲ್ಲಿಯೇ ಹಲವರಲ್ಲಿ ಇದೆ. ಆದರೆ, ಬರಹದ ಹಂಬಲ ಮತ್ತು ಸಮಾಜದ ಬಗೆಗಿನ ಕಾಳಜಿಯಿಂದ ಕೆಲವರಾದರು ಬರೆಯಲು ಮುಂದಾಗಿದ್ದಾರೆ. ಅವರನ್ನು ಪ್ರೊತ್ಸಾಹಿಸುವುದು ಸಂಘ, ಸಂಸ್ಥೆಗಳ ಕರ್ತವ್ಯವೆಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಕಡಿಮೆ ಬೆಲೆಯಲ್ಲಿ ಜನವರಿಗೆ ಉತ್ತಮ ವಿಚಾರಗಳ ಪುಸ್ತಕಗಳನ್ನು ತಲುಪಿಸುವ ಹೊಣೆ ಹೊತ್ತಿದೆ. ಆ ದಿಸೆಯಲ್ಲಿ ವೈದ್ಯಕೀಯ ಪುಸ್ತಕಗಳನ್ನು ಸಹ ಪ್ರಕಟಿಸಿ ಜನರಿಗೆ ಸುಲಭ ಬೆಲೆಯಲ್ಲಿ ಸಿಗುವಂತೆ ಮಾಡಲಿ ಎಂದು ಅವರು ಆಶಿಸಿದರು.

ಈ ವೇಳೆ ಎನ್.ನರಸಿಂಹಯ್ಯ, ಡಾ.ಸಿ.ಆರ್.ಚಂದ್ರಶೇಖರ್, ಡಾ.ನಾ.ಸೋಮೇಶ್ವರ, ಎಚ್.ಆರ್.ವಿಜಯಶಂಕರ್, ಮೂಡ್ನಾಕೂಡು ಚಿನ್ನಸ್ವಾಮಿ, ಟಿ.ಸುನಂದಮ್ಮ, ಡಾ.ಜಿ.ವಿ.ವೆಂಕಟಾಚಲ ಶಾಸ್ತ್ರಿರವರ 28ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳ ಕಾಲೇಜುಗಳಿಗೆ ಪ್ರಾಧಿಕಾರದವತಿಯಿಂದ 10ಸಾವಿರ ರೂ.ಗಳಿಂದ ರೂ.15ಸಾವಿರ ರೂ.ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಹಾಗೂ ಸಹಾಯಕ ನಿರ್ದೇಶಕಿ ಸೌಭಾಗ್ಯ ಉಪಸ್ಥಿತರಿದ್ದರು.

ಹೊಸ ಸರಕಾರ ಬಂದಾಗ ಈ ಹಿಂದಿನ ಸರಕಾರದ ಯೋಜನೆಗಳನ್ನು ಕೈಬಿಡುವಂತಹ ಸಂಪ್ರದಾಯ ಪಾಲಿಸುತ್ತಿರುವುದು ವಿಷಾದಕರ. ಅದೇ ಮಾದರಿಯಲ್ಲಿ ಪ್ರಾಧಿಕಾರಗಳು, ಅಕಾಡೆಮಿಗಳು ಮಾಡುವುದು ಸರಿಯಲ್ಲ. ಹಿಂದಿನ ಅವಧಿಯಲ್ಲಿ ಜಾರಿಯಾಗಿರುವ ಉಪಯುಕ್ತ ಯೋಜನೆ, ಕಾರ್ಯಕ್ರಮಗಳನ್ನು ಮುಂದುವರೆಸಬೇಕು.

-ಸಿದ್ದಲಿಂಗಯ್ಯ, ಹಿರಿಯ ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News