ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಬೇಡಿ: ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಮನವಿ

Update: 2019-12-06 15:40 GMT

ಬೆಂಗಳೂರು, ಡಿ.6: ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು, ಪ್ರಾಂಶುಪಾಲರ ಹಲವು ಬೇಡಿಕೆಗಳನ್ನು ಪರಿಹರಿಸಲು ಈಗಾಗಲೇ ಹಲವು ನಿರ್ಣಯಗಳನ್ನು ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

ಶುಕ್ರವಾರ ನಗರದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ, ಉಪನ್ಯಾಸಕರ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಿದ ವೇಳೆ ಮಾತನಾಡಿದ ಅವರು, ಯಾವುದೇ ಸಂಘಟನೆಗಳು ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ಆಲೋಚನೆಯನ್ನು ಮಾಡಬಾರದೆಂದು ಮನವಿ ಮಾಡಿದರು.

ಉಪನ್ಯಾಸಕರ ಇಂತಹ ನಿರ್ಣಯಗಳು ಸಾಮಾಜಿಕವಾಗಿ ನಕಾರಾತ್ಮಕ ಸಂದೇಶವನ್ನು ರವಾನಿಸುವುದಾಗಿದ್ದು, ಭವ್ಯ ಭವಿಷ್ಯದ ಕನಸನ್ನು ಹೊತ್ತ ವಿದ್ಯಾರ್ಥಿಗಳ ಹಿತ ಕಾಯುವುದು ಮುಖ್ಯವೆನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕೆಂದು ಸುರೇಶ್ ಕುಮಾರ್ ಹೇಳಿದರು.

ವೃತ್ತಿ ಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ನಿವೃತ್ತಿ ಅಂಚಿನಲ್ಲಿರುವ ಉಪನ್ಯಾಸಕರಿಗೆ ಬಿಇಡಿ ಪದವಿಯಿಂದ ವಿನಾಯಿತಿಯನ್ನು ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆಯನ್ನು ಪಡೆಯಲು ಈಗಾಗಲೇ ಒಪ್ಪಿಗೆ ನೀಡಲಾಗಿದ್ದು, ಉಪನ್ಯಾಸಕರಿಂದ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿಯನ್ನು ನೀಡಲು ಈಗಾಗಲೇ ಕಡತವನ್ನು ಅನುಮೋದಿಸಿದ್ದು ಇಷ್ಟರಲ್ಲಿಯೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಕಾರ್ಯಭಾರವನ್ನು ವೈಜ್ಞಾನಿಕವಾಗಿ ನಿಗದಿಗೊಳಿಸುವ ಬಗ್ಗೆ ವಿವಿಧ ತಜ್ಞರ ಸಲಹೆಯನ್ನು ಪಡೆದು ಆದಷ್ಟು ಶೀಘ್ರ ಅಗತ್ಯ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಸುರೇಶ್ ಕುಮಾರ್ ಹೇಳಿದರು.

ಅಂತೆಯೇ, ಪದವಿಪೂರ್ವ ಕಾಲೇಜುಗಳಲ್ಲಿ ಎನ್‌ಸಿಇಆರ್‌ಟಿ ನಿಯಮಾವಳಿಯಂತೆ ಪ್ರತಿ ತರಗತಿಗೆ ವಿದ್ಯಾರ್ಥಿಗಳ ಗರಿಷ್ಟ ಸಂಖ್ಯೆಯನ್ನು 40 ವಿದ್ಯಾರ್ಥಿಗಳಿಗೆ ನಿಗದಿಗೊಳಿಸುವ ಬಗ್ಗೆ ಸಕಾರಾತ್ಮಕವಾದ ನಿರ್ಣಯವನ್ನು ಕೈಗೊಳ್ಳುವುದಾಗಿ ಸುರೇಶ್ ಕುಮಾರ್ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಡಿಎಸ್‌ಇಆರ್‌ಟಿ ಸಂಸ್ಥೆಯು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿಯೂ ಗುಣಾತ್ಮಕ ಶಿಕ್ಷಣವನ್ನು ನೀಡುವ ಜವಾಬ್ದಾರಿಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಿಯಾಯೋಜನೆಯನ್ನು ರೂಪಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಉಪನ್ಯಾಸಕರಿಗೆ ಕಾಲಮಿತಿ ವೇತನ ಭಡ್ತಿಗಳನ್ನು ಮಂಜೂರು ಮಾಡುವ ಅಧಿಕಾರ ಇಷ್ಟು ದಿನ ಕೇಂದ್ರ ಕಚೇರಿಯು ನಿರ್ವಹಿಸುತ್ತಿದ್ದು, ಇದನ್ನು ಇನ್ನು ಮುಂದೆ ಜಿಲ್ಲಾ ಉಪನಿರ್ದೇಶಕರಿಗೆ ಪ್ರತ್ಯಾಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೊರತೆಯಿರುವ ಪರಿಚಾರಕರ ಸೇವೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯುವಲ್ಲಿ ಅಗತ್ಯ ಅನುಮತಿಯನ್ನು ನೀಡಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಅನುದಾನಿತ ಪದವಿಪೂರ್ವ ಕಾಲೇಜುಗಳ ವೇತನ ಪಾವತಿಯಾಗುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ಸುರೇಶ್ ಕುಮಾರ್, ಸಕಾಲದಲ್ಲಿ ವೇತನ ಬಿಡುಗಡೆಗೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು. ಉಪನ್ಯಾಸಕರ ವೇತನ ತಾರತಮ್ಯವನ್ನು ಸರಿಪಡಿಸುವ ಕುರಿತಂತೆ ಕೂಡಲೇ ವಿವಿಧ ಸಂಘಟನೆಗಳ ಮುಖ್ಯಸ್ಥರೊಂದಿಗೆ ತಮ್ಮ ಹಂತದಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಚರ್ಚಿಸಿ ಕಡತದಲ್ಲಿ ವರದಿ ನೀಡಿ ಅನುಮೋದನೆಯನ್ನು ಪಡೆಯಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸುರೇಶ್‌ಕುಮಾರ್ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News