ಬಹುತ್ವ ಭಾರತದ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯ: ನ್ಯಾ.ನಾಗಮೋಹನ ದಾಸ್

Update: 2019-12-06 15:57 GMT

ಬೆಂಗಳೂರು, ಡಿ.6: ಭಾರತದಲ್ಲಿರುವ ವೈವಿಧ್ಯಮಯವಾದ ಭಾಷೆ, ಆಚಾರ, ವಿಚಾರಗಳು, ವಿಶಿಷ್ಟವಾದ ಸಂಸ್ಕೃತಿ ಬೇರೆಲ್ಲೂ ಸಿಗುವುದಿಲ್ಲ. ಇಂತಹ ಬಹುತ್ವ ಭಾರತವನ್ನು ಸಂವಿಧಾನದಿಂದ ಮಾತ್ರ ಉಳಿಸಲು ಸಾಧ್ಯವೆಂದು ಹಿರಿಯ ನ್ಯಾ.ನಾಗಮೋಹನ ದಾಸ್ ತಿಳಿಸಿದರು.

ಶುಕ್ರವಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಗರದ ಸುವರ್ಣ ಭವನದಲ್ಲಿ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 63ನೇ ಮಹಾ ಪರಿನಿಬ್ಬಾಣದ ಅಂಗವಾಗಿ ಆಯೋಜಿಸಿದ್ದ ‘ಸಂವಿಧಾನ ಶಿಲ್ಪಿಯ ಸ್ಮರಣಾ ಸಂಗಮ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಜನನಾಯಕರು. ದಲಿತರಲ್ಲಿ ಸಂಘಟನಾ ಶಕ್ತಿ, ಸ್ಥಾನ ಮಾನ, ಚೈತನ್ಯ ತುಂಬಿದವರು. ಮಹಿಳೆಯರ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಮೀಸಲಾತಿ, ಕಾರ್ಮಿಕರ ಭವಿಷ್ಯದ ಬಗ್ಗೆ ಅನೇಕ ಕಾಯ್ದೆಗಳನ್ನು ರೂಪಿಸಿದರು. ಹಾಗೂ ದೇಶದಲ್ಲಿ ಕಾಲ, ಭಾಷೆ, ಸಂದರ್ಭಗಳು ಬದಲಾದಂತೆ ಮುಂದಿನ ದಾರಿಯನ್ನು ಕಂಡುಕೊಳ್ಳಲು ಸಹಾಯಕವಾಗುವಂತಹ ಸಂವಿಧಾನವನ್ನು ರೂಪಿಸಿ ಕೊಟ್ಟಿದ್ದಾರೆ. ಅದರ ತತ್ವದಡಿ ನಾವೆಲ್ಲರೂ ಸಾಗೋಣವೆಂದು ಅವರು ಹೇಳಿದರು.

ರಾಜ್ಯ ಮುಖ್ಯ ಮಾಹಿತಿ ಆಯೋಗದ ನಿವೃತ್ತ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜೀವನದ ಪ್ರತಿಕ್ಷಣವನ್ನು ಅಮೂಲ್ಯವಾಗಿ ಬದುಕಿದ್ದರು. ಹಾಗೂ ನಿರಂತರವಾಗಿ ಅಸ್ಪಶ್ಯತೆಯ ವಿರುದ್ಧ ಹೋರಾಡುತ್ತಾ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದವರು ಎಂದು ಸ್ಮರಿಸಿದರು.

ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದು ಹಲವು ದಶಕ ಕಳೆದರು ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿದೆ ಎಂದು ತಿಳಿಸಿದ ಅವರು, ಭಾರತ ಸರ್ವ ಧರ್ಮ ರಾಷ್ಟ್ರವಾಗಿದ್ದು, ರಾಷ್ಟ್ರದ ಏಳಿಗೆಯಲ್ಲಿ ನಮ್ಮ ಏಳಿಗೆಯನ್ನು ಕಾಣಬೇಕೆಂಬುದು ಸಂವಿಧಾನದ ಆಶಯವಾಗಿದೆ ಎಂದರು.

ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ, ಕೃಷ್ಣಗೌಡ ತಾಯಣ್ಣವರ್, ಆಡಳಿತಾಧಿಕಾರಿ ವಿದ್ಯಾಶ್ರೀ ಚಂದರಗಿ, ಪ್ರಶಾಂತ್‌ಕುಮಾರ್, ಬಿ.ಸಿ.ಗಂಗಾಧರ್, ಬಿ.ಶಿವಪ್ರಸಾದ್, ನಿತ್ಯಾನಂದಕುಮಾರ್, ಎಸ್.ವಿ.ರಮೇಶ್ ಹಾಗೂ ಮಂಡಳಿಯ ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡಮ ಗಂಗಾದ್ರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News