ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ

Update: 2019-12-06 16:20 GMT

ಬೆಂಗಳೂರು, ಡಿ. 6: ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಘನತ್ಯಾಜ್ಯ ನಿರ್ವಹಣೆಗೆ ಪ್ರತಿ ಗ್ರಾ.ಪಂ.ಗೆ ಕೇಂದ್ರದಿಂದ 20 ಲಕ್ಷ ರೂ.ಅನುದಾನ ಬಂದಿದೆ. ಈ ಅನುದಾನ ಬಳಸಿಕೊಂಡು ರಾಜ್ಯದ ಎಲ್ಲ ಗ್ರಾ.ಪಂ.ಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ಘನ ತ್ಯಾಜ್ಯ ವಿಲೇವಾರಿಗಾಗಿ ಜಿಲ್ಲೆಗೊಬ್ಬರಂತೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಆಯಾ ಗ್ರಾ.ಪಂ.ವ್ಯಾಪ್ತಿ ಸರಕಾರಿ ಭೂಮಿಯಲ್ಲಿ ಕಸ ವಿಲೇವಾರಿ ಮಾಡಲಾಗುತ್ತದೆ. ಒಂದು ವೇಳೆ ಸರಕಾರಿ ಜಾಗ ಇಲ್ಲದಿದ್ದರೆ ಖಾಸಗಿ ಜಮೀನನ್ನು ಖರೀದಿಸಲಾಗುತ್ತದೆ. ಈಗಾಗಲೇ ಗ್ರಾಪಂಗಳು ಕಸ ವಿಲೇವಾರಿಗೆ ಜಾಗ, ಅಗತ್ಯ ವಾಹನಗಳ ಖರೀದಿಯಲ್ಲಿ ತೊಡಗಿದ್ದು, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯಲಿದೆ ಎಂದು ಹೇಳಿದರು.

ಸೋಲಾರ್ ಬೀದಿ ದೀಪ: ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿಯೂ ಸೋಲಾರ್ ಆಧಾರಿತ ಬೀದಿ ದೀಪ ಅಳವಡಿಸಲು ಉದ್ದೇಶಿಸಲಾಗಿದೆ. ಹದಿನಾಲ್ಕನೆ ಹಣಕಾಸು ಯೋಜನೆ ಅನುದಾನವನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಅಲ್ಲದೆ ಶಾಸಕರ ಪ್ರದೇಶಾಭಿವೃದ್ದಿ ನಿಧಿ ಅನುದಾನ ನೀಡಲು ಕೋರಲಾಗಿದೆ ಎಂದರು.

ಈ ಯೋಜನೆಯಡಿ ಮೊದಲ ಹಂತದಲ್ಲಿ ಕಟ್ಟಡಗಳಿಗೆ ಸೋಲಾರ್ ದೀಪ ಅಳವಡಿಸಿ, ಅನಂತರ ಹಂತ-ಹಂತವಾಗಿ ಬೀದಿಗಳಿಗೆ ಹಾಗೂ ಮನೆಗಳಿಗೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವ ಉದ್ದೇಶವಿದೆ ಎಂದು ಈಶ್ವರಪ್ಪ ತಿಳಿಸಿದರು.

ಪ್ರತಿ ಮನೆಗೆ ನಲ್ಲಿ: ಕೇಂದ್ರ ಸರಕಾರದ ‘ಜಲಾಮೃತ ಯೋಜನೆ’ಯಡಿ ರಾಜ್ಯದ ರಾಮನಗರ, ಬಾಗಲಕೋಟೆ, ಕೋಲಾರ, ವಿಜಯಪುರ ಜಿಲ್ಲೆಗಳಲ್ಲಿ ಪ್ರತಿ ಮನೆಗೂ ನಲ್ಲಿ ನೀರು ಒದಗಿಸುವ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಈಶ್ವರಪ್ಪ ವಿವರಿಸಿದರು.

ಕೇಂದ್ರ ಸರಕಾರ ಜಲಾಮೃತ ಯೋಜನೆಗೆ ಇನ್ನೂ ಅನುದಾನ ನಿಗದಪಡಿಸಿಲ್ಲ. ನಿಗದಿಪಡಿಸಿದ ನಂತರ ರಾಜ್ಯದ ಪಾಲು ಎಷ್ಟು ಎಂಬುದು ಗೊತ್ತಾಗಲಿದೆ. ಈ ಯೋಜನೆ ಬಗ್ಗೆ ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News