ತೆಲಂಗಾಣ ಪೊಲೀಸರ ಎನ್‌ಕೌಂಟರ್ ಸಮರ್ಥನೀಯ: ಯಡಿಯೂರಪ್ಪ

Update: 2019-12-06 16:23 GMT

ಬೆಂಗಳೂರು, ಡಿ. 6: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 63ನೆ ಮಹಾಪರಿನಿಬ್ಬಾಣ ದಿನ ಅಂಗವಾಗಿ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಅಂಬೇಡ್ಕರ್ ಅವರ ಪುತ್ಥಳಿ ಮತ್ತು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಗುರುವಾರ ವಿಧಾನಸೌಧದ ಮುಂಭಾಗದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ ಸೇರಿದಂತೆ ಹಲವು ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಯಡಿಯೂರಪ್ಪ, ದೀನ ದಲಿತ ಏಳ್ಗೆಗಾಗಿ ತಮ್ಮ ಬದುಕನ್ನೆ ಮೀಸಲಿಟ್ಟ ಅಂಬೇಡ್ಕರ್ ಅವರ ದಾರಿಯಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಭಿವೃದ್ಧಿ ದಿಕ್ಕಿನತ್ತ ದೃಢ ಹೆಜ್ಜೆಯನ್ನಿಟ್ಟು ಬಡವರ ಶ್ರೆಯೋಭಿವೃದ್ಧಿಗೆ ಶ್ರಮಿಸಲಿದೆ ಎಂದು ಅಭಯ ನೀಡಿದರು.

ಅಂಬೇಡ್ಕರ್ ಅವರ ಪ್ರತಿಪಾದಿಸಿದ ಸಮಷ್ಟಿಗಾಗಿ ವ್ಯಕ್ತಿ, ವ್ಯಕ್ತಿಗಾಗಿ ಸಮಷ್ಟಿ ಎಂಬ ಸಿದ್ಧಾಂತ ಈಗಲೂ ಪ್ರಸ್ತುತವಾಗಿದೆ. ಎಲ್ಲರೂ ಸಹೋದರತ್ವದಿಂದ ಸಹಬಾಳ್ವೆ ನಡೆಸುವಂತಹ ಸಮಸಮಾಜ ನಿರ್ಮಾಣ ಅಂಬೇಡ್ಕರ್ ಅವರ ಗುರಿಯಾಗಿತ್ತು ಎಂದು ಯಡಿಯೂರಪ್ಪ ಸ್ಮರಿಸಿದರು.

‘ತೆಲಂಗಾಣ ಪೊಲೀಸರು ಅತ್ಯಾಚಾರ ಆರೋಪಿಗಳ ಮೇಲೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಎನ್‌ಕೌಂಟರ್ ನಡೆಸಿದ್ದಾರೆ. ಪೊಲೀಸರು ನಡೆಸಿದ ಎನ್‌ಕೌಂಟರ್ ಸಮರ್ಥನೀಯವಾಗಿದೆ’

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News