ಸಾರ್ವಜನಿಕ ಜೀವನ ಪ್ರವೇಶ ನನ್ನ ಆಯ್ಕೆಯಲ್ಲ, ಆಕಸ್ಮಿಕ: ಪಿ.ಜಿ.ಆರ್.ಸಿಂಧ್ಯಾ

Update: 2019-12-06 16:30 GMT

ಬೆಂಗಳೂರು, ಡಿ.6: ನಮ್ಮ ದೇಶದಲ್ಲಿ ಹಲವು ರಾಜರು ಆಳ್ವಿಕೆ ನಡೆಸಿದ್ದರೂ, ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿರುವ ಕೆಲವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಒಬ್ಬರಾಗಿದ್ದಾರೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ. 

ಶುಕ್ರವಾರ ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನಾಲ್ವಡಿ ಕೃಷ್ಣರಾಜ ಒಡೆಯರ ದತ್ತಿ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಕೃಷ್ಣರಾಜ ಒಡೆಯರ್ ದೇವದಾಸಿ ಪದ್ಧತಿ, ಬಸವಿ ಪದ್ಧತಿ, ಗೆಜ್ಜೆ ಪೂಜೆ, ವೇಶ್ಯಾವಾಟಿಕೆಯಂತ ದುಷ್ಟ ಪದ್ಧತಿಗಳನ್ನು ನಿರ್ಮೂಲನೆಗೊಳಿಸಿ ಮಹಿಳೆಯರಿಗೆ ಮತದಾನ ಹಾಗೂ ಶಿಕ್ಷಣದ ಹಕ್ಕನ್ನು ನೀಡಿದವರು. ಜನರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ರಾಜ್ಯಾದ್ಯಂತ ಕಾರ್ಖಾನೆಗಳನ್ನು ನಿರ್ಮಿಸಿದ ಅವರ ಕಾರ್ಯ ಶ್ಲಾಘನೀಯ. ಅಂತಹವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿ ಪಡೆದಿರುವುದು ನನ್ನ ಪುಣ್ಯ ಎಂದು ತಿಳಿಸಿದರು.

ಸಾರ್ವಜನಿಕ ಜೀವನ ಪ್ರವೇಶ ನನ್ನ ಆಯ್ಕೆಯಲ್ಲ, ಆಕಸ್ಮಿಕ ಎಂದ ಅವರು, ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ನನ್ನನ್ನು ಕರೆದ ಎಸ್.ಆರ್. ಬೊಮ್ಮಾಯಿ, ತಮ್ಮ ಕಿಸೆಯಿಂದ 5 ಸಾವಿರ ರೂ. ನೀಡಿ ಚುನಾವಣೆಯಲ್ಲಿ ನಿಲ್ಲುವಂತೆ ಹೇಳಿದರು. ಆ ಮೂಲಕ ನಾನು ಸಾರ್ವಜನಿಕ ಜೀವನ ಪ್ರವೇಶಿಸಿದೆ ಎಂದು ಸಿಂಧ್ಯಾ ಹೇಳಿದರು.

ಸಚಿವನಾಗಿ ನಾನಾ ಖಾತೆಗಳಲ್ಲಿ ಕಾರ್ಯನಿರ್ವಹಿಸಿ ಮೆಚ್ಚುಗೆ ಪಡೆದಷ್ಟೇ, ಬೈಸಿಕೊಂಡದ್ದೂ ಇದೆ. ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ನಾನು ಕೇಳದಿದ್ದರೂ ನನ್ನ ಬಳಿಗೇ ಬಿ ಫಾರ್ಮ್ ಬರುತ್ತಿತ್ತು. ಆಗೆಲ್ಲ ನಾನು ಗೆದ್ದಿದ್ದೇನೆ. ಯಾವಾಗ ನಾನೇ ಬಿ ಫಾರ್ಮ್ ಕೇಳಿ ಚುನಾವಣೆಗೆ ಸ್ಪರ್ಧಿಸಿದೆನೋ ಆಗೆಲ್ಲ ಸೋತಿದ್ದೇನೆ ಎಂದು ಅನುಭವ ಹಂಚಿಕೊಂಡರು.

ರಾಜಕೀಯದಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯಿಂದ ಹಾಲಿ ಪ್ರಧಾನಿ ನರೇಂದ್ರ ಮೋದಿ ವರೆಗಿನ ಎಲ್ಲ ಪ್ರಧಾನಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅದೇ ರೀತಿ ಸಾಹಿತ್ಯ, ಸಂಗೀತ, ಧಾರ್ಮಿಕ ಸೇರಿದಂತೆ ನಾನಾ ಕ್ಷೇತ್ರಗಳ ಪ್ರಮುಖರ ಒಡನಾಟದಲ್ಲಿ ಈವರೆಗೂ ಸಾಗಿ ಬಂದಿದ್ದೇನೆ. ಅದರಲ್ಲೂ ಕುವೆಂಪು ಅವರಿಂದ ಇಂದಿನ ಚಂದ್ರಶೇಖರ ಕಂಬಾರರವರೆಗಿನ ಎಲ್ಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿದ್ದು ಅತಿ ಸಂತಸ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್, ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News