ವಕ್ಫ್ ಆಸ್ತಿಗಳ ಸಂರಕ್ಷಣೆ-ಅಭಿವೃದ್ಧಿ ಕುರಿತು ಡಿ.8ರಂದು ವಿಚಾರ ಸಂಕಿರಣ: ಡಾ.ಕೆ.ರಹ್ಮಾನ್ ಖಾನ್

Update: 2019-12-06 16:55 GMT

ಬೆಂಗಳೂರು, ಡಿ.6: ಭಾರತದಲ್ಲಿನ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕುರಿತು ಚರ್ಚಿಸಲು ಡಿ.8ರಂದು ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ನಗರದ ಮಿಲ್ಲರ್ಸ್‌ ರಸ್ತೆಯಲ್ಲಿರುವ ದೇವರಾಜ ಅರಸು ಭವನದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೊಸದಿಲ್ಲಿಯ ಇನ್ಸ್‌ಟಿಟ್ಯೂಟ್ ಆಫ್ ಆಬ್ಜೆಕ್ಟಿವ್ ಸ್ಟಡೀಸ್ ಹಾಗೂ ಇಂಡಿಯನ್ ಔಕಾಫ್ ಫೌಂಡೇಷನ್ ಜಂಟಿಯಾಗಿ ಆಯೋಜಿಸಿರುವ ಈ ವಿಚಾರ ಸಂಕಿರಣದಲ್ಲಿ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು ಸೇರಿದಂತೆ ಸುಮಾರು 250 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.

ಈ ವಿಚಾರ ಸಂಕಿರಣದಲ್ಲಿ ವಕ್ಫ್‌ನ ಅಗತ್ಯತೆ, ಸಕ್ಷಮ ಪ್ರಾಧಿಕಾರಗಳು ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕುರಿತು ನಡೆದುಕೊಂಡಿರುವ ರೀತಿ ಕುರಿತು ವೌಲ್ಯಮಾಪನ, ಭಾರತದಲ್ಲಿನ ವಕ್ಫ್ ಆಸ್ತಿಗಳ ಪ್ರಗತಿ ಹಾಗೂ ಸಂರಕ್ಷಣೆ ಕುರಿತು ಮುಸ್ಲಿಮ್ ಸಮುದಾಯದ ವೈಫಲ್ಯ, ಉತ್ತರದಾಯಿತ್ವ ಹಾಗೂ ಕರ್ತವ್ಯದ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ರಹ್ಮಾನ್ ಖಾನ್ ಹೇಳಿದರು.

ವಾಣಿಜ್ಯಾತ್ಮಕ ಹಾಗೂ ಹೂಡಿಕೆ ಸೇರಿದಂತೆ ಇನ್ನಿತರ ವಿಧದಲ್ಲಿ ವಕ್ಫ್ ಆಸ್ತಿಗಳ ಸದ್ಬಳಕೆ, ವಕ್ಫ್ ಆಸ್ತಿಗಳ ಅಭಿವೃದ್ಧಿಗಾಗಿ ಎದುರಾಗುತ್ತಿರುವ ಕುರಿತು ಈ ವಿಚಾರ ಸಂಕಿರಣದಲ್ಲಿ ತಜ್ಞರು ವಿಚಾರ ಮಂಡನೆ ಮಾಡಲಿದ್ದಾರೆ. ಅಲ್ಲದೇ, ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ನಿರ್ಣಯಗಳನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಇಂಡಿಯನ್ ಔಕಾಫ್ ಫೌಂಡೇಷನ್ ಅನ್ನು ಪ್ರಾದೇಶಿಕ ಮಟ್ಟದಲ್ಲಿಯೂ ರಚಿಸಲು ಉದ್ದೇಶಿಸಿದ್ದು, ಅದರ ಶಾಖೆಗಳನ್ನು ತೆರೆಯಲಾಗುವುದು. ವಕ್ಫ್ ಆಸ್ತಿಗಳ ಅಗತ್ಯತೆ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದು ರಹ್ಮಾನ್ ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News