ಡಿ.12ಕ್ಕೆ ಅಸಂಘಟಿತ ಕಾರ್ಮಿಕರಿಂದ ವಿಧಾನಸೌಧ ಚಲೋ

Update: 2019-12-06 17:24 GMT

ಬೆಂಗಳೂರು, ಡಿ.6: ಭವಿಷ್ಯ ನಿಧಿ ಕಾನೂನು ತಂದು, ಮುಂದಿನ ಬಜೆಟ್‌ನಲ್ಲಿ 500 ಕೋಟಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿ ಅಸಂಘಟಿತ ಕಾರ್ಮಿಕರಿಂದ ಡಿ.12 ರಂದು ವಿಧಾನಸೌಧ ಚಲೋ ಹಮ್ಮಿಕೊಂಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸಂಘಟಿತ ಕಾರ್ಮಿಕರ ಸಂಘದ ಕಾರ್ಯದರ್ಶಿ ಕೆ.ಮಹಾಂತೇಶ್, ಹಮಾಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರ ಮತ್ತು ನಿರ್ವಾಹಕರು, ಮನೆ ಕೆಲಸಗಾರರು, ಮೆಕಾನಿಕ್‌ಗಳು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಸಾವಿರಾರು ಕಾರ್ಮಿಕರು ಅಂದು ಚಲೋನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಅಂದು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೃಹತ್ ಮೆರವಣಿಗೆ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಇಲ್ಲಿನ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಬಹಿರಂಗ ಸಭೆ ನಡೆಸುವುದರ ಮೂಲಕ ಸರಕಾರಕ್ಕೆ ನಮ್ಮ ಹಕ್ಕೊತ್ತಾಯಗಳನ್ನು ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಅಸಂಘಟಿತ ಕಾರ್ಮಿಕ ವಲಯದಿಂದ ಸರಕಾರದ ಬೊಕ್ಕಸಕ್ಕೆ ಪ್ರತಿವರ್ಷ ಅಂದಾಜು ಶೇ.60 ರಷ್ಟು ಆದಾಯ ಬರುತ್ತಿದೆ. ಆದರೆ, ಕಾರ್ಮಿಕರಿಗೆ ಕನಿಷ್ಠ ವೇತನ, ಪಿಂಚಣಿ, ಆರೋಗ್ಯ ವಿಮೆ ಹಾಗೂ ಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಸೇರಿ ಯಾವುದೇ ಸೌಲಭ್ಯಗಳು ಸರಕಾರ ನೀಡುತ್ತಿಲ್ಲ ಎಂದು ಅವರು ಹೇಳಿದರು.

ಎಲ್ಲ ಅಸಂಘಟಿತ ಕಾರ್ಮಿಕರಿಗೆ ಕೂಡಲೇ ಅಂಬೇಡ್ಕರ್ ಸ್ಮಾರ್ಟ್ ಕಾರ್ಡ್ ನೀಡಬೇಕು. 2017 ರ ಬಜೆಟ್‌ನಲ್ಲಿ ಘೋಷಿಸಿರುವ ಭವಿಷ್ಯನಿಧಿ ಯೋಜನೆಯನ್ನು ಕಾನೂನಾಗಿ ಪರಿವರ್ತಿಸಬೇಕು. 2020 ಜನವರಿಯಿಂದ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಜಾರಿಗೊಳಿಸಬೇಕು. ಗುರುತಿನ ಚೀಟಿ ಪಡೆದವರಿಗೆ ಆಯುಷ್ಮಾನ್ ಭಾರತ ಕಾರ್ಡುಗಳು ಹಾಗೂ ಕನಿಷ್ಠ ಮೂರು ಸಾವಿರ ಮಾಸಿಕ ಪಿಂಚಣಿ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್.ವೀರಾಸ್ವಾಮಿ, ಪದಾಧಿಕಾರಿಗಳಾದ ಸೈಯದ್ ಮುಜೀದ್, ಪರಮೇಶ್ವರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News