ಎನ್‌ಕೌಂಟರ್‌ ನ ಸಾಚಾತನ ಪ್ರಶ್ನಿಸಿದ ಆರೋಪಿಗಳ ಕುಟುಂಬಸ್ಥರು

Update: 2019-12-06 17:27 GMT

ಹೈದರಾಬಾದ್,ಡಿ.6: ತೆಲಂಗಾಣದ ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಎನ್‌ ಕೌಂಟರ್‌ನಲ್ಲಿ ಹೊಡೆದುರುಳಿಸಿರುವುದನ್ನು ಒಂದೆಡೆ ಸಾರ್ವಜನಿಕರು ಪ್ರಶಂಸಿಸುತ್ತಿದ್ದರೆ ಇನ್ನೊಂದೆಡೆ ಹತ್ಯೆಯಾದ ಆರೋಪಿಗಳ ಕುಟುಂಬಸ್ಥರು ಈ ಎನ್‌ ಕೌಂಟರ್‌ ನ ಸಾಚಾತನದ ಬಗ್ಗೆ ಪ್ರಶ್ನಿಸಿದ್ದಾರೆ.

ಎನ್‌ಕೌಂಟರ್‌ಗೆ ಬಲಿಯಾದ ನಾಲ್ವರಲ್ಲಿ ಒಬ್ಬನಾದ ಚಿಂತಾಕುಂಟ ಚೆನ್ನಕೇಶವಲುವಿನ ಹದಿನೇಳು ವರ್ಷ ವಯಸ್ಸಿನ ಪತ್ನಿ ರೇಣುಕಾ ರೋದಿಸುತ್ತಾ, ತನ್ನನ್ನು ಕೂಡಾ ತನ್ನ ಗಂಡ ಹತ್ಯೆಯಾದ ಸ್ಥಳದಲ್ಲೇ ತನ್ನನ್ನು ಕೂಡಾ ಕೊಲ್ಲಿ. ಆತನಿಲ್ಲದೆ ತಾನು ಬದುಕಲಾರೆ ಎಂದು ಹೇಳಿದ್ದಾಳೆ.

ನಾರಾಯಣಪೇಟೆ ಜಿಲ್ಲೆಯ ಮಖ್ತಾಲ್ ಬ್ಲಾಕಂನ ನಿವಾಸಿಯಾದ ಚೆನ್ನಕೇಶವಲು ಮಾತ್ರವೇ ಈ ನಾಲ್ವರು ಆರೋಪಿಗಳಲ್ಲಿ ವಿವಾಹಿತ. ಎನ್‌ಕೌಂಟರ್‌ನಲ್ಲಿ ಆತ ಮೃತಪಟ್ಚಿರುವ ಸುದ್ದಿ ತಿಳಿದಿರುವಂತೆಯೇ ಇಡೀ ಕುಟುಂಬ ಆಘಾತಗೊಂಡಿದೆ.

ತನ್ನ ಪತಿಯನ್ನು ಪೊಲೀಸರು ವಿಚಾರಣೆಗಾಗಿ ಕೊಂಡೊಯ್ದಿದ್ದರು. ಆತನನ್ನು ಪ್ರಶ್ನಿಸಿ ವಾಪಸ್ ಕರೆತರುವುದಾಗಿ ಅವರು ತಿಳಿಸಿದ್ದರು. ಆದರೆ ಅವರು ಆತನನ್ನು ನಿರ್ದಯವಾಗಿ ಸಾಯಿಸಿದ್ದಾರೆಂದು ಆಕೆ ವರದಿಗಾರರೊಂದಿಗೆ ರೋದಿಸುತ್ತಾ ಹೇಳಿದ್ದಾರೆ.

ಚೆನ್ನಕೇಶವಲು ಜೊತೆ ವಿವಾಹವಾಗಿ ತನಗೆ ಒಂದು ವರ್ಷ ಕೂಡಾ ಕಳೆದಿಲ್ಲವೆಂದು ಹೇಳಿದ ಆಕೆ, ಒಂದು ವೇಳೆ ತನ್ನ ಪತಿ ನಿಜಕ್ಕೂ ಅಪರಾಧ ಎಸಗಿದ್ದರೆ ನ್ಯಾಯಾಲಯ ವಿಚಾರಣೆ ನಡೆಸಿ, ಆತನಿಗೆ ಮರಣದಂಡನೆ ನೀಡಬಹುದಾಗಿತ್ತು. ಎಂದು ಆಕೆ ಅಲವತ್ತುಕೊಂಡಿದ್ದಾಳೆ.

 ಪ್ರಕರಣದ ಇನ್ನೋರ್ವ ಆರೋಪಿ ಮುಹಮ್ಮದ್ ಆರೀಫ್‌ನ ತಾಯಿ, ತನ್ನ ಪುತ್ರನ ಎನ್‌ಕೌಂಟರ್‌ಗೆ ಬಲಿಯಾದ ಸುದ್ದಿ ಕೇಳುತ್ತಿದ್ದಂತೆಯೇ ಹೈದರಾಬಾದ್ ಸಮೀಪದ ಜಕ್ಕುಲಾರೆ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಕುಸಿದುಬಿದ್ದಿದ್ದಾರೆ ಹಾಗೂ ತನ್ನನ್ನು ಭೇಟಿಯಾಗಲು ಬಂದ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.

ಇತರ ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೂ ಇದೇ ಶಿಕ್ಷೆ ನೀಡಿ

ಪ್ರಕರಣದ ಇನ್ನೋರ್ವ ಆರೋಪಿ ಜೊಲ್ಲು ಶಿವನ ತಂದೆ ಜೊಲ್ಲು ರಾಜಪ್ಪ ಅವರು ಪೊಲೀಸರು ಎನ್‌ಕೌಂಟರ್ ನಡೆಸಿರುವುರಲ್ಲಿ ತಪ್ಪೇನೂ ಇಲ್ಲವೆಂದು ಹೇಳಿದ್ದಾರೆ. ಪೊಲೀಸರು ನನ್ನ ಪುತ್ರನನ್ನು ಆತ ಎಸಗಿದ ಅಪರಾಧಕ್ಕಾಗಿ ಕೊಂದಿದ್ದೇ ಆಗಿದ್ದಲ್ಲಿ, ಇದೇ ರೀತಿ ಶಿಕ್ಷೆಯನ್ನು ಇತರ ಅತ್ಯಾಚಾರಿಗಳಿಗೂ ನೀಡಬೇಕಾಗಿದೆ ಎಂದು ಆತ ಆಗ್ರಹಿಸಿದ್ದಾರೆ.

ಜೊಲ್ಲು ನವೀನ್‌ನ ತಂದೆ ಯೆಲ್ಲಪ್ಪ , ತನ್ನ ಪುತ್ರನನ್ನು ಪೊಲೀಸರು ನಿರ್ದಯವಾಗಿ ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ಪೊಲೀಸರು ನನಗೆ ನನ್ನ ಪುತ್ರನನ್ನು ಭೇಟಿಯಾಗಿ ಮಾತನಾಡಲು ಕೂಡಾ ಅವಕಾಶ ನೀಡಲಿಲ್ಲ. ನನ್ನ ಮಗ ಹಾಗೂ ಇತರರು ಅಪರಾಧಿಗಳೆಂದು ಸಾಬೀತುಪಡಿಸಲು ಸಾಕಷ್ಟು ಸಮಯಾವಕಾಶವಿತ್ತು. ಕಾನೂನು ಪ್ರಕ್ರಿಯೆ ಮುಗಿಯುವ ಮೊದಲೇ ಆತನನ್ನು ಶಿಕ್ಷಿಸುವ ಅಗತ್ಯವಾದರೂ ಏನಿತ್ತು” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News