ಶಾಲೆ-ಕಾಲೇಜುಗಳಲ್ಲಿ ಸಂವಿಧಾನ ಪ್ರಸ್ತಾವನೆ ಕಡ್ಡಾಯಗೊಳಿಸಿ: ದಸಂಸ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾರಪ್ಪ

Update: 2019-12-06 17:36 GMT

ಬೆಂಗಳೂರು, ಡಿ.6: ಸಂವಿಧಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪ್ರಸ್ತಾವನೆ ಬೋಧನೆ ಕಡ್ಡಾಯಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ(ಸಮತಾವಾದ) ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್.ಮಾರಪ್ಪಒತ್ತಾಯಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ 63ನೆ ವಾರ್ಷಿಕ ಪರಿನಿಬ್ಬಾಣ ದಿನದ ಅಂಗವಾಗಿ ಶುಕ್ರವಾರ ನಗರದ ಬನ್ನಪ್ಪಪಾರ್ಕ್‌ನಿಂದ ವಿಧಾನ ಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆವರೆಗೆ ಆಯೋಜಿಸಿದ್ದ, ಸ್ವಾಭಿಮಾನಿ ಸಂಕಲ್ಪದಿನ ಹಾಗೂ ಬೃಹತ್ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಗೀತೆ, ನಾಡಗೀತೆ ಕಡ್ಡಾಯಗೊಳಿಸಿರುವ ಮಾದರಿಯಲ್ಲಿಯೇ ಸಂವಿಧಾನ ಪ್ರಸ್ತಾವನೆ ಬೋಧನೆ ಕಡ್ಡಾಯವಾಗಬೇಕು. ಆಗ ಮಾತ್ರ, ಶಾಶ್ವತವಾಗಿ ಸಂವಿಧಾನ ಕುರಿತು ಗೌರವ, ಮಹತ್ವ ತಿಳಿದುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಸಚಿವರು ರಾಜೀನಾಮೆ ನೀಡಲಿ: ಶಾಲಾ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಂವಿಧಾನ ದಿನಾಚರಣೆ ಆಚರಿಸುವ ಸಂಬಂಧ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಕೈಪಿಡಿಯಲ್ಲಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ. ಸಂವಿಧಾನವು ನಮ್ಮ ದೇಶದಾದ್ಯಂತ ಇರುವ ವಿವಿಧ ಧರ್ಮ, ಜಾತಿ ಮತ್ತು ಬುಡಕಟ್ಟಿಗೆ ಸೇರಿದಂತಹ ಪುರುಷರು ಹಾಗೂ ಮಹಿಳೆಯರು ಸೇರಿ ಮಾಡಿರುವಂತಹ ಒಂದು ಸಾಮೂಹಿಕ ಪ್ರಯತ್ನದ ಫಲ ಎಂದು ಅಸಂಬದ್ಧ ಸುಳ್ಳನ್ನು ಪ್ರಚಾರ ಮಾಡಲಾಗಿದೆ. ಇಂತಹ ಅಪಮಾನ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ಕೈಪಿಡಿಯನ್ನು ಸಿಎಂಸಿಎ ಎಂಬ ಸಂಸ್ಥೆಯೊಂದು ತಯಾರಿಸಿದ್ದು, ಶಿಕ್ಷಣ ಇಲಾಖೆ ಮೂಲಕ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಅಂಬೇಡ್ಕರ್ ಅವರ ಬಗ್ಗೆ ತಪ್ಪುಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಸಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೂರ್ವಾಪರ ವಿಚಾರ ಅವಲೋಕಿಸದೆ ಕೈಪಿಡಿಯನ್ನು ಯಥಾವತ್ತಾಗಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿದರು.

ಪಟ್ಟಭದ್ರ ಹಿತಾಸಕ್ತಿಗಳು ಐದಾರು ವರ್ಷಗಳಿಂದ ಸಂವಿಧಾನ ಹಾಗೂ ಅಂಬೇಡ್ಕರ್ ವಿರುದ್ಧ ದೊಡ್ಡ ಷಡ್ಯಂತ್ರ ನಡೆಸುತ್ತಿದ್ದಾರೆ. ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಸಿಎಂಸಿಎ ಸಂಸ್ಥೆಗೆ ನಿರ್ಬಂಧ ಹೇರಬೇಕು ಎಂದು ಮಾರಪ್ಪ ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News