ಪಠ್ಯ ಪುಸ್ತಕ ಖರೀದಿಗೆ ಮುಂಗಡ ಹಣ ಪಾವತಿ ವಿಚಾರ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-12-06 17:46 GMT

ಬೆಂಗಳೂರು, ಡಿ.6: ರಾಜ್ಯದ ಅನುದಾನರಹಿತ ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ 2020-21ನೆ ಸಾಲಿನ 1ರಿಂದ 10ನೆ ತರಗತಿವರೆಗಿನ ಪಠ್ಯಪುಸ್ತಕವನ್ನು ಖರೀದಿಸಲು ಶೇ.25ರಷ್ಟು ಮುಂಗಡ ಹಣ ಪಾವತಿಸಲು ಸೂಚಿಸಿ ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘ ಹೊರಡಿಸಿದ ಸುತ್ತೋಲೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಶಿವಾಜಿನಗರದ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ, ಶಿಕ್ಷಣ ಇಲಾಖೆ ಕಾರ್ಯದರ್ಶಿ, ಆಯುಕ್ತರು ಹಾಗೂ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದೆ.

ಅರ್ಜಿದಾರರ ಪರ ವಾದಿಸಿದ ವಕೀಲರು, ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಸಂಘವು ಶೇ.25ರಷ್ಟು ಮುಂಗಡ ಹಣ ನೀಡಿದರೆ 2020-21ನೆ ಸಾಲಿನ 1ರಿಂದ 10ನೆ ತರಗತಿವರೆಗಿನ ಪಠ್ಯಪುಸ್ತಕಗಳನ್ನು ನೀಡುತ್ತೇವೆ ಎಂದು ಹೇಳುತ್ತಿದೆ. ಆದರೆ, ರಾಜ್ಯದ ಅನುದಾನರಹಿತ ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಮಕ್ಕಳ ಪೋಷಕರಿಂದ ಹಣ ಪಡೆದ ಬಳಿಕವೇ ಪಠ್ಯ ಪುಸ್ತಕ ಸಂಘಕ್ಕೆ ಹಣ ಪಾವತಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಸಂಘ ಹೊರಡಿಸಿದ ಸುತ್ತೋಲೆ ಕೂಡ ಸಂವಿಧಾನದ ವಿರುದ್ಧವಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News