ಬಿಗಡಾಯಿಸುತ್ತಿರುವ ಜೀವದ್ರವದ ಬಿಕ್ಕಟ್ಟು

Update: 2019-12-07 08:18 GMT

     ಮ. ಶ್ರೀ ಮುರಳಿ ಕೃಷ್ಣ 

ಒಂದು ಸರ್ವೇಕ್ಷಣದ ಪ್ರಕಾರ ನಮ್ಮಲ್ಲಿ ಸುಮಾರು 63 ಮಿಲಿಯ ಗ್ರಾಮೀಣ ಜನತೆ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಇದು ಕಳವಳಕಾರಿ ಸಂಗತಿ. ನಮ್ಮಲ್ಲಿರುವ ರೋಗಗಳ ಪೈಕಿ ಶೇ. 21ರಷ್ಟು ನೀರಿಗೆ ಸಂಬಂಧಿಸಿವೆ. ಸರಕಾರಿ ಯೋಜನೆಗಳ ಪರಿಕಲ್ಪನೆ ಮತ್ತು ಅನುಷ್ಠಾನದಲ್ಲಿನ ನ್ಯೂನತೆಗಳು, ಕಾರ್ಪೊರೇಟ್ ಖಾಸಗೀಕರಣ, ಕೈಗಾರಿಕೆ ಮತ್ತು ಮಾನವ ತಾಜ್ಯಗಳ ಸೇರ್ಪಡೆ, ಭ್ರಷ್ಟಾಚಾರ ಇತ್ಯಾದಿ ನೀರಿನ ಬಿಕ್ಕಟ್ಟಿಗೆ ಕಾರಣಗಳಾಗಿವೆ. ನೀತಿ ಆಯೋಗದ ಒಂದು ಅಧ್ಯಯನ ತಂಡದ ವರದಿಯ ಅನ್ವಯ ಮುಂದಿನ ವರ್ಷ ನಮ್ಮ ದೇಶದ 21 ನಗರಗಳಲ್ಲಿ ಅಂತರ್ಜಲ ಖಾಲಿಯಾಗಲಿದೆ. ಇವುಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಕೂಡಾ ಸೇರಿದೆ.

ಜೀವದ್ರವ ನೀರು ನಿಸರ್ಗದತ್ತ ಒಂದು ಅತ್ಯಮೂಲ್ಯ ಸಂಪನ್ಮೂಲ. ನಮ್ಮ ಭೂಮಿಯ ಶೇ. 71ರಷ್ಟು ಪ್ರದೇಶ ನೀರಿನಿಂದ ಕೂಡಿದೆ. ದಶಕಗಳು ಜಾರುತ್ತಿರುವಂತೆ ನೀರನ್ನು ಅತ್ಯಂತ ಬರ್ಬರವಾಗಿ ಶೋಷಿಸಲಾಗುತ್ತಿದೆ. ಈ ನಿಸರ್ಗದ ಸಂಪನ್ಮೂಲವನ್ನು ಬಳಸುವುದರಲ್ಲಿ ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಮುಂದಿವೆ. ಸಿರಿವಂತರು ಇದನ್ನು ಪೋಲು ಮಾಡುವುದರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಪಂಚದ ಅನೇಕ ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರವಿದೆ. ಬಡ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ಶುದ್ಧ ನೀರಿನ ಅಭಾವದ ಪರಿಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಇನ್ನಷ್ಟು ಬಿಗಡಾಯಿಸಿದೆ. ಜಾಗತಿಕ ತಾಪಮಾನದಲ್ಲಿ ಹೆಚ್ಚಳ ಮತ್ತು ಇತರ ಗಹನವಾದ ಕಾರಣಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಜಗತ್ತಿನ ಅನೇಕ ಪ್ರದೇಶಗಳನ್ನು ಬಾಧಿಸುತ್ತಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ(ಜನರಲ್ ಅಸೆಂಬ್ಲಿ) 2015ರಲ್ಲಿ 17 ಜಾಗತಿಕ ಮಟ್ಟದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2030ರ ವೇಳೆಗೆ ತಲುಪಬೇಕೆಂಬ ಆಶಯವನ್ನು ಹೊಂದಿದೆ. ಈ ಪಟ್ಟಿಯ ಆರನೇ ಗುರಿ ಎಲ್ಲರಿಗೂ ಶುದ್ಧ ನೀರು ದೊರಕುವಂತಾಗಬೇಕು ಎಂಬುದಾಗಿದೆ. ಒಂದು ಅಂದಾಜಿನ ಅನ್ವಯ ಪ್ರಪಂಚದ ಜನಸಂಖ್ಯೆಯ ಕಾಲುಭಾಗದ ಜನತೆ ಸುರಕ್ಷಿತ ನೀರಿನಿಂದ ವಂಚಿತರಾಗಿದ್ದಾರೆ. ಇದರಿಂದ ನಿವಾಸಗಳು, ಶಾಲೆಗಳು, ಕೆಲಸಗಳ ತಾಣಗಳು, ಕಾರ್ಖಾನೆಗಳು ಇತ್ಯಾದಿ ಸ್ಥಳಗಳು ಬಾಧಿತಗೊಂಡಿವೆ. ಕುಡಿಯುವ ನೀರು ತಲುಪುವುದರಲ್ಲಿ ಅನೇಕ ತಾರತಮ್ಯಗಳಿವೆ. ಮಹಿಳೆಯರು, ಮಕ್ಕಳು, ಸಮಾಜದ ಅಂಚಿನಲ್ಲಿರುವವರು, ನಿರಾಶ್ರಿತರು ಹಾಗೂ ವಂಚಿತ ಸಮುದಾಯಗಳ ಜನರು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅವಗಣನೆಗೆ ಒಳಗಾಗುತ್ತಾರೆ; ಪಕ್ಷಪಾತಿ ಧೋರಣೆಗೆ ಸಿಲುಕುತ್ತಾರೆ. ವಿಶ್ವಸಂಸ್ಥೆಯ ಇನ್ನೊಂದು ಅಂಗವಾದ  UNICEFನ ಒಂದು ವರದಿಯ ಅನ್ವಯ 2040ರ ಸಮಯಕ್ಕೆ ನಾಲ್ಕು ಮಕ್ಕಳಲ್ಲಿ ಒಬ್ಬರು ನೀರಿನಿಂದ ವಂಚಿತರಾಗುತ್ತಾರೆ.

ನೀರಿನ ಸಂಪನ್ಮೂಲದ ಮೇಲೆ ಹವಾಮಾನದ ಬದಲಾವಣೆಗಳು, ಬರಗಳು, ಕ್ಷಯಿಸುತ್ತಿರುವ ಜಲಮೂಲಗಳು, ಕದನಗಳು ಇತ್ಯಾದಿ ಅನೇಕ ಬಗೆಯ ಒತ್ತಡಗಳನ್ನು ಹೇರುತ್ತಿವೆ. ದಕ್ಷಿಣ ಸುಡಾನ್, ನೈಜೀರಿಯಾ, ಸೊಮಾಲಿಯ ಮತ್ತು ಯಮೆನ್‌ಗಳ ಸುಮಾರು 1.4 ಮಿಲಿಯ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಸಾವಿಗೆ ತುತ್ತಾಗುವ ದಾರುಣ ಸಂಭವ ಜಾಸ್ತಿ. ಇದರಲ್ಲಿ ಶುದ್ಧ ನೀರಿನ ಅಭಾವದ ಅಂಶವೂ ಸೇರ್ಪಡೆಯಾಗಿದೆ. ಔದಮ್ಯೀಕರಣ, ಜನಸಂಖ್ಯೆಯ ವೃದ್ಧಿ ಮುಂತಾದ ಕಾರಣಗಳಿಂದ ಸಬ್-ಸಹಾರನ್ ಆಫ್ರಿಕಾ, ಏಶ್ಯ(ದಕ್ಷಿಣ ಮತ್ತು ಮಧ್ಯ ಪ್ರಾಚ್ಯ)ಗಳ ಭಾಗಗಳು ತೊಂದರೆಗೆ ಈಡಾಗಲಿವೆ. ಪ್ರಾದೇಶಿಕ ರಾಜಕೀಯ ಸಮಸ್ಯೆಗಳಿಗಿಂತ ಇರಾನ್ ಪರ್ಯಾವರಣ ಸಮಸ್ಯೆಗಳಿಂದ ಕಂಗೆಡುವ ಸಾಧ್ಯತೆಗಳೇ ಹೆಚ್ಚು. ಅಲ್ಲೂ ನೀರಿನ ಸಮಸ್ಯೆ ದೊಡ್ಡ ಸ್ವರೂಪವನ್ನು ಪಡೆಯುತ್ತಿದೆ!

ವಿಶ್ವಸಂಸ್ಥೆಯ ವರದಿಯ ಅನ್ವಯ ಜಾಗತಿಕ ಮಟ್ಟದಲ್ಲಿ 36 ದೇಶಗಳು ನೀರಿಗೆ ಸಂಬಂಧಿಸಿದಂತೆ ಮೇಲುಸ್ತರದ ಒತ್ತಡಗಳನ್ನು ಎದುರಿಸುತ್ತಿವೆ. ಈ ಪಟ್ಟಿಯಲ್ಲಿ ಭಾರತವೂ ಇದೆ. ಈ ದೇಶಗಳಲ್ಲಿ ನೀರಿನ ಬೇಡಿಕೆಗಳು ಹೆಚ್ಚಾಗುತ್ತಿವೆ. ಆದರೆ ಇವುಗಳಿಗೆ ಅನುಗುಣವಾಗಿ ನೀರು ವಿತರಣೆಯಾಗುತ್ತಿಲ್ಲ. ಹವಾಮಾನದ ತಾಪಮಾನದಲ್ಲಿ ಏರುಮುಖ, ಹೆಚ್ಚುತ್ತಿರುವ ಸಮುದ್ರಗಳ ನೀರಿನ ಮಟ್ಟ, ಪ್ರವಾಹಗಳು, ಬರಗಳು ಮತ್ತು ಕರಗುತ್ತಿರುವ ಹಿಮಗುಡ್ಡೆಗಳು, ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಇರುವ ಅಸಮರ್ಪಕ ವ್ಯವಸ್ಥೆಗಳು ಮುಂತಾದವು ನೀರಿನ ಲಭ್ಯತೆ ಹಾಗೂ ಅದರ ಗುಣಮಟ್ಟದ ಮೇಲೆ ತೀವ್ರತರವಾದ ಪ್ರತಿಕೂಲಕರ ಪರಿಣಾಮಗಳನ್ನು ಬೀರುತ್ತಿವೆ.

 ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದು. ಪ್ರಪಂಚದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಮಂದಿ ಇಲ್ಲಿ ವಾಸವಾಗಿದ್ದಾರೆ. ಒಂದು ಸರ್ವೇಕ್ಷಣದ ಪ್ರಕಾರ ನಮ್ಮಲ್ಲಿ ಸುಮಾರು 63 ಮಿಲಿಯ ಗ್ರಾಮೀಣ ಜನತೆ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಇದು ಕಳವಳಕಾರಿ ಸಂಗತಿ. ನಮ್ಮಲ್ಲಿರುವ ರೋಗಗಳ ಪೈಕಿ ಶೇ. 21ರಷ್ಟು ನೀರಿಗೆ ಸಂಬಂಧಿಸಿವೆ. ಸರಕಾರಿ ಯೋಜನೆಗಳ ಪರಿಕಲ್ಪನೆ ಮತ್ತು ಅನುಷ್ಠಾನದಲ್ಲಿನ ನ್ಯೂನತೆಗಳು, ಕಾರ್ಪೊರೇಟ್ ಖಾಸಗೀಕರಣ, ಕೈಗಾರಿಕೆ ಮತ್ತು ಮಾನವ ತಾಜ್ಯಗಳ ಸೇರ್ಪಡೆ, ಭ್ರಷ್ಟಾಚಾರ ಇತ್ಯಾದಿ ನೀರಿನ ಬಿಕ್ಕಟ್ಟಿಗೆ ಕಾರಣಗಳಾಗಿವೆ. ನೀತಿ ಆಯೋಗದ ಒಂದು ಅಧ್ಯಯನ ತಂಡದ ವರದಿಯ ಅನ್ವಯ ಮುಂದಿನ ವರ್ಷ ನಮ್ಮ ದೇಶದ 21 ನಗರಗಳಲ್ಲಿ ಅಂತರ್ಜಲ ಖಾಲಿಯಾಗಲಿದೆ. ಇವುಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಕೂಡಾ ಸೇರಿದೆ. ಪ್ರತಿ ವರ್ಷ ನಮ್ಮಲ್ಲಿ ಅಗಾಧ ಸಂಖ್ಯೆಯ ಮಂದಿ ಸುರಕ್ಷಿತ ನೀರಿನ ತೀವ್ರ ಕೊರತೆಯಿಂದ ಅಸುನೀಗುತ್ತಿದ್ದಾರೆ. ಸುಮಾರು 600 ಮಿಲಿಯ ಮಂದಿ ನೀರಿನ ವಿವಿಧ ಬಗೆಯ ಬವಣೆಗಳಿಂದ ನಲುಗುತ್ತಿದ್ದಾರೆ.

ಕರ್ನಾಟಕದ ಪರಿಸ್ಥಿತಿಯೂ ಆತಂಕಕಾರಿಯಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಈ ವರ್ಷ ಬೇಸಿಗೆಯಲ್ಲಿ ಸರಕಾರ 26 ಜಿಲ್ಲೆಗಳ 996 ಗ್ರಾಮಗಳಿಗೆ ಟ್ಯಾಂಕರುಗಳ ಮೂಲಕ ಕುಡಿಯುವ ನೀರನ್ನು ವಿತರಿಸಿದೆ. ಇದರ ಜೊತೆ 815 ಗ್ರಾಮಗಳಲ್ಲಿ ಜಿಲ್ಲಾ ಆಡಳಿತ 1,000 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರನ್ನು ಹಂಚಿದೆ. ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ನಮ್ಮ ರಾಜ್ಯ ಬರದಿಂದ ತತ್ತರಿಸಿದೆ. ಈ ವರ್ಷ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವು ಶಾಲೆಗಳು ಬೇಸಿಗೆ ರಜೆಯ ತರುವಾಯ ತಡವಾಗಿ ತೆರೆದವು. ಅನೇಕ ದಿನಗಳು ಅವು ಅರ್ಧ ದಿನ ಮಾತ್ರ ಕೆಲಸ ಮಾಡಿದವು. ಕಾರ್ಕಳ ತಾಲೂಕಿನ 100 ಶಾಲೆಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯು ಅಸ್ತವ್ಯಸ್ತವಾಯಿತು. ಉತ್ತರ ಕರ್ನಾಟಕದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ನೀರಿಗಾಗಿ ಪರದಾಟವಿತ್ತು. ಆನಂತರ ಅವು ವರುಣನ ಅವಕೃಪೆಗೆ ಒಳಗಾಗಿ ಪ್ರವಾಹದಿಂದ ಜರ್ಜರಿತಗೊಂಡವು. ಬೆಂಗಳೂರಿನಲ್ಲಿ ಐದು ವರ್ಷಗಳ ಕಾಲ ಅಪಾರ್ಟ್ ಮೆಂಟ್‌ಗಳ ನಿರ್ಮಾಣಕ್ಕೆ ತಡೆಯೊಡ್ಡಲು ಸರಕಾರ ಯೋಚಿಸುತ್ತಿದೆ ಎಂದು ಅಂದಿನ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದರು. ಇದು ಕಾರ್ಯಗತವಾಗುವುದೋ ಇಲ್ಲವೋ ಎನ್ನುವುದು ಬೇರೆಯೇ ವಿಷಯ. ಅಲ್ಲದೆ ನಮ್ಮ ರಾಜ್ಯದ ರಾಜಧಾನಿಗೆ ನೀರುಣಿಸಲು ದೂರದ ಎತ್ತಿನಹೊಳೆ, ಶರಾವತಿ, ನೇತ್ರಾವತಿ ಮತ್ತು ಪಶ್ಚಿಮ ಘಟ್ಟದ ಕೆಲವು ನದಿಗಳ ನೀರನ್ನು ಹರಿಸಬೇಕೆಂಬ ಕೂಗುಗಳ ವಿರುದ್ಧ ಆ ನದಿಪ್ರದೇಶಗಳ ಜನತೆ ಪ್ರತಿರೋಧವನ್ನು ಒಡ್ಡುತ್ತಿರುವ ವಿದ್ಯಮಾನಗಳು ನಮ್ಮೆದುರಿಗಿವೆ.

ಒಂದೆಡೆ ನಾವು ಬಹುರಾಷ್ಟ್ರೀಯ ಕಂಪೆನಿಗಳಾದ ಕೋಕೊ ಕೋಲಾ ಮುಂತಾದುವು ನೀರಿನ ಮೂಲಗಳನ್ನು ಯಾವ ಬಗೆಯ ಮಾನದಂಡವಿಲ್ಲದೆ ಬಳಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಇನ್ನೊಂದೆಡೆ ನಮ್ಮ ನಗರ ಪ್ರದೇಶಗಳಲ್ಲಿ ಸಂಸ್ಕರಿಸಿದ ನೀರನ್ನು ಬೇಕಾಬಿಟ್ಟಿಯಾಗಿ ಜನರು ಪ್ರಜ್ಞಾಹೀನತೆಯಿಂದ ತಮ್ಮ ವಾಹನಗಳನ್ನು, ಮನೆಗಳ ಕಾಂಪೌಂಡ್ ಗೋಡೆಗಳನ್ನು, ಮುಂದಿರುವ ಚಪ್ಪಡಿ ಕಲ್ಲುಗಳನ್ನು ನಿತ್ಯ ತೊಳೆಯಲು ಬಳಸುತ್ತಿದ್ದಾರೆ. ಇದರ ಬಗ್ಗೆ ಅವರನ್ನು ವಿಚಾರಿಸಿದರೆ, ‘‘ನಮ್ಮ ನೀರನ್ನು ನಾವು ಬಳಸುತ್ತೇವೆ. ಅದಕ್ಕಾಗಿ ನಾವು ತೆರಿಗೆಯನ್ನು ಕಟ್ಟುವುದಿಲ್ಲವೇ? ಅಷ್ಟಕ್ಕೂ ನೀವ್ಯಾರು ಇದನ್ನು ಕೇಳೋಕೆ?’’ ಎಂದು ಹರಿಹಾಯುತ್ತಾರೆ; ಜಗಳಕ್ಕೆ ಸಿದ್ಧರಾಗುತ್ತಾರೆ! ಇಂತಹ ವಿವೇಚನಾರಹಿತ ನಡೆಗಳು ಕೂಡ ನೀರಿನ ಸಮಸ್ಯೆಗಳು ಉಲ್ಬಣಿಸುವಂತೆ ಮಾಡಿವೆ. ನಾವೆಷ್ಟು ನೀರನ್ನು ಬಳಸಬೇಕು ಎಂಬುದನ್ನು ಆಗಾಗ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಲೇ ಇರಬೇಕು.

ಇಮೈಲ್ :msmurali1961@gmail.com    

Writer - ಮ. ಶ್ರೀ ಮುರಳಿ ಕೃಷ್ಣ

contributor

Editor - ಮ. ಶ್ರೀ ಮುರಳಿ ಕೃಷ್ಣ

contributor

Similar News