ಮಾಗಡಿಯಲ್ಲಿ ಸಂಸ್ಕೃತ ವಿವಿ ಸ್ಥಾಪನೆ: ಡಿಸಿಎಂ ಅಶ್ವಥ್ ನಾರಾಯಣ ಸ್ಥಳ ಪರಿಶೀಲನೆ

Update: 2019-12-07 17:05 GMT

ರಾಮನಗರ, ಡಿ.7: ಮಾಗಡಿ ತಾಲೂಕಿನ ತಿಪ್ಪಸಂದ್ರದ ಬಳಿ ನಿರ್ಮಾಣಗೊಳ್ಳಲಿರುವ ಸಂಸ್ಕೃತ ವಿಶ್ವವಿದ್ಯಾನಿಲಯದ ಸ್ಥಳ ಪರಿಶೀಲನೆಯನ್ನು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ನಡೆಸಿದರು.

ಸಂಸ್ಕೃತ ವಿಶ್ವವಿದ್ಯಾನಿಲಯಕ್ಕಾಗಿ 100 ಎಕರೆ ಜಮೀನು ಮಂಜೂರು ಮಾಡಲಾಗಿದೆ. 330 ಕೋಟಿ ರೂ.ವೆಚ್ಚದಲ್ಲಿ ಕ್ಯಾಂಪಸ್ ನಿರ್ಮಿಸಲು ಯೋಜಿಸಲಾಗಿದ್ದು, ಮೊದಲು ಕಾಂಪೌಂಡ್ ನಿರ್ಮಾಣ ಮಾಡಿ ನಂತರ ಕಟ್ಟಡ ನಿರ್ಮಾಣ ಕೆಲಸ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ನೀಲಿ ನಕ್ಷೆಯನ್ನು ಸಿದ್ಧಪಡಿಸಲಾಗಿದ್ದು, ಡಿ.ಪಿ.ಎ.ಆರ್ ಹಾಗೂ ಆರ್ಥಿಕ ಇಲಾಖೆಯಿಂದ ಆಗಬೇಕಿರುವ ಕೆಲಸಗಳನ್ನು ಚುರುಕುಗೊಳಿಸಲಾಗುವುದು ಎಂದು ಅಶ್ವಥ್ ನಾರಾಯಣ ತಿಳಿಸಿದರು.

ಆಡಳಿತಕ್ಕೆ ಆದ್ಯತೆ: ಸರಕಾರದಿಂದ ಬಿಡುಗಡೆಯಾಗುವ ಅನುದಾನ ಸದುಪಯೋಗವಾಗಬೇಕಾದರೆ ಆಡಳಿತಕ್ಕೆ ಆದ್ಯತೆ ನೀಡಬೇಕು. ಆಡಳಿತ ಚೆನ್ನಾಗಿಲ್ಲವೆಂದರೆ ಎಷ್ಟು ಕೋಟಿ ಅನುದಾನ ಕೊಟ್ಟರೂ ವ್ಯರ್ಥವಾಗುತ್ತದೆ. ಇರುವ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ನೀಡಬೇಕು, ಆಗ ಬದಲಾವಣೆಗಳನ್ನು ನೋಡಬಹುದು ಎಂದು ಅವರು ಹೇಳಿದರು.

ಮಾಗಡಿ ತಾಲೂಕಿನ ಮೇಲೆ ಅಭಿಮಾನವಿದೆ. ಮಾಗಡಿ ಸೇರಿದಂತೆ ರಾಮನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ನನ್ನ ಗುರಿ. ಜಿಲ್ಲೆಯಲ್ಲಿ ದಲ್ಲಾಳಿ ರಹಿತ ಪಾರದರ್ಶಕ ಆಡಳಿತ ನೀಡಿ ಸರಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲಾಗುವುದು. ಸಾರ್ವಜನಿಕರು ಮುಂದಿನ ದಿನಗಳಲ್ಲಿ ಆಡಳಿತದಲ್ಲಿ ಬದಲಾವಣೆಗಳನ್ನು ನೋಡಲಿದ್ದಾರೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.

ಆಡಳಿತ ಎಂಬುದು ದೊಡ್ಡ ವ್ಯವಸ್ಥೆ. ಇಲ್ಲಿ ಅಧಿಕಾರಿಗಳಿಗೆ ಯಾವುದೇ ಅಡೆತಡೆ ಹಾಗೂ ಯಾರ ಹಂಗು ಇಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸಿ. ಇದಕ್ಕೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಸ್ಥಳ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಅರ್ಚನಾ ಎಂ.ಎಸ್., ಉಪವಿಭಾಗಾಧಿಕಾರಿ, ಮಾಗಡಿ ತಹಶೀಲ್ದಾರ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News