ಬೆಂಗಳೂರು: ದೇಶವ್ಯಾಪಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Update: 2019-12-07 17:44 GMT

ಬೆಂಗಳೂರು, ಡಿ.7: ದೇಶವ್ಯಾಪಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಸರಣಿ ಅತ್ಯಾಚಾರಗಳನ್ನು ಖಂಡಿಸಿ, ಕೊಲೆಯ ಪ್ರಯತ್ನ ಪ್ರಕರಣಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳಿಂದ ನಗರದಲ್ಲಿಂದು ಪ್ರತಿಭಟನೆ ನಡೆಯಿತು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ್ದ ಸಂಘಟನೆಗಳ ಕಾರ್ಯಕರ್ತರು ಉತ್ತರ ಪ್ರದೇಶ, ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ದೇಶದ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಹತ್ಯೆಗಳನ್ನು ತಡೆಯುವಲ್ಲಿ ವಿಫಲವಾದ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಎಂಎಸ್‌ನ ಮುಖಂಡರಾದ ರಾಜೇಶ್ವರಿ, ದೇಶದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರಿಗಳ ಸಂಖ್ಯೆ ಅಧಿಕವಾಗುತ್ತಿದೆ. ತ್ವರಿತವಾಗಿ ವಿಚಾರಣೆ ನಡೆಸಿ, ಶಿಕ್ಷೆ ವಿಧಿಸಬೇಕಾದ ನ್ಯಾಯಾಲಯವೂ ನಿಷ್ಕ್ರಿಯಗೊಂಡಿದೆ. ಅತ್ಯಾಚಾರ ಮಾಡಿದವರೇ ಬೇಲ್ ಪಡೆದುಕೊಂಡು ಎಲ್ಲರ ಎದುರು ಯಾವುದೇ ಅಳುಕಿಲ್ಲದೆ ಸುತ್ತಾಡುವಂತಾಗಿದೆ ಎಂದರು.

ದಿಲ್ಲಿಯ ನಿರ್ಭಯಾ ಅತ್ಯಾಚಾರ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ಬಿಜೆಪಿ, ಇಂದು ಅಧಿಕಾರದಲ್ಲಿದೆ. ಆದರೆ, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಅವರದೇ ಪಕ್ಷದವರು ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಾಗಿದ್ದಾರೆ. ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿಲ್ಲ. ಪರೋಕ್ಷವಾಗಿ ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದೂರಿದರು.

ಮಹಿಳಾ ಸಂಘಟನೆಯ ಲಲಿತಾ ಶೆಣೈ ಮಾತನಾಡಿ, ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಮೇಲೆ ಅಪರಾಧಿಗಳೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತಾರೆ. ನಾವಿಂದು ಇಂತಹ ಕೆಟ್ಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಅತ್ಯಾಚಾರಿಗಳಿಗೆ ಕಠಿಣ ಕಾನೂನು ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ, ಸಂತ್ರಸ್ತರಿಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.

ನಿರ್ಭಯಾ ಪ್ರಕರಣದ ಬಳಿಕ ಕೇಂದ್ರ ಸರಕಾರಕ್ಕೆ ನ್ಯಾಯಮೂರ್ತಿ ವರ್ಮಾ ಅವರ ಸಮಿತಿ ವರದಿಯೊಂದನ್ನು ನೀಡಲಾಗಿದೆ. ಆದರೆ, ಅದನ್ನು ಇದುವರೆಗೂ ಕೇಂದ್ರ ಸರಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿಲ್ಲ ಎಂದ ಅವರು, ಕೂಡಲೇ ಆ ವರದಿಯನ್ನು ಜಾರಿಗೊಳಿಸಿ ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್ ಮಾತನಾಡಿ, ಉತ್ತರ ಪ್ರದೇಶದ ಸರಕಾರ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಅದೇ ರೀತಿ ತೆಲಂಗಾಣದಲ್ಲಿ ನಡೆದ ವೈದ್ಯೆಯ ಅತ್ಯಾಚಾರದ ಆರೋಪಿಗಳನ್ನು ನ್ಯಾಯಾಲಯದ ಕಲಾಪ ಆರಂಭಕ್ಕೂ ಮುನ್ನವೇ ಎನ್‌ಕೌಂಟರ್‌ನಲ್ಲಿ ಪೊಲೀಸರು ಸಾಯಿಸಿದ್ದು, ಅನುಮಾನಕ್ಕೆ ಕಾರಣವಾಗಿದೆ. ಒಟ್ಟಾರೆ, ಬಲಾಢ್ಯರನ್ನು ರಕ್ಷಿಸಲು ಎಲ್ಲ ರೀತಿಯಲ್ಲಿ ಆಳುವ ವರ್ಗ ಮುಂದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಪ್ರತಾಪ್‌ಸಿಂಹ, ಜೆಎಂಎಸ್‌ನ ಗೌರಮ್ಮ, ಎಸ್‌ಎಫ್‌ಐನ ಗುರುರಾಜ್ ದೇಸಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News