ಅತ್ಯಾಚಾರಿಗಳನ್ನು ಶಿಕ್ಷಿಸುವುದು ಪೊಲೀಸರ ಕಾರ್ಯವಲ್ಲ: ದಿವ್ಯಾ ಆರ್.ಬಿರಾದಾರ್

Update: 2019-12-07 17:44 GMT

ಬೆಂಗಳೂರು, ಡಿ.7: ಅತ್ಯಾಚಾರದ ಆರೋಪಿಗಳನ್ನು ಶಿಕ್ಷೆ ವಿಧಿಸಬೇಕಾಗಿರುವುದು ನ್ಯಾಯಾಲಯವೇ ಹೊರತು ಪೊಲೀಸರಲ್ಲವೆಂದು ಭಾರತೀಯ ಮಹಿಳಾ ಒಕ್ಕೂಟದ ಸಂಚಾಲಕಿ ದಿವ್ಯಾ ಆರ್.ಬಿರಾದಾರ್ ತಿಳಿಸಿದ್ದಾರೆ. 

ಶನಿವಾರ ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದ್ದನ್ನು ಖಂಡಿಸಿ ಭಾರತೀಯ ಮಹಿಳಾ ಒಕ್ಕೂಟದ ವತಿಯಿಂದ ನಗರದ ಮಲ್ಲೇಶ್ವರಂ ಸರ್ಕಲ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತೆಲಂಗಾಣ ಪಶುವೈದ್ಯೆಯ ಅತ್ಯಾಚಾರದ ಆರೋಪಿಗಳನ್ನು ಎನ್‌ಕೌಂಟರ್ ಪ್ರಕರಣವು ಸಂವಿಧಾನ ಬಾಹಿರವಾಗಿದ್ದು, ಮಹಿಳೆಯರಿಗೆ ನ್ಯಾಯ ಒದಗಿಸುವುದಿಲ್ಲ. ಬದಲಿಗೆ, ಮಹಿಳಾ ಚಳವಳಿ ಇಲ್ಲಿಯವರೆಗೂ ಗಳಿಸಿದ್ದ ಮಹಿಳಾ ಪರವಾದ ಕಾನೂನುಗಳನ್ನು ನಿರ್ನಾಮ ಮಡುವ ಹುನ್ನಾರವಾಗಿದೆ ಎಂದು ಅವರು ಕಿಡಿಕಾರಿದರು.

ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಮಾತುಗಳು ಘೋಷಣೆ ಮತ್ತು ಭಾಷಣಗಳಲ್ಲಿ ಮಾತ್ರ ಉಳಿದಿವೆ. ಬೇಟೆ ಬಚಾವ್ ಕಾರ್ಯಕ್ರಮಕ್ಕೆ ಸರಕಾರದ ಕೋಟ್ಯಂತರ ರೂ.ವೆಚ್ಚಮಾಡಿ ಜಾಹೀರಾತು ನೀಡಲಾಯಿತೇ ಹೊರತು ಹೆಣ್ಣು ಮಕ್ಕಳ ಜೀವ ಉಳಿಸಲು ಸಾಧ್ಯವಾಗಲಿಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯನ್ನು ನ್ಯಾಯಾಲಯಕ್ಕೆ ತೆರಳುವ ಹಾದಿಯಲ್ಲೇ ಆರೋಪಿಗಳು ಆಕೆಯನ್ನು ಸುಟ್ಟುಹಾಕಿದ ಘಟನೆಗೆ ಇಡೀ ದೇಶವೇ ಮೊತ್ತೊಮ್ಮೆ ಬೆಚ್ಚಿಬಿದ್ದಿದೆ. ಗರಿಷ್ಠ ಆಡಳಿತ ನಡೆಸುತ್ತೇವೆಂದು ಭರವಸೆ ನೀಡಿದ್ದ ಪ್ರಧಾನಿ ಮೋದಿ ಆಡಳಿತದಲ್ಲಿ, ಅತ್ಯಾಚಾರ ಪ್ರಕರಣಗಳು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೂ ಈ ಬಗ್ಗೆ ಮೌನವಹಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಭಾರತೀಯ ಮಹಿಳಾ ಒಕ್ಕೂಟದ ಜ್ಯೋತಿ, ಭಾರತಿ ಪ್ರಶಾಂತ್, ದಿವ್ಯಾ, ಅನಿತಾ, ವೀಣಾ, ಸರೋಜಾ, ಪುಷ್ಪಾ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News