ಕನ್ನಡ ಭಾಷೆ ಉಳಿವಿಗೆ ತಂತ್ರಜ್ಞಾನ ಬಳಕೆ: ಅಶ್ವಥ್ ನಾರಾಯಣ

Update: 2019-12-07 18:05 GMT

ಬೆಂಗಳೂರು, ಡಿ.7: ಕನ್ನಡ ಭಾಷೆ, ನುಡಿ ಉಳಿವಿಗೆ ರಾಜ್ಯ ಸರಕಾರ ಬದ್ಧವಾಗಿದ್ದು, ಇದರ ಅಭಿವೃದ್ಧಿಗಾಗಿ ಮಾಹಿತಿ ತಂತ್ರಜ್ಞಾವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ನುಡಿದರು.

ಶನಿವಾರ ನಗರದ ಗಾಂಧಿ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಶ್ರಯದಲ್ಲಿ ನಡೆದ ಹೊರರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆ, ನುಡಿ ಉಳಿವಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದು, ಗ್ರಂಥಗಳ ಡಿಜಿಟಲೀಕರಣದಿಂದ ಹಿಡಿದು ಯಾವುದೇ ರೀತಿಯ ತಂತ್ರಜ್ಞಾನದ ಸಹಾಯ ನಮ್ಮಿಂದ ದೊರೆಯಲಿದೆ ಎಂದು ಅವರು ಹೇಳಿದರು.

ರಾಜ್ಯದ ಕೆಲ ಶಾಲಾ-ಕಾಲೇಜುಗಳಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಭಾಷಾ ಪಠ್ಯಗಳನ್ನು ಬೋಧಿಸಲಾಗುತ್ತಿದೆ. ಆದರೆ, ಕನ್ನಡ ಬೋಧಿಸಲು ಮುಂದಾಗುತ್ತಿಲ್ಲ. ನಮ್ಮ ಭಾಷೆ ಉಳಿವಿಗೆ ನಾವು ಇದಕ್ಕೆಲ್ಲ ತಡೆ ಒಡ್ಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರದ ಪಾತ್ರವೂ ಮುಖ್ಯವಾಗಿದೆ ಎಂದರು.

85ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ಎಚ್.ಎಸ್.ವೆಂಕಟೇಶ ಮೂರ್ತಿ ಮಾತನಾಡಿ, ಕನ್ನಡಿಗರು ಮತ್ತು ಕನ್ನಡ ಭಾಷೆಗೆ ನಮ್ಮ ರಾಜ್ಯದಲ್ಲಿ ಹೆಚ್ಚಿನ ಆದ್ಯತೆ ದೊರೆಯಬೇಕು ಎಂಬುದರ ಕುರಿತು ನಾನು ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಭಾಷೆ ನಮಗೆಲ್ಲ ತಾಯಿ, ಸರಸ್ವತಿ, ವತ್ಸಲೆಯಾಗಿರುವುದರಿಂದ ಆ ಭಾಷೆಯಿಂದ ಹೆಚ್ಚಿನ ಜನರಿಗೆ ನಮ್ಮ ನಾಡಿನಲ್ಲಿ ಅನ್ನ ದೊರೆಯುವಂತಾಗಬೇಕು. ಅಂದರೆ ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ದೊರೆಯುವಂತಾಗಬೇಕು ಎಂದು ನುಡಿದರು.

ಹೊರನಾಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ತೋರುತ್ತಿರುವಷ್ಟು ಪ್ರೀತಿ-ಕಾಳಜಿಯನ್ನು ಕರ್ನಾಟಕದಲ್ಲಿ ವಾಸಿಸುವ ನಾವು ತೋರಿದರೆ ಕನ್ನಡ ಯಾವತ್ತೂ ಪ್ರಜ್ವಲಿಸುತ್ತದೆ ಎಂದ ಅವರು, ಹೊರನಾಡ ಕನ್ನಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ಮುಂದಿನ ಸಾಲಿನಿಂದ ಹೆಸರಾಂತ ಸಾಹಿತಿಗಳ 10 ಪುಸ್ತಕ ನೀಡಿದರೆ ಅವರಲ್ಲಿ ಸದಾ ಉಳಿಯುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News