ಗುಪ್ತಗಾಮಿನಿ ಅತ್ಯಾಚಾರಕ್ಕೆ ತಡೆ ಶಿಕ್ಷೆಯೋ, ಶಿಕ್ಷಣವೋ?

Update: 2019-12-08 09:36 GMT

ಲೈಂಗಿಕತೆಯ ಬಗ್ಗೆ ಇರುವ ಪೂರ್ವಾ ಗ್ರಹಗಳನ್ನು ತೊಡೆದುಹಾಕುವ, ಲೈಂಗಿಕ ಕಾರ್ಯಕರ್ತರನ್ನು ಆರೋಗ್ಯಕರವಾಗಿ ಬಳಸಿಕೊಳ್ಳುವ, ಲೈಂಗಿಕ ವಿಚಾರಗಳ ಬಗ್ಗೆ ಕೌಟುಂಬಿಕ ವಾಗಿ ಮತ್ತು ಶೈಕ್ಷಣಿಕವಾಗಿ ಮುಕ್ತವಾಗಿ ಸಂವಾದಿಸುವ ವಾತಾವರಣಗಳನ್ನು ಸೃಷ್ಟಿಸುವಲ್ಲಿ ನಾವು ಸಫಲವೇ ಆದಲ್ಲಿ ಅತ್ಯಾಚಾರದ ಭೀಕರ ಮತ್ತು ಅಮಾನವೀಯ ಸಂಗತಿಗಳು ಘಟಿಸದಿರಬಹುದು. ಅತ್ಯಾಚಾರಿಗಳನ್ನು ಸಮಾಜವೇ ಪರೋಕ್ಷವಾಗಿ ಮತ್ತು ಅಜ್ಞಾನದಿಂದ ರೂಪಿಸಿ, ಅಥವಾ ನಮ್ಮ ಸಹಜೀವಿಗಳಲ್ಲೇ ರೂಪುಗೊಂಡಿರುವ ಅತ್ಯಾಚಾರಿಗಳನ್ನು ಗುರುತಿಸಲು, ಚಿಕಿತ್ಸೆ ನೀಡಲು ನಾವೇ ವಿಫಲವಾಗಿ ಮತ್ತೆ ಅವರನ್ನೇ ಶಿಕ್ಷಿಸುವುದು ನನ್ನ ದೃಷ್ಟಿಯಲ್ಲಿ ಹೊಣೆಗೇಡಿತನ. ಅತ್ಯಾಚಾರ ಮತ್ತು ಅದರಷ್ಟೇ ಭೀಕರವಾಗಿರುವ ಅನೇಕ ಸಂಗತಿಗಳಿಗೆ ನಾವು ಶಿಕ್ಷೆಯಿಂದ ನಿರ್ನಾಮ ಬಯಸಿದ್ದಲ್ಲಿ ಅದು ಅಪ್ರಾಯೋಗಿಕ ಮತ್ತು ವಿಫಲ ಯತ್ನ.

ಹಿಂದೆಂದಿನಿಂದಲೂ ಆಗುತ್ತಿರುವಂತೆ ಈಗಲೂ ಗುಂಪು ಅತ್ಯಾಚಾರ ಮತ್ತು ಹತ್ಯೆ ಮಾಡಿದ ಪ್ರಕರಣ ವರದಿ ಯಾಯಿತು. ಅತ್ಯಾಚಾರ ಮಾಡಿದವನನ್ನು ಸಾರ್ವಜನಿಕ ವಾಗಿ ತುಂಡುತುಂಡಾಗಿ ಕತ್ತರಿಸಿ ಎಂಬ ಆಕ್ರೋಶ ದೇಶಾದ್ಯಂತ ಭುಗಿಲೆದ್ದಿತು. ಆರೋಪಿಗಳ ಪೋಷಕರೂ ಕೂಡಾ ತಮ್ಮ ಮೋಹವನ್ನು ಮೀರಿ ತಪ್ಪಿಗೆ ಶಿಕ್ಷೆಯಾಗಲಿ ಎಂದು ನ್ಯಾಯದ ಪರವಾಗಿ ನಿಂತರು. ಅತ್ಯಾಚಾರಕ್ಕೆ ಒಳಗಾದವರ ಕಂಡು ಮಮ್ಮಲ ಮರುಗು ವಾಗಲೇ ಆರೋಪಿಗಳ ಕಡೆಗೂ ನೋಡಲೇ ಬೇಕಿದೆ. ಅವರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿಯುವುದಿಲ್ಲವೇ? ಈ ಹಿಂದೆ ಅವರು ಯಾವ ಅತ್ಯಾಚಾರ ಪ್ರಕರಣಗಳನ್ನು ಕೇಳೇ ಇಲ್ಲವೇ? ಹಾಗೆಯೇ ಇಂತಹ ಅಪರಾಧಗಳಿಗೆ ವ್ಯಾಪಕ ಖಂಡನೆ, ತೀವ್ರವಾದ ವಿಚಾರಣೆ ಮತ್ತು ಕಠಿಣ ಶಿಕ್ಷೆಗಳೆಲ್ಲವೂ ಕಾದಿರುತ್ತವೆ ಎಂದೇನೂ ತಿಳಿಯದಷ್ಟು ಮುಗ್ಧರೇ ಅಥವಾ ಅಜ್ಞಾನಿಗಳೇ? ಇದನ್ನು ಪೂರೈಸಿದ ನಂತರ ತಾವು ಸಿಕ್ಕಿ ಬೀಳುವುದಿಲ್ಲ ಎಂದು ಅವರು ನಂಬಿದ್ದರೇ? ಅಥವಾ ಅದಕ್ಕೆ ತಕ್ಕ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಯೋಜನೆ ಇತ್ತೇ? ಈ ಅತ್ಯಾಚಾರ ಅವರಿಗೆ ಮೊದಲನೆಯದೇ? ಅಥವಾ ಹಲವು ರೀತಿಗಳಲ್ಲಿ ತಮ್ಮ ತೀವ್ರ ಕಾಮುಕತೆಯನ್ನು ಪೂರೈಸಿ ಕೊಳ್ಳುತ್ತಿದ್ದವರು ಈ ಪ್ರಕರಣದಲ್ಲಿ ಅದು ಅತಿಯಾಗಿ ದೊಡ್ಡ ತಪ್ಪಾಗಿಬಿಟ್ಟಿತೇ? ಅವೆಲ್ಲಾ ನಮಗೆ ಗೊತ್ತಿಲ್ಲ. ಅತ್ಯಾಚಾರವಾಗಿ ಹತ್ಯೆಯಾಗಿದೆ. ಇಂತಹ ಕ್ರೂರ ಕೃತ್ಯಕ್ಕೆ ಕ್ರೂರವಾಗಿ ಶಿಕ್ಷೆಯಾಗಬೇಕು ಎಂದು ಬಿಟ್ಟರೆ, ಕ್ರೂರ ಕ್ರಿಯೆಗೆ ಕ್ರೂರ ಪ್ರತಿಕ್ರಿಯೆ ಕೊಟ್ಟಿದ್ದಷ್ಟೇ ಸಾಧನೆ. ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವುದು ಕೂಡಾ ಕ್ರೌರ್ಯದ ಮತ್ತೊಂದು ಮುಖವೇ ಹೊರತು ಅತ್ಯಾಚಾರ ವೆಂಬ ಕ್ರೌರ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಎಷ್ಟೂ ಕ್ರಮಿಸಿದಂತಾಗುವುದಿಲ್ಲ.

ಸಾವಿರಾರು ವರ್ಷಗಳಿಂದ ಅಪರಾಧಗಳಿಗೆ ಕಠಿಣ ಶಿಕ್ಷೆಗಳಾ ಗಿವೆ. ಅವುಗಳೆಲ್ಲದರ ಅಂದಿನ ಇತಿಹಾಸ ಮತ್ತು ಇಂದಿನ ಸುದ್ದಿಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಆದರೂ ಇಂದಿಗೂ ಅಪರಾಧಗಳನ್ನು ಕಾಣುತ್ತಿದ್ದೇವೆ. ಈ ಅಪರಾಧಗಳ ಹಿಂದಿನ ಪ್ರೇರಣೆಗಳನ್ನು ಗುರುತಿಸಬೇಕಾಗಿದೆ. ಏಕೆಂದರೆ ಶಿಕ್ಷೆಗಳು ನೈತಿಕತೆಯನ್ನು ಕಾಪಾಡುವಲ್ಲಿ ವಿಫಲವಾಗಿವೆ. ಶಿಕ್ಷೆಯ ಭಯಕ್ಕೆ ಪಾಲಿಸುವಂತಹ ನೈತಿಕತೆಯ ಪ್ರಾಮಾಣಿಕತೆ ಎಷ್ಟರಮಟ್ಟಿಗಿರುತ್ತದೆ?

ಅಂತರಂಗದ ಸ್ಫೋಟ

ಅತ್ಯಾಚಾರ ಮತ್ತು ಭ್ರಷ್ಟಾಚಾರಗಳಂತಹ ಯಾವ ಅಪರಾಧ ಗಳೂ ಒಮ್ಮಿಂದೊಮ್ಮೆಲೆ ಆಕಸ್ಮಿಕವಾಗಿ ಘಟಿಸಿ ಬಿಡುವಂತಹ ತಪ್ಪೇನಲ್ಲ. ಗುಪ್ತಗಾಮಿನಿಯಾಗಿದ್ದು ಸಡಿಲ ಪದರವನ್ನು ಭೇದಿಸಿ ಭುಗಿಲೇಳುವ ಸ್ಫೋಟ. ಈ ಸ್ಫೋಟವಾದಾಗ ಬಲಿ ಪಶು ಮತ್ತು ಆರೋಪಿಗಳಿಬ್ಬರಲ್ಲಿ ಬಲಿಪಶು ಆದವರಿಗೆ, ಹಾಗಾಗಲು ಬಹಳ ಸ್ಥೂಲವಾದ ಮತ್ತು ತಾಂತ್ರಿಕ ಕಾರಣ ಗಳಿರುತ್ತವೆ. ಉದಾಹರಣೆಗೆ; ಅಲ್ಲಿಗೆ ಬಂದದ್ದು, ಗಾಡಿ ಕೆಟ್ಟಿದ್ದು, ಸಹಾಯ ಮಾಡುತ್ತೇವೆ ಎಂದವರನ್ನು ಸಾಂದರ್ಭಿಕವಾಗಿ ಅಥವಾ ಸಮಯಾನುಸಾರವಾಗಿ ನಂಬಿದ್ದು, ದಾಳಿ ಮಾಡುವ ವರಿಂದ ತಪ್ಪಿಸಿಕೊಳ್ಳಲಾಗದೇ ಹೋಗಿದ್ದು; ಇತ್ಯಾದಿ. ಆದರೆ, ಆರೋಪಿಗಳ ವಿಷಯದಲ್ಲಿ ಬಹಳ ಸೂಕ್ಷ್ಮವಾದ ಕಾರಣ ಗಳಿರುತ್ತವೆ. ಈ ಸೂಕ್ಷ್ಮವಾದ ಕಾರಣಗಳನ್ನು ತಿಳಿಯುವುದರಲ್ಲಿ ವಿಫಲವಾಗುತ್ತಿರುವ ಕುಟುಂಬ ಮತ್ತು ಸಾಮಾಜಿಕ ವ್ಯವಸ್ಥೆಗಳು ಇಂತಹ ಮತ್ತಷ್ಟು ಆರೋಪಿಗಳನ್ನು ಸಮಾಜಕ್ಕೆ ನೀಡುತ್ತಲೇ ಇರುತ್ತವೆ.

ಅತ್ಯಾಚಾರವೆಂದರೇನು?

ಅತ್ಯಾಚಾರ ಎನ್ನುವುದು ಹಲವು ವಿಷಯಗಳ ಮೊತ್ತ. ಅದರಲ್ಲಿ ಪ್ರಧಾನವಾಗಿ ಕಾಣುವುದು ಎರಡು. ಒಂದು ಕ್ರೌರ್ಯ ಮತ್ತೊಂದು ಲೈಂಗಿಕತೆ. ತೀವ್ರತರವಾದ ಲೈಂಗಿಕ ದೌರ್ಜನ್ಯವು ಅತ್ಯಾಚಾರವಾಗಿ ಪ್ರಕಟವಾಗುತ್ತದೆ. ಈ ಪ್ರಕಟಣೆ ಒಮ್ಮಿಂದೊಮ್ಮೆಲೆ ಕಾಣಿಸಿಕೊಂಡಿರುವ ಫಲವಲ್ಲ. ಈ ಅತ್ಯಾಚಾರವೆಂಬ ಫಲದ ಹಿಂದೆ ಸಾಕಷ್ಟು ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಭಾವಗಳ ಕೃಷಿ ಇರುತ್ತದೆ. ಈ ಪ್ರಭಾವಗಳು ಒಬ್ಬ ವ್ಯಕ್ತಿಯನ್ನು ಆರೋಪಿಯನ್ನಾಗಿ ರೂಪಿಸುವುದು. ಬಾಲ್ಯ, ಸನಿಹದ ಸಂಬಂಧಗಳು, ಅವರ ಮೇಲಾಗಿರಬಹುದಾದ ದೌರ್ಜನ್ಯಗಳು, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು, ಮೆದುಳಿನ ಅಥವಾ ನರಗಳ ಕೆಲವು ಸಮಸ್ಯೆಗಳು, ಸ್ಯಾಡಿಸ್ಟಿಕ್ ಅಂದರೆ ಕ್ರೌರ್ಯದಿಂದ ಸಂತೋಷಪಡುವಂತಹ ಗುಣ ಗಳು, ನೈಸರ್ಗಿಕವಾಗಿರುವ ತೃಪ್ತಿಗಳನ್ನು ಅಸಹಜವಾಗಿ ಈಡೇರಿಸಿಕೊಳ್ಳುವಂತಹ ಗೀಳುಗಳು, ಮಾದಕ ವಸ್ತುಗಳ ವ್ಯಸನಗಳು, ಸಹಜ ಲೈಂಗಿಕತೆಯ ಬಗ್ಗೆ ಇರುವಂತಹ ಸಾಮಾಜಿಕ ಕಳಂಕ (ಸ್ಟಿಗ್ಮಾ), ಆರೋಗ್ಯಕರ ಲೈಂಗಿಕತೆಯ ಮತ್ತು ಸಾಮಾನ್ಯ ಲೈಂಗಿಕ ಶಿಕ್ಷಣದ ಕೊರತೆ, ಪುಂಡತನದ ಗುಂಪಿನ ಸದಸ್ಯರ ಸಮಾನ ಅಭಿರುಚಿಗಳ ತೀವ್ರತೆಗಳು; ಹೀಗೆ ಇನ್ನೂ ಹಲವು ವಿಷಯಗಳು ಪ್ರಭಾವಿಸಿರುತ್ತವೆ. ಇವು ವ್ಯಕ್ತಿಯ ಮಾನಸಿಕ ಅಸ್ವಸ್ಥತೆ ಮತ್ತು ಅಸಹಜ ವರ್ತನೆಗಳಿಗೆ ಕಾರಣವಾಗಿರುತ್ತವೆ. ತನ್ನ ಭಾವನೆಗಳನ್ನು, ಬಯಕೆಗಳನ್ನು ಅಥವಾ ಹಾತೊರೆಯುವಿಕೆಗಳನ್ನು ಹತ್ತಿಕ್ಕಿಕೊಳ್ಳಲಾಗದಂತೆ ವರ್ತಿಸುವುದಾಗಲಿ, ವಿವೇಚನೆಗೆ ಆಸ್ಪದವನ್ನೇ ಕೊಡದೇ ಪ್ರಯತ್ನಿಸುವುದಾಗಲಿ; ಅನಿಯಂತ್ರಣದ ಸಮಸ್ಯೆಯೇ. ಕೋಪ, ಅಸೂಯೆ, ಲೋಭ ಇತ್ಯಾದಿಗಳನ್ನು ನಿಯಂತ್ರಿಸಿಕೊಳ್ಳದೇ ವರ್ತಿಸುವ ಅಥವಾ ಉನ್ಮತ್ತರಾಗುವ ಬಗೆಯೇ ಲೈಂಗಿಕವಾಂಛೆ ಯ ವಿಷಯದಲ್ಲೂ ಇಣುಕುತ್ತದೆ. ಮೇಲೆ ಹೆಸರಿಸಿದ ಯಾವುದೇ ಭಾವಗಳನ್ನು ಅಥವಾ ಉತ್ಕಟ ವಾಂಛೆಗಳನ್ನು ಹತ್ತಿಕ್ಕಿಕೊಳ್ಳಲಾಗದೇ ಹೋದಾಗ, ನಿಯಂತ್ರಣವಿಲ್ಲದೇ ವರ್ತಿಸಿ ದಾಗ ಅಪರಾಧವಾಗುತ್ತದೆ. ಆಸೆಗಳು ಅಪರಾಧಗಳಾಗಿ ಪರಿವರ್ತಿತವಾಗುವುದು ನಿಯಂತ್ರಣದ ಕೊರತೆಯಿಂದಲೇ.

ಸಮಾನ ವ್ಯಸನಿಗಳ ಕೂಟ

ವ್ಯಸನಗಳು, ಮಾನಸಿಕ ಮತ್ತು ಮನೋದೈಹಿಕ ಸಮಸ್ಯೆಗಳು, ಉತ್ಕಟ ಬಯಕೆಗಳು ಇರುವವರು ತಮ್ಮಂತಹ ಮನಸ್ಥಿತಿ ಮತ್ತು ಸಮಸ್ಯೆಗಳಿರುವಂತಹ ವ್ಯಕ್ತಿಗಳ ಸಂಗವನ್ನು ಬಯಸುವುದು ಮತ್ತು ಅಸಾಂಸ್ಥಿಕ ಸಂಘವನ್ನು ಮಾಡಿಕೊಂಡು ತಮ್ಮ ವಾಂಛೆ ಗಳನ್ನು ತೀರಿಸಿಕೊಳ್ಳುವುದು ವಾಸ್ತವದ ಮತ್ತೊಂದು ಮಗ್ಗಲು. ಧೂಮಪಾನಿಗಳ ತಂಡ ಸಾಮೂಹಿಕ ಧೂಮ ಯಜ್ಞದಲ್ಲಿ ತೊಡಗುವಂತೆ ಅತಿಕಾಮಿಗಳೂ ಕೂಡಾ ಸಂಘಟಿತ ರಾಗುವರು. ಅವರಿಗೆ ಪರಿಣಾಮಗಳ ಬಗ್ಗೆ ಮಾಹಿತಿ ಇರುತ್ತದೆ. ಆದರೆ ಆ ಹೊತ್ತಿಗೆ ಅದನ್ನು ಮರೆಯುವಷ್ಟು ಉನ್ಮತ್ತರಾಗಿರುತ್ತಾರೆ. ಈ ಉನ್ಮತ್ತತೆಗೆ ಮದ್ಯವಾಗಲಿ ಅಥವಾ ಇನ್ನಾವುದೇ ಮಾದಕವಸ್ತುವಾಗಲಿ ಕಾರಣವಲ್ಲ. ಆದರೆ, ಅವು ಅವರನ್ನು ಹುರಿದುಂಬಿಸಲು ಸಹಕಾರಿಯಾಗಿರುತ್ತವೆ.

ಅತಿಕಾಮ ಸಮಸ್ಯೆ

(Voyeuristic disorder)

 ಕಾಮವು ಸಹಜ ತೃಷೆ. ಆದರೆ ಅತಿಕಾಮವು ವ್ಯಕ್ತಿಗಳಲ್ಲಿ ಆಸಕ್ತಿಗಳಾಗಿರಬಹುದು, ಗೀಳು, ವ್ಯಸನ ಅಥವಾ ಸಮಸ್ಯೆಯಾಗಿರಬಹುದು. ಬರಿಯ ಆಸಕ್ತಿಯ ಹಂತದಲ್ಲಿರುವವರು ಅದನ್ನು ತಮ್ಮದೇ ಆದಂತಹ ರೀತಿಗಳಲ್ಲಿ ತೃಪ್ತರಾಗಲು ಯತ್ನಿಸುತ್ತಿರುತ್ತಾರೆ. ಅವರು ತಮ್ಮ ಖಾಸಗಿ ಬದುಕಿನ ಮೂಲೆಗಳೆಲ್ಲೋ ತಿಣುಕಾಡಿಕೊಳ್ಳುತ್ತಾರೆ. ಆದರೆ ಇದೇ ಅತಿಕಾಮುಕತೆಯು ಗೀಳಾಗಿ, ವ್ಯಸನವಾಗಿ ವ್ಯಕ್ತಿಯಲ್ಲಿ ಗೂಡುಗೊಂಡರೆ, ಸಮಸ್ಯೆ ಎಂದು ಗ್ರಹಿಸಿ ಸಮಾಲೋಚನೆಯನ್ನೂ ಮತ್ತು ತಕ್ಕಂತಹ ಚಿಕಿತ್ಸೆಗಳನ್ನೂ ನೀಡ ಬೇಕಾಗುತ್ತದೆ. ಪ್ಯಾರಾಫಿಲಿಕ್ ಡಿಸಾರ್ಡರ್ ಅಂದರೆ ವ್ಯಕ್ತಿಯಲ್ಲಿನ ಅತಿಕಾಮುಕತೆಯ ಸಮಸ್ಯೆ ನಾನಾ ರೀತಿಗಳಲ್ಲಿ ಕಾಣಿಸಿಕೊಳ್ಳುವವು. ಇಣುಕು ಕಾಮ : ಬೇರೆಯವರ ಲೈಂಗಿಕ ಚಟುವಟಿಕೆ ಗಳನ್ನು ಕದ್ದು ನೋಡುವುದು. ಗುಪ್ತಾಂಗಗಳನ್ನು ಇಣುಕಿ ನೋಡುವುದು ಇತ್ಯಾದಿ.

 ಪ್ರದರ್ಶನ ಕಾಮ (Exhibitionistic disorder): ತಮ್ಮ ಗುಪ್ತಾಂಗಗಳನ್ನು ಅಥವಾ ತಮ್ಮ ಲೈಂಗಿಕತೆಯ ಆಸಕ್ತ ಅಂಗಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಗೀಳು.

ಸೇಡಿನ ಕಾಮ (Sexual masochism disorder): ತಾವು ಕಡೆಗಣಿಸಲ್ಪಟ್ಟಿದ್ದೇವೆ, ದಮನಿಸಲ್ಪಟ್ಟಿದ್ದೇವೆ, ನಿಯಂತ್ರಿಸಲ್ಪಟ್ಟಿದ್ದೇವೆ, ಕೆಟ್ಟದಾಗಿ ನಡೆಸಿಕೊಳ್ಳಲ್ಪಟ್ಟಿದ್ದೇವೆಂದು ಭಾವಿಸಿ, ಅದಕ್ಕೆ ಸೇಡುತೀರಿಸಿ ಕೊಳ್ಳಲು ಲೈಂಗಿಕ ದೌರ್ಜನ್ಯವನ್ನು ಎಸಗುವುದು.

ಕ್ರೌರ್ಯಾಮುದ ಕಾಮ (Sexual sadism disorder): ಬೇರೆಯವರಿಗೆ ಹಿಂಸೆ ನೀಡಿ, ಅವರು ಪಡುವ ನೋವಿನಿಂದ, ದುಃಖದಿಂದ ಆನಂದವನ್ನು ಪಡೆಯುತ್ತಾ ತನ್ನ ಕಾಮವನ್ನು ತೃಪ್ತಿಗೊಳಿಸಿಕೊಳ್ಳುವುದು.

ಶಿಶುಕಾಮ (Pedophilic disorder): ಈ ಸಮಸ್ಯೆ ಇರುವವರು ತಮ್ಮ ಲೈಂಗಿಕತೃಷೆಗೆ ಬೇಟೆಯಾಡುವುದು ಮಕ್ಕಳನ್ನು.

 ಅಲೈಂಗಿಕಾಂಗ ಕಾಮ (Fetishistic disorder): ಗುಪ್ತಾಂಗವೇ ಅಲ್ಲದ ದೇಹದ ಇತರ ಭಾಗಗಳ ಮೇಲೆ ಮತ್ತು ಕಾಮಕ್ಕೆ ಸಂಬಂಧವೇ ಇಲ್ಲದಂತಹ ವಸ್ತುಗಳಿಂದ ತಮ್ಮ ಲೈಂಗಿಕ ತೃಷೆಯನ್ನು ಈಡೇರಿಸಿಕೊಳ್ಳುವ ಗೀಳು.

ವಸ್ತ್ರಕಾಮ (Transvestic disorder): ತನ್ನ ವಿರುದ್ಧ ಲಿಂಗಿಯ ವಸ್ತ್ರಗಳನ್ನು ತಾನು ತೊಟ್ಟುಕೊಂಡು ಲೈಂಗಿಕ ತೃಪ್ತಿಯನ್ನು ಪಡೆಯುವುದು.

ಧ್ವನಿ ಕಾಮ (Telephone scatologia): ಇದು ಕಾಮವಾಣಿ. ಬರಿಯ ದೂರವಾಣಿ ಕರೆಗಳನ್ನು ನೀಡುತ್ತಾ, ಪಡೆಯುತ್ತಾ ಕಾಮೋತ್ತೇಜಕ ಮಾತುಗಳನ್ನಾಡಿಕೊಂಡು ಕಾಮಾತುರವನ್ನು ನೀಗಿಕೊಳ್ಳುವುದು.

ಮೂತ್ರಕಾಮ (Urophilia): ಮೂತ್ರವನ್ನು ಮೂಸುವ, ಸೇವಿಸುವ ಮತ್ತು ಅದರ ವಿಸರ್ಜನೆ ಯನ್ನು ಕೇಳುತ್ತಾ ಅಥವಾ ಮಾಡುವ ಮೂಲಕ ಆನಂದಿಸುವ ಕಾಮ.

 ಭಾವಕಾಮ (Autogynephilia) : ಪುರುಷರು ತಮ್ಮನ್ನು ಸ್ತ್ರೀಯೆಂದು ಭಾವಿಸಿಕೊಂಡು ಪಡುವ ಲೈಂಗಿಕ ತೃಪ್ತಿ.

ನಿರ್ವಾತ ಕಾಮ (Asphyxiophilia ಅಥವಾ hypoxyphilia): ಮೆದುಳಿಗೆ ಆಮ್ಲಜನಕದ ಸರಬರಾಜಿನ ಕೊರತೆಯನ್ನು ತಂದುಕೊಂಡು, ನಿರ್ವಾತದ ಸ್ಥಿತಿಯಲ್ಲಿ ಲೈಂಗಿಕಾನಂದವನ್ನು ಪಡೆಯುವುದು.

ಚಿತ್ರೀಕೃತ ಕಾಮ (Video voyeurism): ಇತರರ ಖಾಸಗೀ ಮೂಲೆಗಳಲ್ಲಿ ಇಣುಕಿ, ವಸ್ತ್ರಗಳನ್ನು ಬದಲಾಯಿಸುವ, ಸ್ನಾನ ಮಾಡುವ, ಪಾಯಖಾನೆಗಳಲ್ಲಿರುವ, ಬೆತ್ತಲಾಗಿರುವ, ಸಂಭೋಗಿಸುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಅದನ್ನು ನೋಡುವ ಮೂಲಕ ಅಥವಾ ಇತರರಿಗೆ ತೋರಿಸುವ ಮೂಲಕ ತಮ್ಮ ಕಾಮತೃಷೆಯನ್ನು ತಣಿಸಿಕೊಳ್ಳುವುದು. ಹೀಗೆ ಲೈಂಗಿಕಾಸಕ್ತಿಗಳನ್ನು ತೃಪ್ತಿಪಡಿಸಿಕೊಳ್ಳಲು ನಾನಾ ವ್ಯಕ್ತಿಗಳು ನಾನಾ ದಾರಿಗಳನ್ನು ತಮ್ಮ ಇಚ್ಛೆ ಇಲ್ಲದೆಯೇ ಕಂಡುಕೊಂಡಿರುತ್ತಾರೆ. ನಾವು ನೆನಪಿನಲ್ಲಿಡಲೇಬೇಕಾದ ವಿಷಯವೆಂದರೆ, ಮೇಲೆ ತಿಳಿಸಿದ ಯಾವುವೂ ಅವರ ಪ್ರಜ್ಞಾಪೂರ್ವಕ ಇಚ್ಛೆಯ ಅಥವಾ ಉದ್ದೇಶಿತ ಆಯ್ಕೆಗೆಅನುಗುಣವಾಗಿ ಅಲ್ಲ. ಇವುಗಳು ಅವರ ಅನೈಚ್ಛಿಕ ಮನೋದೈಹಿಕ ಸಮಸ್ಯೆ. ಇದಕ್ಕೆ ಕಾರಣಗಳು ಮಾತ್ರ ನಿಜಕ್ಕೂ ನೇರವಾಗಿ ತಿಳಿಯದು. ಆದರೆ ಕೌಟುಂಬಿಕ, ಶಾರೀರಿಕ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಪ್ರಭಾವಗಳೆಲ್ಲಾ ಕೆಲಸ ಮಾಡಿರುತ್ತವೆ ಎಂಬುದಂತೂ ಸತ್ಯ. ಈ ಲೈಂಗಿಕ ಅಸಹಜತೆಯ ವರ್ತನೆಗಳು ಹೆಂಗಸರಿಗಿಂತ ಗಂಡಸರಲ್ಲಿಯೇ ಇಪ್ಪತ್ತು ಪಟ್ಟು ಅಧಿಕ ಎಂದು ಅಧ್ಯಯನಗಳು ತಿಳಿಸುತ್ತವೆ. ಈ ಸಮಸ್ಯೆಗಳು ಧುತ್ತೆಂದು ವಯಸ್ಕರಲ್ಲಿ ಕಾಣಿಸಿಕೊಳ್ಳುವಂತಹದ್ದೇನಲ್ಲ. ಬಾಲ್ಯದಲ್ಲಿ, ಕಿಶೋರಾವಸ್ಥೆಯಲ್ಲಿ ಕಂಡುಬಂದು ವಯಸ್ಕರಾದಾಗ ಫಲ ನೀಡುತ್ತದೆ. ಒಟ್ಟಾರೆ ಸ್ಥೂಲವಾಗಿ ಹೇಳುವುದಾದರೆ, ಲೈಂಗಿಕ ದೌರ್ಜನ್ಯಗಳ ತಡೆಗಟ್ಟುವುದಕ್ಕೆ ಶಿಕ್ಷೆಗಳ ತೀಕ್ಷ್ಣತೆಗಳಿಂದ ಸಾಧ್ಯವಿಲ್ಲ. ಲೈಂಗಿಕ ಶಿಕ್ಷಣ ಒಂದು ಹಂತದಲ್ಲಿ ದೌರ್ಜನ್ಯಗಳನ್ನು ಕ್ಷೀಣಗೊಳಿಸುವ ಸಾಧ್ಯತೆಗಳಿವೆ. ಲೈಂಗಿಕತೆಯ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ತೊಡೆದುಹಾಕುವ, ಲೈಂಗಿಕ ಕಾರ್ಯಕರ್ತರನ್ನು ಆರೋಗ್ಯಕರವಾಗಿ ಬಳಸಿಕೊಳ್ಳುವ, ಲೈಂಗಿಕ ವಿಚಾರಗಳ ಬಗ್ಗೆ ಕೌಟುಂಬಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಕ್ತವಾಗಿ ಸಂವಾದಿಸುವ ವಾತಾವರಣಗಳನ್ನು ಸೃಷ್ಟಿಸುವಲ್ಲಿ ನಾವು ಸಫಲವೇ ಆದಲ್ಲಿ ಅತ್ಯಾಚಾರದ ಭೀಕರ ಮತ್ತು ಅಮಾನವೀಯ ಸಂಗತಿಗಳು ಘಟಿಸದಿರಬಹುದು. ಅತ್ಯಾಚಾರಿಗಳನ್ನು ಸಮಾಜವೇ ಪರೋಕ್ಷವಾಗಿ ಮತ್ತು ಅಜ್ಞಾನದಿಂದ ರೂಪಿಸಿ, ಅಥವಾ ನಮ್ಮ ಸಹಜೀವಿಗಳಲ್ಲೇ ರೂಪುಗೊಂಡಿರುವ ಅತ್ಯಾಚಾರಿಗಳನ್ನು ಗುರುತಿಸಲು, ಚಿಕಿತ್ಸೆ ನೀಡಲು ನಾವೇ ವಿಫಲವಾಗಿ ಮತ್ತೆ ಅವರನ್ನೇ ಶಿಕ್ಷಿಸುವುದು ನನ್ನ ದೃಷ್ಟಿಯಲ್ಲಿ ಹೊಣೆಗೇಡಿತನ. ಅತ್ಯಾಚಾರ ಮತ್ತು ಅದರಷ್ಟೇ ಭೀಕರವಾಗಿರುವ ಅನೇಕಾನೇಕ ಸಂಗತಿಗಳಿಗೆ ನಾವು ಶಿಕ್ಷೆಯಿಂದ ನಿರ್ನಾಮ ಬಯಸಿದ್ದಲ್ಲಿ ಅದು ಅಪ್ರಾಯೋಗಿಕ ಮತ್ತು ವಿಫಲ ಯತ್ನ. ಒಬ್ಬನ ನೈತಿಕ ಬದ್ಧತೆ, ಪ್ರಾಮಾಣಿಕ ಆತ್ಮಾವಲೋಕನ ಮತ್ತು ದಿಟವಾದ ಜೀವಪರ ಕಾಳಜಿಯು ಅಪರಾಧಗಳು ಆಗದಂತೆ ನೋಡಿಕೊಳ್ಳುತ್ತವೆ. ಅಪರಾಧಿಗಳನ್ನು ಶಿಕ್ಷಿಸುವ ಆತುರಕ್ಕಿಂತ ಅಪರಾಧಿಗಳನ್ನಾಗಿ ರೂಪುಗೊಳಿಸದಿರುವಂತಹ ಕೌಟುಂಬಿಕ ಮತ್ತು ಸಾರ್ವತ್ರಿಕ ಶಿಕ್ಷಣ ನಮಗೆ ಬೇಕಿದೆ.

Writer - ಗಿರಿಜಾಸುತ

contributor

Editor - ಗಿರಿಜಾಸುತ

contributor

Similar News