ಭೀತಿಯಿಂದಲೇ ಚಿಗುರೊಡೆದ ಧ್ವನಿ

Update: 2019-12-08 06:01 GMT

ಮುಝಮ್ಮಿಲ್ ತುಂಬೆ

ಪತ್ರಕರ್ತನೊಬ್ಬ ತನ್ನ ಪತ್ರಿಕಾ ಧರ್ಮವನ್ನು ಉಳಿಸಿಕೊಂಡು ವೃತ್ತಿ ನಡೆಸುವುದು ಸದ್ಯದ ಮಟ್ಟಿಗಂತೂ ಸವಾಲಿನ ಸಂಗತಿ. ಆಳುವವರ ಧೋರಣೆ ವ್ಯತಿರಿಕ್ತವಾದಾಗ ಬೌದ್ಧಿಕವಾಗಿ ಎಚ್ಚರಗೊಂಡವನು ತನ್ನ ದಿಟ್ಟ ನಿಲುವಿನಿಂದ ಹಿಂದಡಿಯಿಡದೆ ಪ್ರಶ್ನೆಗಳನ್ನು ಹಿಮ್ಮೆಟ್ಟಿಸುವ ಧೈರ್ಯ ತೋರುವುದು ಸಮಾಜದ ಬಗ್ಗೆ ಇರುವ ಸಂವೇದನೆಯನ್ನು ತಿಳಿಸುತ್ತದೆ. ಸದ್ಯ ಪತ್ರಿಕಾಧರ್ಮವನ್ನೇ ಉಸಿರಾಗಿಟ್ಟುಕೊಂಡು ಕಾರ್ಯಪ್ರವೃತ್ತರಾಗುವ ವ್ಯಕ್ತಿಗಳಲ್ಲೊಬ್ಬರು ರವೀಶ್ ಕುಮಾರ್. ಸಮಾಜದ ಅನಿಷ್ಟದ ವಿರುದ್ಧ, ಜಾತಿ ವೈಭವೀಕರಣದ ವಿರುದ್ಧ, ದ್ವೇಷದ ವಿಷ ಬೀಜ ಬಿತ್ತುವ ಪ್ರತಿಗಾಮಿಗಳ ವಿರುದ್ಧ, ಅವರಿಂದ ಪ್ರಭಾವಗೊಂಡು ಮಾನಸಿಕ ಸ್ಥಿರತೆ ಕಳ ಕೊಂಡ ಯುವಜನಾಂಗದ ವಿರುದ್ಧ ತನ್ನನ್ನು ನಿರಂತರ ತೊಡಗಿಸಿಕೊಂಡವರು. ಮೂಲತ ಬಿಹಾರಿಯಾಗಿದ್ದು, ದೇಶದ ಪ್ರತಿ ಆಗು ಹೋಗುಗಳಿಗೂ ಭೀತಿಯನ್ನು ಮೀರಿದ ಮಾತುಗಳಿಂದ ಸ್ಪಂದಿಸುವ ನಿರ್ಭೀತ ಪತ್ರಕರ್ತ.

 ರವೀಶ್ ಕುಮಾರ್ ಇತ್ತೀಚೆಗೆ ಹಿಂದಿ ಭಾಷೆಯಲ್ಲಿ ಬರೆದ ಕೃತಿಯು ‘‘ದ ಫ್ರೀ ವಾಯ್ಸ ಆನ್ ಡೆಮಾಕ್ರಸಿ, ಕಲ್ಚರ್ ಆ್ಯಂಡ್ ದ ನೇಷನ್’’ ಎಂಬ ಶೀರ್ಷಿಕೆಯಡಿ ಇಂಗ್ಲಿಷ್‌ಗೆ ಅನುವಾದಗೊಂಡಿತ್ತು. ಅವರು ಪತ್ರಿಕೋದ್ಯಮ ವೃತ್ತಿಯಲ್ಲಿ ಎದುರಿಸಿದ ಸವಾಲುಗಳಿಗೆ ಹಿಡಿದ ಕನ್ನಡಿ. ಶೋಷಿತರ ಪರ ಇರುವ ಮನದ ತುಡಿತ, ಸರ್ವಾಧಿಕಾರಿ ಧೋರಣೆ ತಳೆದಿರುವವರನ್ನು ಪ್ರಶ್ನಿಸುವ ಬಗೆ, ಯುವ ಮನಸ್ಸುಗಳಲ್ಲಿ ದ್ವೇಷ ಭಾವನೆ ಬಿತ್ತುವ ವಿಷದ ವಿರುದ್ಧ ಉಂಟಾದ ತಲ್ಲಣ, ತಳಮಳ, ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಬೇಕಾದ ಯುವ ಜನಾಂಗವನ್ನು, ದೇಶವನ್ನು ಛಿದ್ರ ಗೊಳಿಸುವಂತೆ ಪ್ರೇರೇಪಿಸುವವರ ವಿರುದ್ಧ ತಳೆದ ಉಗ್ರ ನಿಲುವು ರವೀಶ್‌ರ ವ್ಯಕ್ತಿತ್ವವನ್ನು ಸಾರುತ್ತದೆ.

ಯಾವುದೇ ಪಕ್ಷವಿರಲಿ, ಸರಕಾರವಿರಲಿ ಅಧಿಕಾರಸ್ಥರನ್ನು ನೇರ ಮಾತುಗಳಲ್ಲಿ ಪ್ರಶ್ನಿಸುತ್ತಾ, ದೇಶದ ಜನರು ಬಿದ್ದು ನರಳುವ ಜ್ವಲಂತ ಸಮಸ್ಯೆಗಳನ್ನು ಪ್ರಜೆಗಳ ಗಮನಕ್ಕೆ ತರುವಲ್ಲಿ ನಡೆಸುವ ಪರಿಶ್ರಮ ಖಂಡಿತಾ ಮೆಚ್ಚಲೇಬೇಕು. ಪತ್ರಿಕಾ ಧರ್ಮ ವನ್ನು ಮರೆತು ಆಳುವವರ ತೊಡೆಯೇರಿ ಕುಳಿತು, ಅವರ ಹಿತಾಸಕ್ತಿಗನುಗುಣವಾಗಿ ಸತ್ಯಕ್ಕೆ ಪರದೆಯೆಳೆಯುವ ಕೆಲವು ಮಾಧ್ಯಮ ಪ್ರತಿನಿಧಿಗಳ ನಡುವೆ ರವೀಶ್ ತಳೆದ ನಿಲುವು ವ್ಯತಿರಿಕ್ತವಾದದ್ದು.

 ಹರ್ಷಕುಮಾರ್ ಕುಗ್ವೆಯವರು ಅನುವಾದಗೊಳಿಸಿರುವ ‘‘ಮಾತಿಗೆ ಏನು ಕಡಿಮೆ’’ ಪುಸ್ತಕ ಮೂಲ ಹಿಂದಿ ಗ್ರಂಥದ ನೈಜತೆಯನ್ನು ಕಾಪಾಡುವಲ್ಲಿ ಸಫಲವಾಗಿದೆ. ಪುಸ್ತಕದಲ್ಲಿ ಮಾನವ ಹಕ್ಕು ಹೋರಾಟಗಾರರ, ಪ್ರಗತಿಪರರ ಅಭಿವ್ಯಕ್ತಿ ಸ್ವಾತಂತ್ರ ಅದುಮಿಟ್ಟ ರೀತಿ, ಮಾನವ ಹಕ್ಕು ಹೋರಾಟಗಾರರಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟಿ ಅವರ ದನಿಯನ್ನೇ ಹುಟ್ಟಡಗಿಸುವ ಷಡ್ಯಂತ್ರಕ್ಕೆ ರವೀಶ್ ಧೀರತೆಯಿಂದ ಮಾತೆತ್ತಿದ್ದಾರೆ. ಜನರ ಮೇಲೆ ಕ್ರೌರ್ಯ, ದಬ್ಬಾಳಿಕೆ ನಡೆಸುವ ಪೂರ್ವಗ್ರಹ ಪೀಡಿತ ಗುಂಪುಗಳು, ಅವರನ್ನು ಮುನ್ನೆಲೆಗೆ ತಂದು ಅವರಿಗೆ ಪರೋಕ್ಷ ಬೆಂಬಲ ನೀಡುವ ವರ್ಗವನ್ನು ರವೀಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮುನ್ನುಡಿಯಲ್ಲಿ ಪ್ರಕಾಶಕರು ಬರೆದಂತೆ ‘‘ಕಗ್ಗತ್ತಲ ಕಾಲದಲ್ಲಿ ಕಗ್ಗತ್ತಲೆಯ ಕುರಿತು ಕವಿತೆ ಬರೆಯಬೇಕು’’ ಎಂದ ಬ್ರೆಕ್ಟ್ ಮಾತಿನಂತೆ ರವೀಶ್ ದೇಶವನ್ನೆಲ್ಲಾ ಭಯ, ಆತಂಕ ಆವರಿಸುತ್ತಿದ್ದ ಹೊತ್ತಿನಲ್ಲಿ ಭಯದ ಕುರಿತೇ ಮಾತನಾಡುತ್ತಾರೆ. ಇತಿಹಾಸಗಳ ಬರವಣಿಗೆಗಳು ನಿರಂತರ ಬದಲಾವಣೆ, ಮಂಥನಗೊಳಗಾಗುತ್ತದೆ. ಡೋಂಗಿ ಸುದ್ದಿಗಳನ್ನು ಜನರೆಡೆ ಬಿತ್ತರಿಸಿ, ಇತಿಹಾಸದ ನಿಜವಾದ ತಿರುಚುವಿಕೆ ಈಗಿನ ಸಾಮಾಜಿಕ ಮಾಧ್ಯಮಗಳಿಂದ ನಡೆಯುತ್ತಿವೆ. ಇದಕ್ಕೆ ಪರಿಹಾರ ಕಾಣಬಯಸುವ ರವೀಶ್‌ರಲ್ಲಿ ಜನರನ್ನು ಬೌದ್ಧಿಕ ಎಚ್ಚರಿಸುವ ತುಡಿತವಿದೆ.

ಸುಳ್ಳುಸುದ್ದಿಯ ಇಂದಿನ ಯುಗದಲ್ಲಿ ನಾವು ಖಚಿತ ತಿಳುವಳಿಕೆ ಪಡೆದುಕೊಳ್ಳಬೇಕಿದೆ. ಏನೇ ಗೊಂದಲ ಉಂಟಾದರೂ ಅದನ್ನು ನುಂಗಿಕೊಂಡು ಸ್ಪಷ್ಟ ವಿಚಾರಗಳೊಂದಿಗೆ ಬದುಕು ನಡೆಸಬಲ್ಲವರಾಗಿ, ಡೋಂಗಿ ಸುದ್ದಿಯನ್ನು ಜೀರ್ಣಿಸಿಕೊಳ್ಳುವ ತಮ್ಮ ಸಾಮರ್ಥ್ಯ ಸುಧಾರಿಸಿ, ಬಹಳಷ್ಟು ಬೆಳವಣಿಗೆ ಕಾಣುವಂತೆ ವಿನಂತಿಸಿಕೊಳ್ಳುತ್ತಾರೆ. ಸುಳ್ಳುಗಳ ಜಾಲವನ್ನು ಹುಡುಕುತ್ತಾ ರವೀಶ್, ನಿಜಾಂಶಗಳ ದುರುದ್ದೇಶಪೂರಿತ ತಿರುಚುವಿಕೆ, ತಪ್ಪು ಕಥನಗಳ ಹೆಣೆಯುವಿಕೆ ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಾಲಾವಧಿಯಲ್ಲಿ ಬೃಹತ್ ಪ್ರಮಾಣದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸುಳ್ಳುಪೊಳ್ಳುಗಳ ಸಂತೆಗದ್ದಲದಲ್ಲಿ ಯಾರ ಮುಖ್ಯ ಪ್ರಶ್ನೆಗಳನ್ನು ಅಲಕ್ಷಿಸಿ ಬಿಡಲಾಗಿದೆಯೋ, ಯಾರ ಅವಿರತ ಹೋರಾಟವನ್ನು ದಮನಿಸಲಾಗಿದೆಯೋ ಅವರ ಉಳಿವಿನ ಪ್ರಶ್ನೆ ಇಲ್ಲಿದೆ. ಸುತ್ತಲೂ ಯಾವ ಪರಿ ಭೀತಿ ಮತ್ತು ಹಿಂಸೆಯ ಭಯಾನಕ ವಿನ್ಯಾಸಗಳನ್ನು ಹೆಣೆಯಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಕೃತಿ ಬೆಳಕು ಚೆಲ್ಲುತ್ತದೆ. ಬಲಿಷ್ಟ ನಾಗರಿಕತೆ, ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಯೊಂದರ ಸಮುದಾಯವಾಗಿ ನಾವೆಲ್ಲರೂ ಪ್ರಜ್ಞೆ, ಆತ್ಮವಿಶ್ವಾಸದಿಂದ ಸ್ಪಂದಿಸುವಂತೆ ಕರೆಕೊಡುತ್ತಾ, ಮಾತಿಗೆ ಮರುಳಾಗುವ ಯುವಕರ ಕಡೆ ನಿಗಾವಹಿಸುವಂತೆ ಕಾಳಜಿಪೂರ್ವ ಮನವಿ ಮಾಡಿದ್ದಾರೆ. ಇತಿಹಾಸವನ್ನು ದುರ್ಬಲಕೆ ಮಾಡಿ, ಗತ ಕಾಲದ ಮೂಲಪುರುಷರ ನಡುವಿನ ಕೆಲವು ಭಿನ್ನಾಭಿಪ್ರಾಯಗಳನ್ನು ವೈಭವೀಕರಿಸಿ, ವರ್ತಮಾನ ಸಮಾಜವನ್ನು ಛಿದ್ರಗೊಳಿಸುವ ಹುನ್ನಾರ ಅವ್ಯಾಹತವಾಗಿ ನಡೆಯುತ್ತಿದೆ. ಮಹಾನ್ ಪುರುಷರನ್ನು ಪ್ರತ್ಯೇಕವಾಗಿ ನಿರ್ದಿಷ್ಟ ಸಮುದಾಯಕ್ಕೆ ತಳುಕು ಹಾಕುವ ಹುನ್ನಾರದಿಂದ ಅವರ ಘನತೆಗೆ ದ್ರೋಹ ಬಗೆಯುವ ರೀತಿಯನ್ನು ವಿಶ್ಲೇಷಿಸಿದ್ದಾರೆ. ನ್ಯಾಯ ಅನ್ಯಾಯಗಳೆರಡೂ ಹೇಗೆ ವರ್ತಮಾನದ ಭಾಗಗಳಾಗಿವೆಯೋ, ಹಿಂದೆಯೂ ಸ್ಥಿತಿ ಹೀಗೆಯೇ ಇತ್ತು. ಆದರೆ ಅದನ್ನು ನಿಭಾಯಿಸುವುದನ್ನು ಕಲಿಯಬೇಕಾಗುತ್ತದೆ. ಎದುರಿಸುವ ಆತ್ಮವಿಶ್ವಾಸ ಹೊಂದಬೇಕು ಎಂಬುದು ರವೀಶ್‌ರ ಧೋರಣೆ. ಇಲ್ಲಿ ಒಂದಂತೂ ಸ್ಪಷ್ಟ. ನ್ಯಾಯಕ್ಕಾಗಿ ಹೋರಾಟ ನಡೆಸುವಾಗ ಆಗುವ ಅನ್ಯಾಯ ಎಂದಿಗೂ ನಡೆಯುವುದಿಲ್ಲ. ಇದರಿಂದಾಗಿಯೇ ಹಲವು ಪ್ರಕರಣಗಳು ಮುಕ್ತಾಯ ಕಾಣದ ಸ್ಥಿತಿಯಲ್ಲಿವೆ. ಶೋಷಿತ ಕುಟುಂಬವೇ ತಮಗಾದ ಅನ್ಯಾಯಕ್ಕೆ ಮಾತೆತ್ತಲು ಸಹ ಹಿಂಜರಿಯುವುದನ್ನು ಲೇಖಕರು ವಿಷಾದಿಸುತ್ತಾರೆ. ಧ್ವನಿ ಎತ್ತುವವನನ್ನು ತಡೆಯುವವರ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಜಾಪ್ರಭುತ್ವದ ಅಡಿಪಾಯ ಬಿರುಕು ಬಿಡುವ ಭೀತಿಯಲ್ಲಿದೆ. ಪ್ರಜಾಪ್ರಭುತ್ವ ವಿನಾಶದತ್ತ ಹೆಜ್ಜೆಹಾಕುವುದನ್ನು ಹೃದಯಕ್ಕೆ ನಾಟುವಂತೆ ಬರೆದ ರವೀಶ್ ನಿಷ್ಪಕ್ಷಪಾತದಿಂದ, ಪೂರ್ವಗ್ರಹವಿಲ್ಲದೆ ಪ್ರತಿನಿಧಿಗಳನ್ನು ಪ್ರಶ್ನಿಸುವ ಪ್ರಜೆಗಳ ಕರ್ತವ್ಯವನ್ನು ತಿಳಿಸುತ್ತಾರೆ. ಪ್ರಜಾತಾಂತ್ರಿಕ ಪ್ರಜ್ಞೆಯನ್ನು ಮರುಕಟ್ಟುವ ಮತ್ತು ಜನತೆಯಾಗಿ ನಮ್ಮ ಹಕ್ಕನ್ನು ಮರಳಿ ಪಡೆಯುವ ಸಂಕಲ್ಪ ಮಾಡಿಕೊಳ್ಳುವಂತೆ ಬರವಣಿಗೆಯ ಕೊನೆವರೆಗೂ ಹೇಳುತ್ತಾರೆ. ಶೋಷಿತರ ಪರ ಧ್ವನಿಯಾಗುವ ರವೀಶ್‌ರನ್ನು ತಡೆಯಲು ಹಲವರು ಬಂದರೂ, ರವೀಶ್ ಅಲುಕದೆ, ಅಂಜದೆ ಸಾಮಾಜಿಕ ಜವಾಬ್ದಾರಿಯ ಒಬ್ಬ ಧೀಮಂತ ಪತ್ರಕರ್ತರಾಗಿ ಕಾಣುತ್ತಾರೆ. ಯಾವ ಬೆದರಿಕೆಗೂ, ಭೀತಿಗೂ ಕುಗ್ಗದೆ, ತಮ್ಮ ದಿಟ್ಟ ಹೆಜ್ಜೆ ಹಿಂದೆಗೆಯದೆ, ನೈಜ ಪತ್ರಕರ್ತರಾಗಿ ರೂಪುಗೊಳ್ಳುತ್ತಾರೆ.ಜ್ಯೋತಿಷ್ಯವು ನಂಬಿಕೆಗೆ ಅನುಗುಣವಾಗಿದ್ದರೂ, ಸಮಾಜದ ಜ್ವಲಂತ ಸಮಸ್ಯೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಸದಾ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಬಗೆಹರಿಯದ ಸಮಸ್ಯೆಗಳಿಂದ ಜನರನ್ನು ಬೇರೆಡೆ ಸೆಳೆಯುವ ಏಕೈಕ ಉಪಾಯವಾಗಿ ಜ್ಯೋತಿಷ್ಯ ಕೆಲಸ ಮಾಡುತ್ತದೆ. ನಕಲಿ ಬಾಬಾಗಳ ಹುಟ್ಟು ಮತ್ತು ಬೆಳವಣಿಗೆಗೆ ವೇದಿಕೆ ಹಚ್ಚುವ ಸಮೂಹ ಮಾಧ್ಯಮಗಳು ಸಮಾಜದ ಧ್ವನಿಯಾಗಬೇಕಾದ ತಮ್ಮ ಕರ್ತವ್ಯ ನಿಷ್ಠೆಯನ್ನು ಗಾಳಿಗೆ ತೂರಿದೆ. ಮೇಲ್ನೋಟಕ್ಕೆ, ಈ ಬಾಬಾಗಳು ಸುದ್ದಿವಾಹಿನಿಗಳಲ್ಲಿ ಪ್ರತ್ಯಕ್ಷಗೊಂಡು, ಗತ ಕಾಲದ ಮೂಢನಂಬಿಕೆಗಳನ್ನು ಹೆಕ್ಕಿ ತೆಗೆದು ಆಧುನಿಕ ಸಂದರ್ಭದಲ್ಲಿ ಅದನ್ನು ನವೀನಗೊಳಿಸುತ್ತಿದ್ದಾರಷ್ಟೆ. ಒಬ್ಬೊಬ್ಬರು ಒಂದೊಂದು ರೀತಿಯ ಜಾಹೀರಾತುಗಳನ್ನು ನೀಡಿ ಜನರ ಕಣ್ಣಿಗೆ ಮಣ್ಣೆರಚುವ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ಮಾಧ್ಯಮದ ಬಗ್ಗೆ ರವೀಶ್ ಆಕ್ಷೇಪವೆತ್ತಿದ್ದಾರೆ. ಒಟ್ಟಿನಲ್ಲಿ, ಅನ್ಯಾಯದೊಂದಿಗೆ ನ್ಯಾಯ, ದ್ವೇಷದೊಂದಿಗೆ ಸ್ನೇಹ ಬಾಂಧವ್ಯಗಳು ಕಮರಿಹೋಗುವ ಈ ಪ್ರಕ್ಷುಬ್ಧ ಸ್ಥಿತಿಯಲ್ಲಿ ಸರ್ವತೋಮುಖ ಏಳಿಗೆ ಬಯಸುವವರಿಗೆ ರವೀಶ್ ಕುಮಾರ್‌ನಂತಹ ಪತ್ರಕರ್ತರು ನಿಜಕ್ಕೂ ದೇಶದ ಹೆಮ್ಮೆ.

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಅಗತ್ಯವಾಗಿರಬೇಕಾದ ಸಂವಾದ ವಾಗ್ವಾದದ ಸಂಸ್ಕೃತಿ ಅಳಿವಿನಂಚಿನಲ್ಲಿದೆ. ತನ್ನ ನಿರ್ಬಿಡೆಯ ಮಾತುಗಳಿಗೆ ಹೆದರಿ ಕಿವಿಮಾತು ಹೇಳುವ ಜನರೊಂದಿಗೆ ಭಾರತದ ಸಂಸ್ಕೃತಿಯ ಉಳಿಯುವಿಕೆಗೆ ತನ್ನ ದಿಟ್ಟ ನಿರ್ಧಾರವನ್ನು ರವೀಶ್ ಹೇಳುತ್ತಾರೆ. ಪ್ರಜಾಪ್ರಭುತ್ವದ ಕಲ್ಪನೆಯಲ್ಲಿ ಪ್ರಜೆಗಳಾಗಿ ನಮ್ಮ ವ್ಯಕ್ತಿತ್ವದ ಪ್ರಜ್ಞೆ ಅತ್ಯಂತ ಮೂಲಭೂತವಾದದ್ದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾಗಿ ನಮಗಿರುವ ಹಕ್ಕುಗಳ ತಿಳುವಳಿಕೆಯು ಅಷ್ಟೇ ಮೂಲಭೂತವಾದದ್ದು. ಆದರೆ ಪ್ರಜೆಗಳ ಪ್ರಜ್ಞೆಯು ಭಯವಾಗಿ ಬದಲಾದರೆ ಅವರು ಅಡಿಯಾಳಾಗಿ ಬಿಡುತ್ತಾರೆ. ಪ್ರಜಾಪ್ರಭುತ್ವವೊಂದರಲ್ಲಿ ಪ್ರಜೆಗಳಿಗೆ ಪ್ರಾಶಸ್ತ್ಯ. ವ್ಯವಸ್ಥೆ ಏನಿದ್ದರೂ ಪ್ರಜೆಗಳ ಸೇವೆಗಾಗಿ ಇರುವಂತಹದ್ದು ಎಂದು ಪ್ರಜೆಗಳ ಜವಾಬ್ದಾರಿಯನ್ನು ಒತ್ತಿ ಹೇಳಿದ್ದಾರೆ. ಕೊನೆಯದಾಗಿ, ಭಾರತದ ಸ್ವಾತಂತ್ರೋತ್ಸವದ ಆಚರಣೆಯ ಬಗ್ಗೆ ನಿರುತ್ಸಾಹ ತೋರುವ ಜನರೊಂದಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ರವೀಶ್, ದ್ವೇಷದ ವಿರುದ್ಧ ಧ್ವನಿ ಎತ್ತಿ ಸುಂದರ ಭಾರತದ ಮೂಲಮಂತ್ರವಾದ ಸ್ನೇಹಭಾವವನ್ನು ಬಿತ್ತುವ ರೂವಾರಿಗಳಾಗಿ ನೀವು ಬದಲಾಗುವುದಾದರೆ ಖಂಡಿತಾ ಸ್ವಾತಂತ್ರ ಆಚರಣೆಯ ಹಕ್ಕಿದೆ. ಸ್ವಾತಂತ್ರ ಹೋರಾಟಗಾರರು ಅಮೂಲ್ಯ ಜೀವವನ್ನು ಭಾರತಾಂಬೆಯ ಕಾಲಡಿಗೆ ತ್ಯಾಗ ಮಾಡಿರುವುದು ನಿಮಗಾಗಿಯೇ ಎಂದು ಜನರೊಂದಿಗೆ ಭರವಸೆಯ ಕಿವಿಮಾತು ಹೇಳುತ್ತಾರೆ.

ಒಟ್ಟಿನಲ್ಲಿ ಪ್ರಸ್ತುತ ಕೃತಿಯು, ಸಮಾಜದ ನೈಜ ವೃತ್ತಾಂತಗಳನ್ನು ಬಯಲಿಗೆಳೆಯುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಮಿತ್ರರ, ಪ್ರಜ್ಞಾವಂತ ಪ್ರಜೆಗಳ ಕರ್ತವ್ಯವನ್ನು ಹೊರಹಾಕುತ್ತದೆ. ನ್ಯಾಯವನ್ನು ಎತ್ತಿಹಿಡಿಯುವಂತೆ ಜನರನ್ನು ಒತ್ತಾಯಿಸುತ್ತದೆ. ‘‘ಅಹರ್ನಿಶಿ ಪ್ರಕಾಶನ’’ದಿಂದ ಅನುವಾದಗೊಂದ ಈ ಕೃತಿ ಖಂಡಿತಾ ಪ್ರಸಕ್ತವಾದದ್ದು, ಅಗತ್ಯವೂ ಕೂಡಾ.

Writer - ಮುಝಮ್ಮಿಲ್ ತುಂಬೆ

contributor

Editor - ಮುಝಮ್ಮಿಲ್ ತುಂಬೆ

contributor

Similar News