ರಿಝ್ವಾನಾಳಿಗೆ ಗಾಯನವೇ ಜೀವನ

Update: 2019-12-08 07:31 GMT

ಕಲೆ, ಸಾಹಿತ್ಯ, ಸಂಗೀತದ ನೆಲೆಬೀಡು ಆಗಿರುವ ಕರ್ನಾಟಕ, ಗಾನ ಕೋಗಿಲೆಗಳ ತವರೂರು ಕೂಡ ಹೌದು. ಇಲ್ಲಿನ ಕೆಲವು ಕನ್ನಡ ಗಾಯಕರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ನಮ್ಮ ನಾಡಿನಲ್ಲಿ ಪ್ರತಿಭೆಗಳಿಗೇನು ಕಡಿಮೆ ಇಲ್ಲ. ಸಂಗೀತ ಸರಸ್ವತಿ ಇಂದು ಪ್ರತಿಭಾನ್ವಿತ ಬಡ ಕಲಾವಿದರ ಮನೆ ಮನೆಗಳಲ್ಲಿ ಪ್ರವೇಶ ಮಾಡಿದ್ದಾಳೆ. ಆದ್ದರಿಂದಲೇ ಇತ್ತೀಚೆಗೆ ಗ್ರಾಮೀಣ ಭಾಗದ ಅನೇಕ ಕಲಾವಿದರು, ಗಾಯಕರು ಖಾಸಗಿ ವಾಹಿನಿಗಳು ನಡೆಸಿಕೊಡುವ ಹಾಸ್ಯ ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ಮಿಂಚುತಿದ್ದಾರೆ. ಅಂತವರ ಸಾಲಿಗೆ ಸೇರುವ ಮತ್ತೊಂದು ಗ್ರಾಮೀಣ ಪ್ರತಿಭೆ ರಿಝ್ವಾನಾ ಗೋಗಾಡಿ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಕಡು ಬಡತನ ಕುಟುಂಬದಲ್ಲಿ ಜನಿಸಿದ ರಿಝ್ವಾನಾ ಇಂದು ತಮ್ಮ ಗಾಯನದ ಮೂಲಕ ಸಂಗೀತ ಕ್ಷೇತ್ರದಲ್ಲಿ ನಾಡಿನಾದ್ಯಂತ ಹೆಸರು ಮಾಡಲು ಹೊರಟಿದ್ದಾಳೆ. ಇವರ ತಂದೆ ಭಾಷಾಸಾಬ ತಾಯಿ ಮರಿಯಮ್ ಏಳು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ಏಳು ಮಕ್ಕಳಿಗೂ ಶಿಕ್ಷಣ ನೀಡುವುದು ತುಂಬಾ ಭಾರವೆನಿಸಿತು. ತಂದೆ ತಾಯಿಗಳಿಬ್ಬರು ಮಕ್ಕಳ ಭವಿಷ್ಯ ರೂಪಿಸಲು ಕಷ್ಟ ಪಟ್ಟು ದುಡಿದರು. ಆದಾಗ್ಯೂ ಕೆಲವು ಮಕ್ಕಳಿಗೆ ಓದಿಸಲು ಆಗದೆ ಮದುವೆ ಮಾಡಿಸಿದರು. ಅದರಲ್ಲಿ ರಿಝ್ವಾನಾ ಕೂಡಾ ಒಬ್ಬಳು. ಚಿಕ್ಕ ವಯಸ್ಸಿನಿಂದಲೂ ಬಹಳ ಜಾಣೆ ಇದ್ದ ರಿಝ್ವಿನಾ ಸಂಗೀತದ ಮೇಲೆ ತುಂಬಾ ಆಸಕ್ತಿ ಒಲವು ಹೊಂದಿದ್ದಳು. ಇಂಪಾಗಿ ತನ್ನ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡುತ್ತಾಳೆ. ಸಂಗೀತ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಬೇಕು ಎಂಬ ಆಸೆ ರಿಝ್ವಾನಾಳದ್ದು, ಅವಳ ಕನಸು ನನಸು ಮಾಡಬೇಕು ಎಂಬ ಮಹದಾಸೆ ಪಾಲಕರದ್ದು ಆದರೆ ಬಡತನವೆಂಬ ಭೂತ ಹೇಗಲೇರಿ ಕುಳಿತಿತ್ತು. ಆದ್ದರಿಂದ ಪಾಲಕರು ರಿಝ್ವಾನಾಳಿಗೆ ಬೇಗ ಮದುವೆ ಮಾಡಿದರು. ಇದರಿಂದಾಗಿ ಅವಳ ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಕನಸು ಕನಸಾಗಿಯೇ ಉಳಿಯಿತು. ಅಂದುಕೊಂಡಿದ್ದನ್ನು ಸಾಧಿಸಲಾಗಲಿಲ್ಲ ಎಂಬ ಕೊರಗು ರಿಝ್ವಾನಾಗೆ ನಿತ್ಯ ಕಾಡುತ್ತಿತ್ತು. ಪತಿ ಕೆಲಸ ಅರಸಿ ಸೌದಿ ಅರೇಬಿಯಕ್ಕೆ ತೆರಳಿ ವರ್ಷಕ್ಕೊಮ್ಮೆ ಬಂದು ಎರಡೂ ಮೂರು ತಿಂಗಳು ಇದ್ದು ಮತ್ತೆ ಸೌದಿಗೆ ಹೋಗುತ್ತಾರೆೆ. ಮದುವೆಯಾದ ಐದು ವರ್ಷಗಳಲ್ಲಿ ರಿಝ್ವಾನಾ ಮೂರು ಹೆಣ್ಣು ಮಕ್ಕಳಿಗೆ ತಾಯಿಯಾದಳು. ಆದರೂ ಅವಳಲ್ಲಿನ ಹಾಡಬೇಕೆಂಬ ಛಲ, ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಧ್ಯೇಯ ಇನ್ನೂ ಜೀವಂತವಾಯೇ ಇತ್ತು. ಮೂರು ಮಕ್ಕಳ ಲಾಲನೆ, ಪಾಲನೆ, ಕುಟುಂಬದ ಹಿರಿಯ ಸದಸ್ಯರ ಆರೈಕೆ ಹೀಗೆ ಬಿಡುವಿಲ್ಲದ ಮನೆಗೆಲಸದ ನಡುವೆಯೂ ಸಿಕ್ಕ ಸ್ವಲ ಸಮಯವನ್ನು ವಿಶ್ರಾಂತಿಗೆ ಬಳಸಿಕೊಳ್ಳದೆ ಹಾಡುಗಳನ್ನು ಹಾಡುತ್ತಾ, ಮನೆಯಲ್ಲಿಯೇ ಸತತ ಅಭ್ಯಾಸ ಮಾಡುತ್ತಿದ್ದಳು ರಿಝ್ವಿನಾ. ಇದನ್ನು ಗಮನಿಸಿದ ರಿಝ್ವಿನಾಳ ಪ್ರಾಥಮಿಕ ಶಾಲಾ ಗುರುಗಳಾದ ಶಿವಶರಣರ ತಿಳ್ಳೊಳ್ಳಿ ಸಂಗೀತ ಶಾಲೆ ಸೇರಲು ಪ್ರೇರೇಪಿಸಿದರು. ಆದರೆ ಗಂಡನ ಮನೆಯಲ್ಲಿ ಅವಕಾಶ ಇಲ್ಲವೆಂದಾಗ ದೂರದ ಸೌದಿಯಲ್ಲಿ ಇರುವ ರಿಝ್ವಿನಾಳ ಪತಿಗೆ ದೂರವಾಣಿ ಮೂಲಕ ಮಾತನಾಡಿ ಗಾಯನದಲ್ಲಿ ರಿಝ್ವಿನಾಳಿಗೆ ಇದ್ದ ಅಗಾಧ ಶಕ್ತಿ ಮತ್ತು ಪ್ರತಿಭೆಯ ಬಗ್ಗೆ ಸವಿಸ್ತಾರವಾದ ತಿಳಿಸಿದರು. ಆಗ ಪತಿ ದಸ್ತಗಿರ ಗೋಗಾಡಿ ರಿಝ್ವಾನಾಗೆ ಸಂಗೀತ ಶಾಲೆಗೆ ಸೇರಿಸಲು ಒಪ್ಪಿದರು. ಇದರಿಂದ ಹರ್ಷಿತಗೊಂಡ ರಿಝ್ವಿನಾ ಶ್ರದ್ಧೆ, ಭಕ್ತಿಯಿಂದ ಸಂಗೀತ ಕಲಿಯಲು ತನ್ನ ಗ್ರಾಮದಿಂದ 30 ಕಿ.ಮೀ. ದೂರದಲ್ಲಿರುವ ಸಿಂದಗಿ ಪಟ್ಟಣಕ್ಕೆ ದಿನಂಪ್ರತಿ ಬರುತ್ತಾಳೆ. ಪಟ್ಟಣದಲ್ಲಿನ ಪ್ರತಿಷ್ಠಿತ ಸಂಗೀತ ಶಾಲೆ ಎನಿಸಿಕೊಂಡಿರುವ ರಾಗ ರಂಜಿನಿ ಸಂಗೀತ ಅಕಾಡಮಿಯಲ್ಲಿ ಪ್ರಖ್ಯಾತ ಗಾಯಕರು ಮತ್ತು ಸಂಸ್ಥೆಯ ಮುಖ್ಯಸ್ಥರು ಆಗಿರುವ ಡಾ.ಪ್ರಕಾಶ ಗುರುಗಳ ಮಾರ್ಗದರ್ಶನದಲ್ಲಿ ಸಂಗೀತ ಅಭ್ಯಾಸ ಮಾಡುತ್ತಿರುವ ರಿಝ್ವಿನಾ ಗಾಯನದಲ್ಲಿ ಸಾಕಷ್ಟು ಬದಲಾವಣೆ ಮತ್ತು ಪ್ರಗತಿ ಸಾಧಿಸಿ ಸಂಗೀತದಲ್ಲಿ ಪಕ್ವತೆಗೊಂಡಿದ್ದಾಳೆ. ಹೀಗೆ ದಿನವೂ ಮನೆ ಕೆಲಸ ಮಕ್ಕಳ ರಕ್ಷಣೆ ಕುಟುಂಬ ಜವಾಬ್ದಾರಿ ಜೊತೆಗೆ 30 ಕಿ.ಮೀ. ದೂರದಲ್ಲಿರುವ ಸಂಗೀತ ಶಾಲೆಗೆ ನಿತ್ಯ ಬಸ್ಸಿನಲ್ಲಿ ಓಡಾಡುತ್ತಿರುವ 25 ವರ್ಷದ ರಿಝ್ವಿನಾ ಮುಂದೆ ಕನ್ನಡದ ಖಾಸಗಿ ವಾಹಿನಿಗಳು ನಡೆಸಿಕೊಡುವ ಸರಿಗಮಪ ಮತ್ತು ಕನ್ನಡ ಕೋಗಿಲೆ ಅಡಿಷನ್‌ಗೆ ಬರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾಳೆ. ಸೌದಿಯಲ್ಲಿಯೇ ಇದ್ದುಕೊಂಡು ತನ್ನ ಪತ್ನಿಗೆ ಸಂಗೀತ ಕಲಿಯಲು ಸಕಲ ರೀತಿಯ ಪ್ರೋತ್ಸಾಹ ನೀಡುತ್ತಿರುವ ಪತಿ ದಸ್ತಗಿರ ಮತ್ತು ಮೂರು ಮಕ್ಕಳ ತಾಯಿಯಾದರೂ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಲು ಹಗಲು ರಾತ್ರಿ ನಿರಂತರವಾಗಿ ಅಭ್ಯಾಸ, ಕಠಿಣ ಪರಿಶ್ರಮದಿಂದ ಮುಂದೆ ಸಾಗುತ್ತಿರುವ ಬಡ ಯುವ ಪ್ರತಿಭೆ ರಿಝ್ವಿನಾಳ ಸಾಧನೆ ನಿಜಕ್ಕೂ ಶ್ಲಾಘನೀಯ ಮತ್ತು ಹೆಮ್ಮೆ ಪಡುವಂತ ವಿಷಯ. ಎಲೆ ಮರೆ ಕಾಯಿಯಂತೆ ಸದ್ದಿಲ್ಲದೆ ಸಂಗೀತದಲ್ಲಿ ಸಾಧನೆ ಮಾಡಲು ಹೊರಟಿರುವ ಈ ಬಡ ಯುವ ಪ್ರತಿಭಾನ್ವಿತ ಗಾಯಕಿಗೆ ಸಮೂಹ ಮಾಧ್ಯಮಗಳು ಆದಷ್ಟು ಬೇಗ ಗುರುತಿಸಿ ನಾಡಿಗೆ ಪರಿಚಯಿಸುವ ಕಾರ್ಯ ಮಾಡಬೇಕಿದೆ. ರಿಝ್ವಿನಾ ತನ್ನ ಹಾಡಿನ ಮೂಲಕ ನಾಡಿನಾದ್ಯಂತ ಮಿಂಚುವಂತಾಗಲಿ. ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ ಜಿಲ್ಲೆ ಮತ್ತು ತನ್ನ ಊರಿನ ಕೀರ್ತಿ ರಾಜ್ಯಕ್ಕೆ ಪರಿಚಯಿಸಲಿ ಎಂಬುದೇ ಈ ಭಾಗದ ಜನರ ಸದಾಶಯವಾಗಿದೆ.

Writer - ಮೌಲಾಲಿ ಕೆ.ಆಲಗೂರ ಬೋರಗಿ

contributor

Editor - ಮೌಲಾಲಿ ಕೆ.ಆಲಗೂರ ಬೋರಗಿ

contributor

Similar News