ವಕ್ಫ್ ಮೇಲೆ ಮಂತ್ರಿಗಳ ದಾದಾಗಿರಿ ಹೆಚ್ಚಾಗಿದೆ: ಮಾಜಿ ಸಚಿವ ರಹ್ಮಾನ್ ಖಾನ್

Update: 2019-12-08 16:17 GMT

ಬೆಂಗಳೂರು, ಡಿ.8: ವಕ್ಫ್ ಆಸ್ತಿಗಳ ಸಂರಕ್ಷಣೆ ವಿಷಯದಲ್ಲಿ ಸರಕಾರಗಳ ನಿರ್ಲಕ್ಷವು ಇದ್ದು, ಜೊತೆಗೆ, ವಕ್ಫ್ ಮೇಲೆ ನಿಯಂತ್ರಣ ಸಾಧಿಸಲು ಮಂತ್ರಿಗಳ ದಾದಾಗಿರಿಯೂ ಹೆಚ್ಚಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ಹೇಳಿದರು.

ರವಿವಾರ ಇಲ್ಲಿನ ವಸಂತನಗರದ ದೇವರಾಜ ಅರಸು ಭವನದಲ್ಲಿ ಹೊಸದಿಲ್ಲಿಯ ಇನ್ಸ್ಟಿಟ್ಯೂಟ್ ಆಫ್ ಆಬ್ಜೆಕ್ಟಿವ್ ಸ್ಟಡೀಸ್ ಹಾಗೂ ಇಂಡಿಯನ್ ಔಕಾಫ್ ಫೌಂಡೇಷನ್ ಜಂಟಿಯಾಗಿ ಆಯೋಜಿಸಿದ್ದ, ಭಾರತದಲ್ಲಿನ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ವಕ್ಫ್ ವಿಚಾರದಲ್ಲಿ ಇಲಾಖೆಗಳು, ಸರಕಾರಗಳು ನಿಯಂತ್ರಣ ಸಾಧಿಸುತ್ತಿವೆ. ಈ ಕಾರಣದಿಂದಾಗಿ ವಕ್ಫ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ, ವಕ್ಫ್ ಆಸ್ತಿ ಅಪಾರವಾಗಿದ್ದರೂ, ಅಭಿವೃದ್ಧಿ ಕಂಡಿಲ್ಲ. ಜೊತೆಗೆ, ಕೆಲ ಮಂತ್ರಿಗಳು ಇದರ ಮೇಲೆ ಒತ್ತಡ ಹೇರುತ್ತಾರೆ. ಇದೊಂದು ದಾದಾಗಿರಿ ಆಗಿದ್ದು, ಇದರಿಂದ ವಕ್ಫ್ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಪೆಟ್ಟು ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಕ್ಫ್ ಆಸ್ತಿ ರಕ್ಷಣೆ ಮತ್ತು ಮುಸ್ಲಿಮ್ ಸಮುದಾಯದ ಏಳಿಗೆಯ ಜವಾಬ್ದಾರಿ ಮುತವಲ್ಲಿಗಳ ಮೇಲಿದೆ. ಆದರೆ, ಕೆಲ ಮುತವಲ್ಲಿಗಳು ಅಧಿಕಾರ, ಟೀಕೆ, ಜಗಳದಲ್ಲಿಯೇ ಕಾಲ ಕಳೆಯುತ್ತಾರೆ. ಇದರಿಂದ, ವಕ್ಫ್ ಕಾರ್ಯಕ್ರಮಗಳಿಗೆ ತಡೆ ಆಗುತ್ತಿದೆ ಎಂದ ಅವರು, ಆಸ್ತಿ ಸಂರಕ್ಷಣೆ ಕುರಿತು ಕಠಿಣ ಕಾನೂನುಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಡಾ.ಝವಾದ್ ರಹೀಮ್ ಮಾತನಾಡಿ, ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ, ಚರ್ಚೆ ನಡೆದಿದ್ದು, ಶೀಘ್ರದಲ್ಲಿಯೇ ಸರಕಾರಕ್ಕೆ ತಮ್ಮ ಬೇಡಿಕೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಇಂಡಿಯನ್ ಔಕಾಫ್ ಫೌಂಡೇಷನ್ ಅನ್ನು ಪ್ರಾದೇಶಿಕ ಮಟ್ಟದಲ್ಲಿಯೂ ರಚಿಸಲು ಉದ್ದೇಶಿಸಿದ್ದು, ಅದರ ಶಾಖೆಗಳನ್ನು ತೆರೆಯಲಾಗುವುದು. ವಕ್ಫ್ ಆಸ್ತಿಗಳ ಅಗತ್ಯತೆ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೂ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಐಒಎಸ್ ಅಧ್ಯಕ್ಷ ಡಾ.ಎಂ.ಮನ್ಸೂರ್ ಅಲಾಂ, ಇಂಡಿಯನ್ ಔಕಾಫ್ ಫೌಂಡೇಷನ್ ನಿರ್ದೇಶಕ ನಿಸಾರ್ ಅಹ್ಮದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News