ಸಾಹಿತ್ಯ ಸಮ್ಮೆಳನದಲ್ಲಿ ಕೈಗೊಳ್ಳುವ ನಿರ್ಣಯಗಳು ಅನುಷ್ಠಾನಕ್ಕೆ ಬರಲಿ: ಚಿಂತಕ ನಂಜಪ್ಪ ಕಾಳೇಗೌಡ

Update: 2019-12-08 17:31 GMT

ಬೆಂಗಳೂರು, ಡಿ.8: ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಒಂದು ವರ್ಷದೊಳಗೆ ಅನುಷ್ಠಾನಕ್ಕೆ ತರುವ ಪ್ರಯತ್ನ ಆಗಬೇಕು ಎಂದು ಸಂಸ್ಕೃತಿ ಚಿಂತಕ ನಂಜಪ್ಪ ಕಾಳೇಗೌಡ ಅಭಿಪ್ರಾಯಪಟ್ಟರು.

ರವಿವಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ‘ಕನ್ನಡ ನುಡಿ ಸಮ್ಮೇಳನ’ದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಚರ್ಚೆ, ಸಂವಾದಕ್ಕೆ ಅವಕಾಶ ಇರಬೇಕೇ ವಿನಃ ವಾಗ್ವಾದ, ವ್ಯರ್ಥ ಆರೋಪಕ್ಕೆ ವೇದಿಕೆ ಆಗಬಾರದು ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೆಳನದ ಮೂಲ ಉದ್ದೇಶ ನಾಡು-ನುಡಿ ರಕ್ಷಣೆ. ಇದರ ಜತೆಗೆ ಸಮ್ಮೆಳನದಲ್ಲಿ ಗಡಿ, ಜಲ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಇತ್ತೀಚೆಗೆ ಸಮ್ಮೆಳನದ ನಿರ್ಣಯಗಳಿಗೆ ಸರಕಾರದ ಮಟ್ಟದಲ್ಲಿ ಪರಿಹಾರ ದೊರೆಯುತ್ತಿಲ್ಲ. ಕನ್ನಡ ಸಾಹಿತ್ಯ ಸಮ್ಮೆಳನಗಳಲ್ಲಿ ನಡೆಯುವ ಚರ್ಚೆ ಹಾಗೂ ನಿರ್ಣಯಗಳು ಕೇವಲ ಪುಸ್ತಕದಲ್ಲಿ ಮಾತ್ರ ಉಳಿಯುತ್ತಿವೆ. ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅವು ಅನುಷ್ಠಾನಕ್ಕೆ ಬರದೇ ಇರುವುದು ವಿಷಾದನೀಯ ಎಂದರು.

ಸಾಹಿತಿ ಪ್ರೊ.ಎಸ್.ಜಿ ಸಿದ್ದರಾಮಯ್ಯ ಮಾತನಾಡಿ, ಆಡಳಿತ, ಶಿಕ್ಷಣ, ಉದ್ಯೊಗ ಮುಂತಾದ ಕ್ಷೇತ್ರಗಳಲ್ಲಿ ಕನ್ನಡಕ್ಕೆ ಆದ್ಯತೆಯಿರಬೇಕು ಎಂದರೆ ಅದು ಒಕ್ಕೂಟ ರಾಜ್ಯ ವ್ಯವಸ್ಥೆಗೆ ಕೊಡುವ ಮನ್ನಣೆಯೇ ಹೊರತು ಅನ್ಯಭಾಷೆಗಳ ವಿರೋಧವಲ್ಲ. ಮಾತೃಭಾಷೆ ಮತ್ತು ರಾಜ್ಯ ಭಾಷೆಗಳನ್ನು ಉಳಿಸಿ ಬೆಳೆಸದಿದ್ದರೆ ಅಷ್ಟರ ಮಟ್ಟಿಗೆ ಸಾಂಸ್ಕೃತಿಕ ವಂಚನೆ ಮಾಡಿದಂತಾಗುತ್ತದೆ. ಬಹು ಸಂಸ್ಕೃತಿಗೆ ವಿರುದ್ಧವಾಗಿ ನಡೆದಂತಾಗುತ್ತದೆ. ಯಾಕೆಂದರೆ ಭಾಷೆ, ಬದುಕು ಮತ್ತು ಸಂಸ್ಕೃತಿಗಳ ನಡುವೆ ಬಿಡಲಾಗದ ಬೆಸುಗೆಯಿರುತ್ತದೆ. ಇಷ್ಟಾಗಿಯೂ ನಮ್ಮ ದೇಶದಲ್ಲಿ ಭಾಷಿಕ ಶ್ರೆಷ್ಠತೆಯನ್ನು ಸ್ಥಾಪಿಸುವ ಪ್ರಯತ್ನಗಳಿಗೆ ಒಂದು ಇತಿಹಾಸವೇ ಇದೆ. ಪ್ರದೇಶಿಕ ಭಾಷೆಗಳಿಗೆ ಸ್ಥಾನಮಾನ ಸಿಗಬೇಕು. ಈ ಬಗ್ಗೆ ಕೇಂದ್ರ ಸರಕಾರ ಗಮನಹರಿಸಬೇಕು ಎಂದರು.

ಅಕ್ಷರ ಬಲ್ಲವರಲ್ಲೂ ಸಹ ಕನ್ನಡ ಭಾಷೆ ಬಗ್ಗೆ ಕೀಳಿರಿಮೆ ಇದೆ. ಕಲಿಕೆ ಭಾಷೆಯ ಬಗ್ಗೆ ತಾರತಮ್ಯ ಬೇಡ. ನಾವು ಕನ್ನಡ ಕಲಿತರೆ ಕೀಳು ಎಂಬುವುದು ನಮ್ಮ ಮನಸ್ಸಿನಿಂದ ದೂರವಾಗಬೇಕು. ಇಂಗ್ಲಿಷ್ ಭಾಷೆಯನ್ನು ಕಲಿತವರು ಬುದ್ದಿ ಜೀವಿಗಳೆಂಬ ಭ್ರಮೆಯಿಂದ ಹೊರಬನ್ನಿ. ಕನ್ನಡ ನಮ್ಮ ತಾಯಿ ಭಾಷೆಯಾಗಿದೆ. ನೋವಿನ ತುಡಿಗಳನ್ನು ಹಾಗೂ ಮನದಲ್ಲಿ ಅನುಭವಿಸಿ ಅಕ್ಷರದ ರೂಪದಲ್ಲಿ ಕೃತಿಗೆ ಇಳಿದಾಗ ಅದೊಂದು ಕನ್ನಡ ಬರವಣಿಗೆಯ ಶಕ್ತಿಯೇ ಬೇರೆಯಾಗಿರುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ರಾಜ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳು ಕನ್ನಡ ಮಾಧ್ಯಮಕ್ಕೆ ಆದ್ಯತೆ ನೀಡಬೇಕು. ಕನ್ನಡ ಬೆಳವಣಿಗೆಗೆ ಕನ್ನಡ ನುಡಿ ಸಮ್ಮೇಳನಗಳ ಅಗತ್ಯತೆ ಇದೆ. ಕನ್ನಡ ಭಾಷೆಗೆ ಅದರದೇ ಆದಂತಹ ಇತಿಹಾಸವಿದೆ. ಆದರೆ, ಈಗಿನ ಕೇಂದ್ರ ಸರಕಾರ ಹಿಂದಿ ಏರಿಕೆ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿದಿದೆ. ಆದರೆ, ಅದು ತಪ್ಪು ತಿಳುವಳಿಕೆ ಎಂದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಜನಿ ನರಹಳ್ಳಿ, ಕೆ.ಟಿ.ನಾಗರಾಜ್, ಡಾ.ವೆಂಕಟೇಶ್, ಎಂ.ರಾವ್, ಎಂ.ಕೆ.ಮುರುಳಿ, ಕೆ.ಅಕ್ಕಮಹಾದೇವಿ, ಪಿ. ಚಂದ್ರವೇಲು, ಬಿ.ಭರತ್, ರಾಮಲಿಂಗ ಶೆಟ್ಟಿ, ಮಾಲ್ತೇಶ್ ಜನಗಲ್ ಹಾಗೂ ಸಿ. ಮುರುಳಿಧರ್ ಅವರಿಗೆ ಕದಂಬ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ್ ಜೀವನ್ಮುಖಿ, ವಿಮರ್ಶಕ ಪ್ರೊ.ಬೈರಮಂಗಲ ರಾಮೇಗೌಡ, ಮಾಜಿ ಕನ್ನಡ ನುಡಿ ಸಮ್ಮೇಳನಾಧ್ಯಕ್ಷ ಡಾ.ಬಿ.ಎಚ್.ಸತೀಶ್ ಗೌಡ, ಮಂಡ್ಯ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News