ಶೂದ್ರ ಸಮುದಾಯ ಒಗ್ಗಟ್ಟಾಗಿ ಸ್ವಾಭಿಮಾನದಿಂದ ಬದುಕಲಿ: ಸಂಜಯಕುಮಾರ ಸ್ವಾಮೀಜಿ

Update: 2019-12-08 17:45 GMT

ಬೆಂಗಳೂರು, ಡಿ.8: ಶೂದ್ರ ಸಮುದಾಯ ಎಲ್ಲ ವಿಧದಿಂದಲೂ ಶಕ್ತಿಯುತವಾಗಿದ್ದು, ಒಗ್ಗಟ್ಟಾಗುವ ಮೂಲಕ ಸ್ವಾಭಿಮಾನದ ಬದುಕನ್ನು ರೂಢಿಸಿಕೊಳ್ಳಬೇಕೆಂದು ಶಿರಾ ತಾಲೂಕಿನ ಸಂಜಯಕುಮಾರ ಸ್ವಾಮೀಜಿ ತಿಳಿಸಿದ್ದಾರೆ. 

ರವಿವಾರ ಕರ್ನಾಟಕ ರಾಜ್ಯ ವಾಲ್ಮೀಕಿ, ನಾಯಕ ಸಂಘಗಳ ಒಕ್ಕೂಟದ ರಾಜ್ಯದ ಯುವ ಘಟಕವು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೂದ್ರ ಜನಾಂಗದಲ್ಲಿ ಹುಟ್ಟಿದ ವಾಲ್ಮೀಕಿ ವಿದ್ಯೆಯ ಗಣಿಯಾಗಿ ದಿಗಂತದಾಚೆಗೆ ಬೆಳೆದವರು. ರಾಮಾಯಣದಂತಹ ಕಾವ್ಯದ ಮೂಲಕ ಸಾಮಾಜಿಕ ಸಂವಿಧಾನವನ್ನು ರಚಿಸಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಚಿಂತನೆಯನ್ನು ವಾಲ್ಮೀಕಿ ಸಮುದಾಯದ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿಶ್ರಾಂತ ನಿರ್ದೇಶಕ ಕೆ.ಎಸ್. ಮೃತ್ಯುಂಜಯ ಮಾತನಾಡಿ, ವಿಶ್ವದ ಮೊದಲ ಕವಿಯಾದ ವಾಲ್ಮೀಕಿ ಪರಿಶಿಷ್ಟ ವರ್ಗದವರಾಗಿದ್ದು, ಮೊದಲ ಬಾರಿಗೆ ಸಂಸ್ಕೃತದಲ್ಲಿ ರಾಮಾಯಣ ಮಹಾಕಾವ್ಯ ರಚಿಸಿ, ತಾವು ಯಾರಿಗೂ ಕಡಿಮೆಯಿಲ್ಲವೆಂದು ಸಾರಿ ಹೇಳಿದ್ದಾರೆ. ಇವರ ಕೊಡುಗೆ ಇಡೀ ವಾಲ್ಮೀಕಿ ಸಮುದಾಯಕ್ಕೆ ಸ್ವಾಭಿಮಾನದ ಪ್ರತೀಕವಾಗಿದೆ ಎಂದರು.

ವಾಲ್ಮೀಕಿ ಸಮುದಾಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಕ್ಕುಗಳು ಮರೀಚಿಕೆಯಾಗಿಯೇ ಉಳಿದಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆತ್ತಿಲ್ಲ. ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ಹೊಂದುವಂತೆ ಮೀಸಲಾತಿ ಪ್ರಮಾಣದಲ್ಲೂ ಹೆಚ್ಚಾಗಬೇಕಾಗಿದೆ. ಇದಕ್ಕೆ ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿದರು. ಈ ವೇಳೆ ಶಾಸಕ ಎಂ.ಕೃಷ್ಣಪ್ಪ, ಬೆಂಗಳೂರು ಮಹಾನಗರ ಪ್ರವೇಶಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎನ್.ಕೆ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News