ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಟೆಸ್ಟ್ ತಂಡ ಪ್ರಕಟ

Update: 2019-12-08 18:51 GMT

ಮೆಲ್ಬೋರ್ನ್, ಡಿ.8: ಜೇಮ್ಸ್ ಆ್ಯಂಡರ್ಸನ್, ಜಾನಿ ಬೈರ್‌ಸ್ಟೋವ್ ಹಾಗೂ ಮಾರ್ಕ್‌ವುಡ್ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್‌ನ 17 ಸದಸ್ಯರನ್ನು ಒಳಗೊಂಡ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಆ್ಯಂಡರ್ಸನ್ ಹಾಗೂ ವುಡ್ ಗಾಯದ ಸಮಸ್ಯೆಯ ಕಾರಣಕ್ಕೆ ನ್ಯೂಝಿಲ್ಯಾಂಡ್ ಪ್ರವಾಸದಿಂದ ವಂಚಿತರಾಗಿದ್ದರು. ಟೆಸ್ಟ್ ಪಂದ್ಯಕ್ಕೆ ಸಜ್ಜಾಗಲು ಬೈರ್‌ಸ್ಟೋವ್‌ಗೆ ವಿಶ್ರಾಂತಿ ನೀಡಲಾಗಿತ್ತು. ಈ ಮೂವರು ದಕ್ಷಿಣ ಆಫ್ರಿಕಾದ ಅಭ್ಯಾಸ ತಂಡದಲ್ಲಿದ್ದಾರೆ.

ವುಡ್ ಆಯ್ಕೆಗೆ ಸಂಪೂರ್ಣ ಫಿಟ್ ಇದ್ದಾರೆ. 2019ರಲ್ಲಿ ಸೈಂಟ್ ಲೂಸಿಯದಲ್ಲಿ ವುಡ್ ಆಡಿದ್ದ ಏಕೈಕ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು.

ಮೊಯಿನ್ ಅಲಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇತ್ತೀಚೆಗೆ ರನ್‌ಗಾಗಿ ಪರದಾಡುತ್ತಿರುವ ಅಲಿ ತನಗೆ ವಿಶ್ರಾಂತಿ ನೀಡುವಂತೆ ಕೇಳಿಕೊಂಡಿದ್ದರು. ಶ್ರೀಲಂಕಾ ಪ್ರವಾಸದ ವೇಳೆ ಅಲಿ ತಂಡಕ್ಕೆ ವಾಪಸಾಗುವ ಸಾಧ್ಯತೆಯಿದೆ.

ಅಲಿ ಅನುಪಸ್ಥಿತಿಯಲ್ಲಿ ಮ್ಯಾಟ್ ಪಾರ್ಕಿನ್‌ಸನ್ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ತಂಡದೊಂದಿಗೆ ತೆರಳಿದ್ದರು. ಹ್ಯಾಮಿಲ್ಟನ್ ಟೆಸ್ಟ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದ ಝಾಕ್ ಕ್ರಾವ್ಲಿ ಮೀಸಲು ಬ್ಯಾಟ್ಸ್ ಮನ್ ಆಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಡೇವಿಡ್ ಮಲಾನ್‌ಗೆ ಸ್ಥಾನ ನೀಡಲಾಗಿಲ್ಲ.

ಆ್ಯಂಡರ್ಸನ್ ಹಾಗೂ ವುಡ್ ತಂಡಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಲಂಕಾಶೈರ್ ವೇಗದ ಬೌಲ್ ಸಾಖಿಬ್ ಮಹಮೂದ್ ಸ್ಥಾನ ಕಳೆದುಕೊಂಡಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ಇದೇ ಮೊದಲ ಬಾರಿ ವಿದೇಶಿನೆಲದಲ್ಲಿ ಆಡುತ್ತಿದೆ. ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಸೆಂಚೂರಿಯನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಆಡುವ ಮೂಲಕ ಟೆಸ್ಟ್ ಸರಣಿ ಆರಂಭವಾಗಲಿದೆ.

ಇಂಗ್ಲೆಂಡ್ ತಂಡ: ಜೋ ರೂಟ್(ನಾಯಕ), ಜೇಮ್ಸ್ ಆ್ಯಂಡರ್ಸನ್, ಜೋಫ್ರಾ ಅರ್ಚರ್, ಜಾನಿ ಬೈರ್‌ಸ್ಟೋವ್, ಸ್ಟುವರ್ಟ್ ಬ್ರಾಡ್, ರೊರಿ ಬರ್ನ್ಸ್,ಜೋಸ್ ಬಟ್ಲರ್, ಝಾಕ್ ಕ್ರಾವ್ಲೇ, ಸ್ಯಾಮ್ ಕರನ್, ಜೋ ಡೆನ್ಲೀ, ಜಾಕ್ ಲೀಚ್, ಮ್ಯಾಥ್ಯೂ ಪಾರ್ಕಿನ್ಸನ್, ಒಲ್ಲಿ ಪೋಪ್, ಡೊಮಿನಿಕ್ ಸಿಬ್ಲೆ, ಬೆನ್‌ಸ್ಟೋಕ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News